ವಿಜಯ್ ಮರ್ಚೆಂಟ್ ಟ್ರೋಫಿ | ಬೌಲಿಂಗ್ನಲ್ಲಿ ಮಿಂಚಿದ ವೀರೇಂದ್ರ ಸೆಹ್ವಾಗ್ ಕಿರಿಯ ಪುತ್ರ ವೇದಾಂತ್

ವೇದಾಂತ್ ಸೆಹ್ವಾಗ್ , ವೀರೇಂದ್ರ ಸೆಹ್ವಾಗ್ , ಆರ್ಯವೀರ್ ಸೆಹ್ವಾಗ್ | PC : timesofindia
ಹೊಸದಿಲ್ಲಿ : ತನ್ನ ತಂದೆ ವೀರೇಂದ್ರ ಸೆಹ್ವಾಗ್ ರ ಕ್ರಿಕೆಟ್ ಪರಂಪರೆಯನ್ನು ಮುಂದುವರಿಸಿರುವ 14ರ ಹರೆಯದ ವೇದಾಂತ್ ಸೆಹ್ವಾಗ್ ಶನಿವಾರ ವಿಜಯ್ ಮರ್ಚೆಂಟ್ ಟ್ರೋಫಿಯಲ್ಲಿ ದಿಲ್ಲಿಯ ಅಂಡರ್-16 ತಂಡದ ಪರ ನಾಲ್ಕು ವಿಕೆಟ್ ಗೊಂಚಲು ಪಡೆದು ತನ್ನ ಪ್ರತಿಭೆಯನ್ನು ತೋರ್ಪಡಿಸಿದ್ದಾರೆ.
ಶಿವಮೊಗ್ಗದಲ್ಲಿ ಬಲಿಷ್ಠ ಪಂಜಾಬ್ ತಂಡ ತನ್ನ ಮೊದಲ ಇನಿಂಗ್ಸ್ನಲ್ಲಿ 469 ರನ್ ಗಳಿಸಿದ್ದರೂ ವೇದಾಂತ್ ಅವರು ಬೌಲಿಂಗ್ನಲ್ಲಿ ಮಿಂಚಿದ್ದಾರೆ.
ಆಫ್ ಸ್ಪಿನ್ನರ್ ವೇದಾಂತ್ ಅವರು ಪಂಜಾಬ್ ತಂಡದ ಬ್ಯಾಟಿಂಗ್ ಅಬ್ಬರಕ್ಕೆ ಕಡಿವಾಣ ಹಾಕಿದರು. ಗುರ್ಸಿಮ್ರಾನ್ ಸಿಂಗ್(196 ರನ್)ಹಾಗೂ ಅದ್ವಿಕ್ ಸಿಂಗ್(90 ರನ್)ಮೊದಲ ವಿಕೆಟ್ಗೆ 163 ರನ್ ಜೊತೆಯಾಟ ನಡೆಸಿದ್ದರು. ಅದ್ವಿಕ್ ವಿಕೆಟನ್ನು ಉರುಳಿಸಿದ ವೇದಾಂತ್ ಈ ಜೋಡಿಯನ್ನು ಬೇರ್ಪಡಿಸಿದರು. ಆನಂತರ ಅರವಿಂದ್ ಸಿಂಗ್(56ರನ್), ಶತಕವೀರ ಗುರುಸಿಮ್ರಾನ್ ಹಾಗೂ ಸಕ್ಷೇಯ ವಿಕೆಟ್ಗಳನ್ನು ಪಡೆದು 4 ವಿಕೆಟ್ ಗೊಂಚಲು ಪಡೆದರು.
40 ಓವರ್ ಬೌಲಿಂಗ್ ಮಾಡಿದ ವೇದಾಂತ್ 10 ಮೇಡನ್ ಎಸೆದು 140 ರನ್ ಬಿಟ್ಟುಕೊಟ್ಟರು. ಅವರ ಸ್ಪೆಲ್ನಲ್ಲಿ 178 ಡಾಟ್ಬಾಲ್ ಗಳಿದ್ದವು. ಇದು ದೀರ್ಘ ಸ್ಪೆಲ್ನಲ್ಲಿ ಹಿಡಿತ ಕಾಯ್ದುಕೊಂಡು, ಬ್ಯಾಟರ್ಗಳಿಗೆ ಸವಾಲಾಗುವ ಸಾಮರ್ಥ್ಯವನ್ನು ತೋರಿಸುತ್ತಿದೆ. ಪ್ರಿನ್ಸ್ ಮಿಶ್ರಾ(4-97)ಜೊತೆಗೆ ವೇದಾಂತ್ ಅವರ ಪ್ರಯತ್ನದ ಫಲವಾಗಿ ದಿಲ್ಲಿ ತಂಡ ಹೋರಾಟವನ್ನು ಮುಂದುವರಿಸಿದೆ.
ಸೆಹ್ವಾಗ್ ಅವರ ಹಿರಿಯ ಪುತ್ರ ಆರ್ಯವೀರ್ ಸೆಹ್ವಾಗ್ ಕೂಚ್ ಬೆಹಾರ್ ಟ್ರೋಫಿಯಲ್ಲಿ ದಿಲ್ಲಿಯ ಅಂಡರ್-19 ತಂಡದ ಪರ 297 ರನ್ ಗಳಿಸಿದ ಕೆಲವೇ ವಾರಗಳ ನಂತರ ವೇದಾಂತ್ರಿಂದ ಉತ್ತಮ ಪ್ರದರ್ಶನ ಮೂಡಿಬಂದಿದೆ. 17 ಹರೆಯದ ಆರ್ಯವೀರ್ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿದರೆ, ವೇದಾಂತ್ ಚೆಂಡಿನಲ್ಲಿ ಶಿಸ್ತು ಹಾಗೂ ಬದ್ಧತೆ ಪ್ರದರ್ಶಿಸಿದ್ದಾರೆ.







