ಡೆನ್ಮಾರ್ಕ್ ಬ್ಯಾಡ್ಮಿಂಟನ್ ದಂತಕತೆ ವಿಕ್ಟರ್ ಅಕ್ಸೆಲ್ಸೆನ್ ನಿವೃತ್ತಿ

Photo : PTI
ಚೆನ್ನೈ, ಎ.15: ಎರಡು ಬಾರಿಯ ಒಲಿಂಪಿಕ್ಸ್ ಹಾಗೂ ವಿಶ್ವ ಚಾಂಪಿಯನ್ ವಿಕ್ಟರ್ ಅಕ್ಸೆಲ್ಸೆನ್ ತನ್ನ 32ನೇ ವಯಸ್ಸಿನಲ್ಲಿ ವೃತ್ತಿಪರ ಬ್ಯಾಡ್ಮಿಂಟನ್ಗೆ ನಿವೃತ್ತಿ ಪ್ರಕಟಿಸಿದ್ದಾರೆ.
ಬುಧವಾರದ ತನ್ನ ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ಡೆನ್ಮಾರ್ಕ್ ಆಟಗಾರ ವಿಕ್ಟರ್, ‘‘ಇಂದು ನನಗೆ ಕಷ್ಟದ ದಿನವಾಗಿದೆ. ನನ್ನ ಬೆನ್ನುನೋವಿನಿಂದಾಗಿ ದೀರ್ಘಕಾಲ ಉನ್ನತ ಮಟ್ಟದಲ್ಲಿ ನನಗೆ ಸ್ಪರ್ಧಿಸಲು ಹಾಗೂ ತರಬೇತಿ ನಡೆಸಲು ಸಾಧ್ಯವಾಗುತ್ತಿಲ್ಲ. ಈ ಪರಿಸ್ಥಿತಿಯನ್ನು ಸ್ವೀಕರಿಸುವುದು ತುಂಬಾ ಕಷ್ಟಕರ. ನನ್ನ ದೇಹವು ಕ್ರೀಡೆಯಲ್ಲಿ ಮುಂದುವರಿಯಲು ಅವಕಾಶ ನೀಡುತ್ತಿಲ್ಲ’’ ಎಂದರು.
ವಿಕ್ಟರ್ ಅಕ್ಸೆಲ್ಸೆನ್ 2010ರಲ್ಲಿ ಜೂನಿಯರ್ ವಿಶ್ವ ಚಾಂಪಿಯನ್ ಆಗುವ ಮೂಲಕ ಬೆಳಕಿಗೆ ಬಂದಿದ್ದರು.
ಟೋಕಿಯೊ(2021)ಹಾಗೂ ಪ್ಯಾರಿಸ್(2024)ನಲ್ಲಿ ನಡೆದಿದ್ದ ಒಲಿಂಪಿಕ್ ಗೇಮ್ಸ್ಗಳಲ್ಲಿ ಸತತ ಚಿನ್ನದ ಪದಕಗಳನ್ನು ಗೆದ್ದಿದ್ದರು. 2016ರಲ್ಲಿ ರಿಯೋ ಡಿ ಜನೈರೊದಲ್ಲಿ ನಡೆದಿದ್ದ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದಿದ್ದರು. 2017 ಹಾಗೂ 2022ರಲ್ಲಿ ಎರಡು ವಿಶ್ವ ಚಾಂಪಿಯನ್ಶಿಪ್ ಪ್ರಶಸ್ತಿಗಳನ್ನು ಜಯಿಸಿದ್ದರು. 2021 ಹಾಗೂ 2023ರ ನಡುವೆ ಸತತ ಮೂರು ಬಾರಿ ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಫೈನಲ್ಸ್ನಲ್ಲಿ ವಿಜಯಿಯಾಗಿದ್ದರು.
ಮೂರು ಬಾರಿಯ ಯುರೋಪಿಯನ್ ಚಾಂಪಿಯನ್ ಅಕ್ಸೆಲ್ಸೆನ್ 2016ರಲ್ಲಿ ಡೆನ್ಮಾರ್ಕ್ ತಂಡವು ತನ್ನ ಚೊಚ್ಚಲ ಥಾಮಸ್ ಕಪ್ ಪ್ರಶಸ್ತಿ ಗೆಲ್ಲುವಲ್ಲಿ ನೇತೃತ್ವವಹಿಸಿದ್ದರು.
ಪುರುಷರ ಬಿಡಬ್ಲ್ಯುಎಫ್ ರ್ಯಾಂಕಿಂಗ್ನಲ್ಲಿ ಒಟ್ಟು 183 ವಾರಗಳ ಕಾಲ ನಂ.1 ಆಟಗಾರನಾಗಿದ್ದರು. ಮಲೇಶ್ಯದ ಲೀ ಚೊಂಗ್ ವೀ(398)ಹಾಗೂ ಚೀನಾದ ಲಿನ್ ಡಾನ್(211) ನಂತರ ದೀರ್ಘಕಾಲ ಅಗ್ರ ಸ್ಥಾನದಲ್ಲಿದ್ದ ಮೂರನೇ ಆಟಗಾರನಾಗಿದ್ದಾರೆ.
‘‘ನಾನು ರಾಕೆಟ್ ಹಿಡಿದ ದಿನದಿಂದಲೇ ವಿಶ್ವದ ಅತ್ಯುತ್ತಮ ಆಟಗಾರನಾಗುವುದು ನನ್ನ ಕನಸಾಗಿತ್ತು. ನಾನು ಈ ಕ್ರೀಡೆಗಾಗಿ ಎಲ್ಲವನ್ನೂ ನೀಡಿದ್ದೇನೆ. ಇದು ನನಗೆ ಕೇವಲ ವೃತ್ತಿಜೀವನವಾಗಿರಲಿಲ್ಲ. ಇದು ನನ್ನ ಜೀವನವಾಗಿತ್ತು. ನಾನು ಯಾವುದೇ ಅವಕಾಶ ಬಿಟ್ಟುಕೊಟ್ಟಿಲ್ಲ’’ ಎಂದು ಕಳೆದ ವರ್ಷ ಅಕ್ಟೋಬರ್ನಲ್ಲಿ ಫ್ರೆಂಚ್ ಓಪನ್ನಿಂದ ಹೊರಗುಳಿದಿದ್ದ ಅಕ್ಸೆಲ್ಸೆನ್ ಹೇಳಿದ್ದಾರೆ.






