ಮೀನಾಕ್ಷಿ ವಿರುದ್ಧ ಸೆಮಿಫೈನಲ್ ನಲ್ಲಿ ವಿನೇಶ್ ಗೆ ಸೋಲು; ಏಷ್ಯನ್ ಗೇಮ್ಸ್ ಟ್ರಯಲ್ಸ್ ನಿಂದ ನಿರ್ಗಮನ

ವಿನೇಶ್ ಫೋಗಟ್ | Photo Credit : PTI
ಹೊಸದಿಲ್ಲಿ, ಮೇ 30: ಇಲ್ಲಿನ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಮಹಿಳೆಯರ 53 ಕೆಜಿ ವಿಭಾಗದ ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್ ನಲ್ಲಿ ಏಷ್ಯನ್ ಕಂಚಿನ ಪದಕ ವಿಜೇತೆ ಮೀನಾಕ್ಷಿ ಗೋಯತ್ ವಿರುದ್ಧ ಸೆಮಿಫೈನಲ್ನಲ್ಲಿ 4–6 ಅಂತರದಿಂದ ಸೋತ ವಿನೇಶ್ ಫೋಗಟ್, 2026ರ ಏಷ್ಯನ್ ಗೇಮ್ಸ್ ಗೆ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಅವಕಾಶ ಕಳೆದುಕೊಂಡರು.
53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ವಿಶೇಷ ಅನುಮತಿ ಪಡೆದಿದ್ದ ವಿನೇಶ್ ಗೆ ಇದು ಪ್ರಮುಖ ದಿನವಾಗಿತ್ತು. ವಿವಿಧ ಸುತ್ತುಗಳನ್ನು ಯಶಸ್ವಿಯಾಗಿ ದಾಟಿ ಕೊನೆಯ ನಾಲ್ವರ ಹಂತ ತಲುಪಿದ್ದ ಅವರು, ಸೆಮಿಫೈನಲ್ ನಲ್ಲಿ ಮೀನಾಕ್ಷಿ ವಿರುದ್ಧ ಸೋಲುವುದರೊಂದಿಗೆ ಅಭಿಯಾನ ಅಂತ್ಯಗೊಳಿಸಿದರು.
ಹರಿಯಾಣದ ಜ್ಯೋತಿ ವಿರುದ್ಧ 7–1 ಅಂತರದ ಗೆಲುವಿನೊಂದಿಗೆ ವಿನೇಶ್ ತಮ್ಮ ಅಭಿಯಾನ ಆರಂಭಿಸಿದರು. ಬಳಿಕ ಕ್ವಾರ್ಟರ್ ಫೈನಲ್ ನಲ್ಲಿ ನಿಶು ವಿರುದ್ಧ ಕಠಿಣ ಪೈಪೋಟಿ ನಡೆಸಿ ಜಯ ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದರು.
ನಿಶು ವಿರುದ್ಧದ ಪಂದ್ಯದಲ್ಲಿ ಆರಂಭಿಕ ಅವಧಿಯಲ್ಲೇ 0–5 ಅಂತರದಿಂದ ಹಿನ್ನಡೆ ಅನುಭವಿಸಿದ್ದ ವಿನೇಶ್, ನಂತರ ಹೋರಾಟ ಮಾಡುವ ಮೂಲಕ ಮರಳಿದರು. ನಾಲ್ಕು ಪಾಯಿಂಟ್ ಗಳ ಥ್ರೋ ದಾಖಲಿಸಿದ್ದ ನಿಶು, ಮಾಜಿ ವಿಶ್ವ ಚಾಂಪಿಯನ್ಷಿಪ್ ಪದಕ ವಿಜೇತೆಯಾಗಿರುವ ವಿನೇಶ್ ಅವರನ್ನು ಸೋಲಿಸುವ ಹಂತಕ್ಕೆ ತಲುಪಿದ್ದರು. ಆದರೂ ವಿನೇಶ್ ಪೈಪೋಟಿಯಲ್ಲಿ ಉಳಿಯುವಲ್ಲಿ ಯಶಸ್ವಿಯಾದರು.
ಪಂದ್ಯದ ವೇಳೆ ಹಲವು ಬಾರಿ ಸವಾಲುಗಳು ಹಾಗೂ ಪ್ರದರ್ಶನ ಪರದೆಯ ತಾಂತ್ರಿಕ ಸಮಸ್ಯೆಗಳು ಎದುರಾಗಿದ್ದರಿಂದ ಆಟಕ್ಕೆ ದೀರ್ಘ ವಿರಾಮಗಳು ಉಂಟಾದವು. ನಿಶು ಪರಿಣಾಮಕಾರಿ ಹಾಫ್–ಹೆಡ್ ಲಾಕ್ಗಳ ಮೂಲಕ ಪಂದ್ಯದ ಬಹುಭಾಗದಲ್ಲಿ ನಿಯಂತ್ರಣ ಸಾಧಿಸಿದ್ದರು. ಆದರೆ ಎರಡನೇ ಅವಧಿಯಲ್ಲಿ ವಿನೇಶ್ ತಮ್ಮದೇ ನಾಲ್ಕು ಪಾಯಿಂಟ್ಗಳ ಥ್ರೋ ದಾಖಲಿಸಿ ಪಂದ್ಯದ ದಿಕ್ಕು ಬದಲಿಸಿದರು.
ಈ ಗೆಲುವಿನೊಂದಿಗೆ ಸೆಮಿಫೈನಲ್ ಪ್ರವೇಶಿಸಿದ್ದ ವಿನೇಶ್, ಮೀನಾಕ್ಷಿ ಗೋಯತ್ ವಿರುದ್ಧದ ಸೆಣಸಾಟದಲ್ಲಿ 4–6 ಅಂತರದಿಂದ ಸೋತರು. ಇದರೊಂದಿಗೆ ಏಷ್ಯನ್ ಗೇಮ್ಸ್ ತಂಡದಲ್ಲಿ ಸ್ಥಾನ ಪಡೆಯುವ ಅವರ ಭರವಸೆ ಅಂತ್ಯಗೊಂಡಿತು.






