Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕ್ರೀಡೆ
  4. ಪದಕಗಳನ್ನು ಮೀರಿದ ಶ್ರೇಷ್ಠ ಕ್ರೀಡಾಪಟು...

ಪದಕಗಳನ್ನು ಮೀರಿದ ಶ್ರೇಷ್ಠ ಕ್ರೀಡಾಪಟು ವಿನೇಶ್ ಫೋಗಟ್

ವಾರ್ತಾಭಾರತಿವಾರ್ತಾಭಾರತಿ16 Aug 2024 11:52 AM IST
share
ಪದಕಗಳನ್ನು ಮೀರಿದ ಶ್ರೇಷ್ಠ ಕ್ರೀಡಾಪಟು ವಿನೇಶ್ ಫೋಗಟ್
ವಿನೇಶ್ ಫೋಗಟ್ ಅಸಾಮಾನ್ಯ ಹೋರಾಟಗಾರ್ತಿ, ಛಲಗಾರ್ತಿ, ಅಪ್ಪಟ ಪ್ರತಿಭಾವಂತೆ, ಇಡೀ ದೇಶದ ಯುವಜನರಿಗೆ ಸ್ಫೂರ್ತಿ, ಬಹುದೊಡ್ಡ ಪ್ರೇರಣೆ. ಅವರು ಇನ್ನೂ ಹಲವು ಪೀಳಿಗೆಗಳು ನೆನಪಿಡುವ, ಮಾದರಿ ಎಂದು ಅನುಸರಿಸುವ ಮಹಾನ್ ಕ್ರೀಡಾಪಟು. ಒಲಿಂಪಿಕ್ಸ್ ಚಿನ್ನದ ಪದಕ ಆಕೆಯ ಅಮೋಘ ಸಾಧನೆ ಎದುರು ಏನೇನೂ ಅಲ್ಲ. ಆಕೆ ಅದೆಲ್ಲವನ್ನೂ ಮೀರಿದ ಶ್ರೇಷ್ಠ ಕ್ರೀಡಾಪಟು.

✍️ ಎ.ಎಸ್.

‘‘ಸೆಂಡ್ ಹರ್ ಟು ಬಾಂಗ್ಲಾದೇಶ್’’,

‘‘ಲೆಫ್ಟಿಸ್ಟ್ ವಿನೇಶ್ ಡಿಸರ್ವ್ಸ್ ನಥಿಂಗ್’’

‘‘ಪ್ರೌಡ್ ಡೇ ಫಾರ್ ಬಿಜೆಪಿ ಇಂಡಿಯಾ’’

‘‘ಬೆಸ್ಟ್ ಡಿಸಿಷನ್ ಎವರ್’’

‘‘ದಬಾಕೆ ಖಾಯಾ ಹೋಗಾ ಮುರ್ಗಾ’’...

ಇವು ಮತ್ತು ಇದಕ್ಕಿಂತ ಕೆಟ್ಟ ಇನ್ನೂ ಅನೇಕ ಕಮೆಂಟ್‌ಗಳು ಬಂದಿರುವುದು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಪಡೆಯುವ ಅವಕಾಶ ವಂಚಿತ ಭಾರತೀಯ ಕುಸ್ತಿಪಟು ವಿನೇಶ್ ಫೋಗಟ್ ಬಗ್ಗೆ.

ವಿನೇಶ್ ಫೋಗಟ್ ಎಂಬ ದಿಟ್ಟೆ, ಛಲಗಾತಿ, ಅಸಾಮಾನ್ಯ ಕುಸ್ತಿಪಟು ಮಹೋನ್ನತ ಜಾಗತಿಕ ಕ್ರೀಡಾಕೂಟದ ಅಂತಿಮ ಸುತ್ತು ತಲುಪಿ ಅಲ್ಲಿ ಅದೃಷ್ಟ ಕೈಕೊಟ್ಟಾಗ ದೇಶವಾಸಿಗಳಿಂದ ಎದುರಿಸಬೇಕಾದ ಮಾತುಗಳು ಇವು.

ಆದರೆ ಎಲ್ಲರೂ ಈ ರೀತಿ ಮಾತಾಡುವುದಿಲ್ಲ, ವಿನೇಶ್‌ರನ್ನು ಪ್ರಶಂಸಿಸುವ, ಆಕೆಯ ಬಗ್ಗೆ ಹೆಮ್ಮೆ ಪಟ್ಟುಕೊಳ್ಳುವವರೇ ಹೆಚ್ಚಿದ್ದಾರೆ ಎಂಬುದೂ ಸತ್ಯ. ಆದರೆ ದೇಶಕ್ಕೆ ಜಾಗತಿಕ ಕ್ರೀಡಾಕೂಟದಲ್ಲಿ ಕೀರ್ತಿ ತಂದ, ಯಾವುದೇ ಒಲಿಂಪಿಕ್ಸ್ ಚಿನ್ನ ವಿಜೇತರಿಗಿಂತ ಹೆಚ್ಚು ಪ್ರೀತಿ, ಗೌರವಕ್ಕೆ ಪಾತ್ರರಾದ ಒಬ್ಬ ಕ್ರೀಡಾಪಟು ಬಗ್ಗೆ ಮುಲಾಜಿಲ್ಲದೆ, ಅಂಜಿಲ್ಲದೆ, ಅಳುಕಿಲ್ಲದೆ ಅತ್ಯಂತ ಕೀಳು ಮಟ್ಟದಲ್ಲಿ ಮಾತಾಡುವವರೂ ದೊಡ್ಡ ಸಂಖ್ಯೆಯಲ್ಲಿ ನಮ್ಮ ನಡುವೆಯೇ ಇದ್ದಾರೆ ಎಂಬುದೂ ಅಷ್ಟೇ ಸತ್ಯ.

‘‘ಕುಸ್ತಿಪಟುಗಳ ಪ್ರತಿಭಟನೆಯಿಂದಾಗಿ ಭಾರತಕ್ಕೆ ಈ ಬಾರಿ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇನ್ನೂ ಕೆಲವು ಪದಕಗಳು ಬರುವುದು ತಪ್ಪಿ ಹೋಯಿತು’’ ಎಂದು ಹೇಳಿದ್ದಾರೆ ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ ಸಂಜಯ್ ಸಿಂಗ್.

ವಿನೇಶ್ ಬಗ್ಗೆಯೂ ಅವರು ‘‘ಆ ಕೆಟಗರಿಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ ಮೇಲೆ ಆ ತೂಕ ಕಾಪಾಡಿಕೊಳ್ಳುವುದು ಅವರದೇ ಕರ್ತವ್ಯವಾಗಿತ್ತು’’ ಎಂದಿದ್ದಾರೆ.

ಅಂದರೆ ಅವರು ಲೈಂಗಿಕ ದೌರ್ಜನ್ಯದ ವಿರುದ್ಧ ಹಾಗೂ ನ್ಯಾಯಕ್ಕಾಗಿ ಹೋರಾಡಿದ ಕುಸ್ತಿ ಪಟುಗಳನ್ನೇ ಕಟಕಟೆಯಲ್ಲಿ ನಿಲ್ಲಿಸುವ ಮಾತಾಡಿದ್ದಾರೆ. ಕುಸ್ತಿ ಫೆಡೆರೇಶನ್‌ನಲ್ಲಿ ನಡೆದ ಅನ್ಯಾಯದ ಬಗ್ಗೆ ಅವರಿಗೆ ಒಂದಿಷ್ಟೂ ಕಳಕಳಿ ಇಲ್ಲ.

ಹಾಗಾಗಿ ಈಗ ವಿನೇಶ್ ವಿರುದ್ಧ ಆನ್‌ಲೈನ್ ಟ್ರೋಲಿಂಗ್‌ನಲ್ಲಿ ನಿರತರಾದವರು ಯಾರು ಎಂಬುದು ಸ್ಪಷ್ಟ.

ವಿನೇಶ್ ಫೋಗಟ್ ಬಗ್ಗೆ ಏನೇ ಮಾತಾಡುವ ಮೊದಲು ಈ ಟ್ರೊಲ್ ಪಡೆ, ಈ ದ್ವೇಷ ಭಕ್ತರು ಕೇವಲ ಒಂದೇ ಒಂದು ವಿಷಯವನ್ನಾದರೂ ಗಮನಿಸಬೇಕಿತ್ತು.

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 50 ಕೆಜಿ ವಿಭಾಗದ ಮಹಿಳೆಯರ ಕುಸ್ತಿಯ 16ರ ಸುತ್ತಿನಲ್ಲಿ ವಿನೇಶ್ ಫೋಗಟ್ ಸೋಲಿಸಿದ್ದು ಜಪಾನ್‌ನ ಯು ಸುಸಾಕಿಯನ್ನು.

ಈ ಸುಸಾಕಿ ನಾಲ್ಕು ಬಾರಿಯ ವಿಶ್ವ ಚಾಂಪಿಯನ್. ಆಕೆಯ ಹೆಸರಿನ ಎದುರು ಎಂದೂ ನಂಬರ್ 2 ಎಂದು ಬಂದೇ ಇಲ್ಲ. ಯಾವತ್ತೂ ವಿಶ್ವದ ನಂಬರ್ ಒನ್ ಕುಸ್ತಿಪಟು ಮಾತ್ರ ಆಗಿದ್ದವರು ಸುಸಾಕಿ.

ಪ್ಯಾರಿಸ್‌ನಲ್ಲಿ ವಿನೇಶ್ ಅನ್ನು ಎದುರಿಸುವ ಮೊದಲು ಸುಸಾಕಿ ಸ್ಪರ್ಧಿಸಿದ 82 ಅಂತರ್‌ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಒಂದೇ ಒಂದರಲ್ಲಿ ಆಕೆ ಸೋತಿರಲಿಲ್ಲ.

2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಆಕೆ ಚಿನ್ನ ಗೆದ್ದಿದ್ದರು. ಅದು ಹೇಗೆಂದರೆ ಒಂದೇ ಒಂದು ಪಾಯಿಂಟ್ ಎದುರಾಳಿಗೆ ಬಿಟ್ಟು ಕೊಡದೆ.

ಈ ಬಾರಿ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಸುಸಾಕಿಯೇ ಚಿನ್ನ ಗೆಲ್ಲುವುದು ಎಂದು ಮೊದಲೇ ಫಿಕ್ಸ್ ಆದಷ್ಟು ಖಚಿತವಿತ್ತು.

ಅಂತಹ ಗಟ್ಟಿಗಿತ್ತಿ, ಸೋಲಿಲ್ಲದ ಸರದಾರೆಯನ್ನೇ ಪ್ಯಾರಿಸ್‌ನಲ್ಲಿ ಹೆಡೆಮುರಿ ಕಟ್ಟಿದವರು ಭಾರತದ ವಿನೇಶ್ ಫೋಗಟ್.

ಆದರೆ ಫೈನಲ್‌ಗೆ ಮುನ್ನ ನಡೆದ ತೂಕ ಅಳತೆಯಲ್ಲಿ 50 ಕೆಜಿಗಿಂತ ನೂರು ಗ್ರಾಂ ಜಾಸ್ತಿ ಇದ್ದಿದ್ದರಿಂದ ವಿನೇಶ್ ಅನರ್ಹರಾಗಬೇಕಾಯಿತು. ಆಗ ಇಡೀ ದೇಶವೇ ಆಘಾತಕ್ಕೊಳಗಾಯಿತು. ಭಾರತಕ್ಕೆ ಖಚಿತ ಎಂಬಂತಿದ್ದ ಒಲಿಂಪಿಕ್ಸ್ ಕುಸ್ತಿ ಚಿನ್ನ ಕೈಗೆ ಬಂದಿದ್ದು ತಪ್ಪಿಹೋಯಿತು.

ಈಗ ತನ್ನ ಅನರ್ಹತೆಯ ವಿರುದ್ಧ ವಿನೇಶ್ ಫೋಗಟ್ ಸಲ್ಲಿಸಿರುವ ಮೇಲ್ಮನವಿಯನ್ನು ಕ್ರೀಡಾ ನ್ಯಾಯ ಮಂಡಳಿ(ಸಿಎಎಸ್)ಬುಧವಾರ ವಜಾಗೊಳಿಸಿದೆ ಎಂದು ವರದಿಯಾಗಿದೆ. ಈ ಮೂಲಕ ಭಾರತೀಯರಿಗೆ ಭಾರೀ ನಿರಾಸೆಯಾಗಿದೆ.

ಆದರೆ ಆ ಘೋರ ನಿರಾಸೆಯಲ್ಲೂ ಒಬ್ಬ ಭಾರತೀಯ ಚಾಂಪಿಯನ್‌ಗಾದ ಹಿನ್ನಡೆಯನ್ನು ಸಂಭ್ರಮಿಸುವ, ಖುಷಿ ಪಡುವ ಒಂದು ವಿಕೃತ ಪಡೆಯನ್ನು ಕಳೆದೊಂದು ದಶಕದಲ್ಲಿ ಇಲ್ಲಿನ ರಾಜಕೀಯ ಹಾಗೂ ವ್ಯವಸ್ಥೆ ಕಟ್ಟಿ ನಿಲ್ಲಿಸಿದೆ.

ಫೈನಲ್ ಪಂದ್ಯದ ಮೊದಲು ರಾತ್ರಿಯಿಡೀ ಒಂದು ಹನಿ ನೀರನ್ನೂ ಕುಡಿಯದೆ, ಒಂದು ಸೆಕೆಂಡ್ ಕೂಡ ನಿದ್ರೆ ಮಾಡದೆ ಸುಮಾರು ಎರಡು ಕೆಜಿ ತೂಕವನ್ನು ಇಳಿಸಿದ್ದರು ವಿನೇಶ್.

ಆಕೆಯ ಇಪ್ಪತ್ತನಾಲ್ಕು ವರ್ಷಗಳ ಕುಸ್ತಿ ಬದುಕನ್ನು ಹಾಗೂ ಅಪಾರ ಸಾಧನೆಯನ್ನು ಗೌರವಿಸದಿದ್ದರೂ ಆ ಒಂದು ರಾತ್ರಿ ಆಕೆ ಪಟ್ಟ ಅಗಾಧ ಶ್ರಮವನ್ನಾದರೂ ಆಕೆಯ ಬಗ್ಗೆ ಕೀಳಾಗಿ ಮಾತಾಡುವವರು ನೋಡಬೇಕಿತ್ತು.

ವಿನೇಶ್ 53 ಕೆಜಿ ಬಿಟ್ಟು 50 ಕೆಜಿ ವಿಭಾಗದಲ್ಲಿ ಸ್ಪರ್ಧಿಸುವುದು ಅನಿವಾರ್ಯವಾಗಿದ್ದು ಭಾರತದ ಕುಸ್ತಿ ಫೆಡೆರೇಶನ್ ಒಳಗಿನ ರಾಜಕೀಯದಿಂದ. ಅಲ್ಲಿದ್ದ ಅನಿಶ್ಚಿತತೆಯಿಂದ.

ಲೈಂಗಿಕ ಕಿರುಕುಳ ನೀಡಿದ ಬಿಜೆಪಿ ಸಂಸದ ಹಾಗೂ ಕುಸ್ತಿ ಫೆಡೆರೇಶನ್ ಹಿಂದಿನ ಅಧ್ಯಕ್ಷ ಬ್ರಿಜ್ ಭೂಷಣ್ ವಿರುದ್ಧದ ಹೋರಾಟದಲ್ಲಿ ವಿನೇಶ್ ಮುಂಚೂಣಿಯಲ್ಲಿದ್ದರು. ಹಾಗಾಗಿ ಫೆಡೆರೇಶನ್‌ನ ಹೊಸ ಅಧ್ಯಕ್ಷರಾದ ಬ್ರಿಜ್ ಭೂಷಣ್ ಆಪ್ತ ಸಂಜಯ್ ಸಿಂಗ್, ವಿನೇಶ್ ಗೆ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಕೊಡುವ ಬಗ್ಗೆ ಅನುಮಾನವಿತ್ತು. ಅವರಿಗೆ ಆ ಅಧಿಕಾರವಿತ್ತು.

ಕೊನೆ ಹಂತದಲ್ಲಿ ಅವಕಾಶ ನಿರಾಕರಣೆಯಾಗುವ ಸಂಶಯ ವಿನೇಶ್ ಗಿತ್ತು. ಒಲಿಂಪಿಕ್ಸ್ ಸ್ಪರ್ಧೆಯ ಅವಕಾಶವೇ ಕೈತಪ್ಪಿ ಹೋಗುವುದು ಬೇಡವೆಂದು ವಿನೇಶ್ ಅನಿವಾರ್ಯವಾಗಿ 50 ಕೆಜಿ ವಿಭಾಗದಲ್ಲಿ ಸ್ಪರ್ಧಿಸಬೇಕಾಯಿತು. ಆದರೆ 53 ಕೆಜಿಯಿಂದ 50 ಕೆಜಿಗೆ ತನ್ನ ತೂಕ ಇಳಿಸಲು ವಿನೇಶ್‌ಗೆ ಸಿಕ್ಕಿದ್ದು ಕೇವಲ 2 ತಿಂಗಳು. ವಿನೇಶ್ ಅನರ್ಹರಾದ ಮೇಲೆ ಫೈನಲ್‌ನಲ್ಲಿ ಚಿನ್ನ ಗೆದ್ದ ಅಮೆರಿಕದ ಸಾರಾ ತನ್ನ ಐದು ಕೆಜಿ ತೂಕ ಇಳಿಸಲು 2 ವರ್ಷಗಳಿಂದ ತಯಾರಿ ನಡೆಸಿದ್ದರು.

ಆ ಹೊತ್ತಲ್ಲಿ ವಿನೇಶ್ ಇಲ್ಲಿ ಭಾರತದಲ್ಲಿ ಕುಸ್ತಿಪಟುಗಳ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ವಿರುದ್ಧ ತನ್ನ ಸಹ ಕುಸ್ತಿಪಟುಗಳ ಜೊತೆ ಸೇರಿ ಹೋರಾಡುತ್ತಿದ್ದರು. ಅವರ ಹೋರಾಟಕ್ಕೆ ‘ಬೇಟಿ ಬಚಾವೋ’ ಘೋಷಣೆ ಖ್ಯಾತಿಯ ಮೋದಿ ಸರಕಾರ ಕವಡೆ ಕಾಸಿನ ಕಿಮ್ಮತ್ತು ಕೊಡಲಿಲ್ಲ. ಬದಲಾಗಿ ತಮ್ಮ ಪಕ್ಷದ ಸಂಸದರ ಪರ ನಿಂತರು ಪ್ರಧಾನಿ ಮೋದಿ. ಆರೋಪಿ ಸ್ಥಾನದಲ್ಲಿದ್ದ ಬಿಜೆಪಿ ಸಂಸದ ಬ್ರಿಜ್ ಭೂಷಣ್ ವಿರುದ್ಧ ಕೊನೆಗೆ ಅನಿವಾರ್ಯವಾಗಿ ಪೊಕ್ಸೊ ಪ್ರಕರಣ ದಾಖಲಾದರೂ ಈವರೆಗೆ ಅವರ ಬಂಧನವಾಗಲೇ ಇಲ್ಲ. ಅದೇ ಆರೋಪಿ ಬ್ರಿಜ್ ಭೂಷಣ್ ಹಾಯಾಗಿ ಸುತ್ತಾಡುತ್ತಾ ಪ್ರತಿಭಟನಾ ನಿರತ ಕುಸ್ತಿಪಟುಗಳ ವಿರುದ್ಧ ಅವಹೇಳನಕಾರಿಯಾಗಿ ಮಾತಾಡಿದರು.

ಅತ್ತ ಹೊಸ ಸಂಸತ್ ಉದ್ಘಾಟನೆಯಾಗುವಾಗ ಇತ್ತ ವಿನೇಶ್ ಸಹಿತ ದೇಶಕ್ಕೆ ಕೀರ್ತಿ ತಂದ ಮಹಿಳಾ ಕುಸ್ತಿಪಟುಗಳ ಮೇಲೆ ಪೊಲೀಸರು ಲಾಠಿ ಬೀಸುತ್ತಿದ್ದರು. ಅಷ್ಟೇ ಅಲ್ಲ ವಿನೇಶ್ ಸಹಿತ ಎಲ್ಲ ಹೋರಾಟ ನಿರತ ಕುಸ್ತಿಪಟುಗಳ ವಿರುದ್ಧ ಅತ್ಯಂತ ಕೆಟ್ಟ ಆನ್‌ಲೈನ್ ಟ್ರೋಲಿಂಗ್ ನಡೆಯಿತು. ಅವರನ್ನು ಅವಹೇಳನ ಮಾಡಲಾಯಿತು, ದೇಶದ್ರೋಹಿ ಪಟ್ಟ ಕಟ್ಟಲಾಯಿತು, ಅವರ ಬಗ್ಗೆ ಇಲ್ಲಸಲ್ಲದ್ದನ್ನು ಹೇಳಲಾಯಿತು. ಅದೆಲ್ಲವನ್ನೂ ಎದುರಿಸಿಯೂ ವಿನೇಶ್ ಪ್ಯಾರಿಸ್ ಒಲಿಂಪಿಕ್ಸ್‌ಗೆ ಹೋದಾಗಲೇ ಆಕೆ ಭಾರತದ ಪಾಲಿಗೆ ಚಾಂಪಿಯನ್ ಆಗಿ ಬಿಟ್ಟಿದ್ದರು.

ಆಕೆ ಮಾತ್ರವಲ್ಲ ಭಾರತದಲ್ಲಿನ ರಾಜಕೀಯ ಮತ್ತೆ ಕ್ರೀಡೆಯೊಳಗಿನ ರಾಜಕೀಯ, ಇಲ್ಲಿನ ಜಾತಿ ರಾಜಕೀಯ, ಪುರುಷ ಪ್ರಧಾನ ರಾಜಕೀಯ - ಇವೆಲ್ಲವನ್ನೂ ಮೀರಿ ಯಾವ್ಯಾವ ಕ್ರೀಡಾಪಟು ಪ್ಯಾರಿಸ್ ಒಲಿಂಪಿಕ್ಸ್ ತಲುಪಿದ್ದಾರೋ ಅವರೆಲ್ಲರೂ ಇಡೀ ಭಾರತದ ಪಾಲಿಗೆ ಚಾಂಪಿಯನ್ ಗಳೇ.

ವಿನೇಶ್ ಒಂದೆರಡಲ್ಲ, 2014, 2018 ಮತ್ತು 2022ರ ಮೂರು ಕಾಮನ್‌ವೆಲ್ತ್ ಗೇಮ್ಸ್‌ಗಳಲ್ಲಿ ಚಿನ್ನ ಗೆದ್ದಿರುವ ಕುಸ್ತಿ ಪಟು.

2018ರ ಏಶ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ನಂತರ ಕಾಮನ್‌ವೆಲ್ತ್ ಮತ್ತು ಏಶ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಅವರು ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಎರಡು ಕಂಚಿನ ಪದಕಗಳನ್ನೂ ಗೆದ್ದಿದ್ದಾರೆ. ವಿನೇಶ್ ಮೂರು ಬಾರಿಯ ಒಲಿಂಪಿಯನ್ ಸಹ ಆಗಿದ್ದಾರೆ. ವಿನೇಶ್ 2019ರಲ್ಲಿ ಪ್ರತಿಷ್ಠಿತ ಲಾರೆಸ್ ವರ್ಲ್ಡ್ ಸ್ಪೋರ್ಟ್ಸ್ ಅವಾರ್ಡ್ಸ್‌ಗೆ ನಾಮನಿರ್ದೇಶನಗೊಂಡಿದ್ದರು. ಈ ಮೂಲಕ ಆ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಮೊದಲ ಭಾರತೀಯರು ಫೋಗಟ್.

ಅಂತಹ ಅಸಾಮಾನ್ಯ ಹೋರಾಟಗಾರ್ತಿ, ಛಲಗಾರ್ತಿ, ಅಪ್ಪಟ ಪ್ರತಿಭಾವಂತೆ, ಇಡೀ ದೇಶದ ಯುವಜನರಿಗೆ ಸ್ಫೂರ್ತಿ, ಬಹುದೊಡ್ಡ ಪ್ರೇರಣೆ.

ವಿನೇಶ್ ಫೋಗಟ್ ಇನ್ನೂ ಹಲವು ಪೀಳಿಗೆಗಳು ನೆನಪಿಡುವ, ಮಾದರಿ ಎಂದು ಅನುಸರಿಸುವ ಮಹಾನ್ ಕ್ರೀಡಾಪಟು. ಒಲಿಂಪಿಕ್ಸ್ ಚಿನ್ನದ ಪದಕ ಆಕೆಯ ಅಮೋಘ ಸಾಧನೆ ಎದುರು ಏನೇನೂ ಅಲ್ಲ. ಆಕೆ ಅದೆಲ್ಲವನ್ನೂ ಮೀರಿದ ಶ್ರೇಷ್ಠ ಕ್ರೀಡಾಪಟು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X