ವಿನಿಸಿಯಸ್ ಜೂನಿಯರ್ ಹ್ಯಾಟ್ರಿಕ್ ಗೋಲು ಬಾರ್ಸಿಲೋನ ವಿರುದ್ಧ ಜಯ ; ರಿಯಲ್ ಮ್ಯಾಡ್ರಿಡ್ ಮಡಿಲಿಗೆ ಸ್ಪ್ಯಾನಿಷ್ ಸೂಪರ್ ಕಪ್

Photo: X \@EPLSL
ರಿಯಾದ್: ಸಾಂಪ್ರದಾಯಿಕ ಎದುರಾಳಿ ಬಾರ್ಸಿಲೋನ ತಂಡವನ್ನು 4-1 ಗೋಲುಗಳ ಅಂತರದಿಂದ ಮಣಿಸಿರುವ ರಿಯಲ್ ಮ್ಯಾಡ್ರಿಡ್ ತಂಡ ಸ್ಪ್ಯಾನಿಶ್ ಸೂಪರ್ ಕಪ್ ಅನ್ನು ತನ್ನ ಮಡಿಲಿಗೆ ಹಾಕಿಕೊಂಡಿದೆ.
ಸೋಮವಾರ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ವಿನಿಸಿಯಸ್ ಜೂನಿಯರ್ ತನ್ನ ಅಮೋಘ ಕೌಶಲ್ಯವನ್ನು ಪ್ರದರ್ಶಿಸಿ ಮೊದಲಾರ್ಧದಲ್ಲಿ ಹ್ಯಾಟ್ರಿಕ್ ಗೋಲು ದಾಖಲಿಸುವ ಮೂಲಕ ಬಾರ್ಸಿಲೋನ ತಂಡವನ್ನು ಒತ್ತಡಕ್ಕೆ ಸಿಲುಕಿಸಿದರು.
ಪಂದ್ಯದ ಆರಂಭದಿಂದಲೇ ರಿಯಲ್ ಮ್ಯಾಡ್ರಿಡ್ ಪ್ರದರ್ಶನ ಅತ್ಯಮೋಘವಾಗಿತ್ತು. ಜೂಡ್ ಬೆಲ್ಲಿಂಗ್ಹ್ಯಾಮ್, ರೊಡ್ರಿಗೊ ಹಾಗೂ ವಿನಿಸಿಯಸ್ ಸತತವಾಗಿ ಬಾರ್ಸಿಲೋನದ ರಕ್ಷಣಾಕೋಟೆಗೆ ಲಗ್ಗೆ ಇಟ್ಟರು. ಬೆಲ್ಲಿಂಗ್ಹ್ಯಾಮ್ ನೆರವಿನಿಂದ ವಿನಿಸಿಯಸ್ ಪಂದ್ಯದ 7ನೇ ನಿಮಿಷದಲ್ಲಿ ಗೋಲು ದಾಖಲಿಸಿ ಮ್ಯಾಡ್ರಿಡ್ಗೆ 1-0 ಮುನ್ನಡೆ ಒದಗಿಸಿಕೊಟ್ಟರು.
ರಿಯಲ್ ಮ್ಯಾಡ್ರಿಡ್ ಉತ್ತಮ ಪ್ರದರ್ಶನ ಮುಂದುವರಿಸಿದ್ದು ರೊಡ್ರಿಗೊ ನೀಡಿದ ಪಾಸ್ ನೆರವಿನಿಂದ 10ನೇ ನಿಮಿಷದಲ್ಲಿ ವಿನಿಸಿಯಸ್ ತನ್ನ ಎರಡನೇ ಗೋಲು ಗಳಿಸಿದರು. ಬಾರ್ಸಿಲೋನದ ಲೆವಾಂಡೋವ್ಸ್ಕಿ 33ನೇ ನಿಮಿಷದಲ್ಲಿ ಗೋಲು ಗಳಿಸಿ ಒಂದಷ್ಟು ಹೋರಾಟ ನೀಡಿದರೂ ಮ್ಯಾಡ್ರಿಡ್ ತಂಡ ಮೊದಲಾರ್ಧದಲ್ಲಿ ಪ್ರಾಬಲ್ಯ ಸಾಧಿಸಿತು.
ಅರೌಜೊ ಮಾಡಿದ ತಪ್ಪಿನಿಂದಾಗಿ ವಿನಿಸಿಯಸ್ಗೆ ಪೆನಾಲ್ಟಿ ಕಾರ್ನರ್ ಅವಕಾಶ ಲಭಿಸಿತು. ಬ್ರೆಝಿಲ್ ಆಟಗಾರ ವಿನಿಸಿಯಸ್ 39ನೇ ನಿಮಿಷದಲ್ಲಿ ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸಿದರು. ಈ ಮೂಲಕ ಹ್ಯಾಟ್ರಿಕ್ ಪೂರ್ಣಗೊಳಿಸಿದರು. ಇದರೊಂದಿಗೆ ಮೊದಲಾರ್ಧದ ಅಂತ್ಯಕ್ಕೆ ರಿಯಲ್ ಮ್ಯಾಡ್ರಿಡ್ 3-1 ಮುನ್ನಡೆ ಪಡೆಯಿತು.
ಬಾರ್ಸಿಲೋನದ ಸಂಕಟವು ದ್ವಿತೀಯಾರ್ಧದಲ್ಲೂ ಮುಂದುವರಿಯಿತು. ರೊಡ್ರಿಗೊ 64ನೇ ನಿಮಿಷದಲ್ಲಿ ಗೋಲು ಗಳಿಸಿ ರಿಯಲ್ ಮ್ಯಾಡ್ರಿಡ್ಗೆ 4-1 ಮುನ್ನಡೆ ಒದಗಿಸಿಕೊಟ್ಟರು. ಮ್ಯಾಡ್ರಿಡ್ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ ಕಾರಣ ಬಾರ್ಸಿಲೋನಕ್ಕೆ ದ್ವಿತೀಯಾರ್ಧದಲ್ಲಿ ಒಂದೂ ಗೋಲನ್ನು ಗಳಿಸಲು ಸಾಧ್ಯವಾಗಲಿಲ್ಲ.
ಅರೌಜೊ ರೆಡ್ ಕಾರ್ಡ್ ಪಡೆದ ಕಾರಣ ಬಾರ್ಸಿಲೋನ ಪಂದ್ಯದ ಕೊನೆಹ ಹಂತದಲ್ಲಿ 10 ಆಟಗಾರರೊಂದಿಗೆ ಆಡಿತು.
ಈ ಸೋಲಿನಿಂದಾಗಿ ಬಾರ್ಸಿಲೋನದ ಕೋಚ್ ಕ್ಸೇವಿ ಮೇಲೆ ಒತ್ತಡ ಹೆಚ್ಚಾಗಿದೆ. ಬಾರ್ಸಿಲೋನ ತಂಡ ಲಾಲಿಗ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಬಾರ್ಸಿಲೋನ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದೆ ಎಂದು ಒಪ್ಪಿಕೊಂಡಿರುವ ಕ್ಸೇವಿ ಫುಟ್ಬಾಲ್ ಅಭಿಮಾನಿಗಳಲ್ಲಿ ಕ್ಷಮೆ ಕೋರಿದ್ದಾರೆ.







