ಐಸಿಸಿ ನೀತಿ ಸಂಹಿತೆ ಉಲ್ಲಂಘನೆ: ಭಾರತದ ವೇಗಿ ಗುರ್ನೂರ್ ಬ್ರಾರ್ಗೆ ವಾಗ್ದಂಡನೆ

ಗುರ್ನೂರ್ ಬ್ರಾರ್ | Photo Credit : PTI
ಹೊಸದಿಲ್ಲಿ: ನ್ಯೂಝಿಲ್ಯಾಂಡ್ ತಂಡದ ವಿರುದ್ಧ ಮೌಂಟ್ ಮೊಂಗನುಯಿನಲ್ಲಿ ನಡೆದಿದ್ದ ನಾಲ್ಕನೇ ಏಕದಿನ ಪಂದ್ಯದ ವೇಳೆ ನೀತಿ ಸಂಹಿತೆಯನ್ನು ಉಲ್ಲಂಘಿಸಿರುವ ಭಾರತ ತಂಡದ ವೇಗದ ಬೌಲರ್ ಗುರ್ನೂರ್ ಬ್ರಾರ್ಗೆ ಅಂತರ್ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ)ವಾಗ್ದಂಡನೆ ವಿಧಿಸಿದೆ.
ನ್ಯೂಝಿಲ್ಯಾಂಡ್ ಬ್ಯಾಟರ್ ಟಿಮ್ ಸೀಫರ್ಟ್ ಔಟಾದ ನಂತರ ಆಕ್ರಮಣಕಾರಿ ಶೈಲಿಯಲ್ಲಿ ಸಂಭ್ರಮಾಚರಣೆ ನಡೆಸಿದ್ದಕ್ಕೆ 25ರ ವಯಸ್ಸಿನ ಬ್ರಾರ್ಗೆ ದಂಡ ವಿಧಿಸಲಾಗಿದೆ.
ಅಂತರ್ರಾಷ್ಟ್ರೀಯ ಪಂದ್ಯವೊಂದರಲ್ಲಿ ಬ್ಯಾಟರ್ವೊಬ್ಬರು ಔಟ್ ಆದ ನಂತರ ಅವರನ್ನು ಅವಹೇಳನ ಮಾಡುವಂತಹ ಅಥವಾ ಆಕ್ರಮಣಕಾರಿ ಪ್ರತಿಕ್ರಿಯೆಗೆ ಪ್ರಚೋದನೆ ನೀಡುವಂತಹ ಭಾಷೆ, ಕ್ರಿಯೆಗಳು ಹಾಗೂ ಸನ್ನೆಗಳನ್ನು ಬಳಸಿದ್ದಕ್ಕಾಗಿ ಐಸಿಸಿ ಆಟಗಾರರು ಹಾಗೂ ಆಟಗಾರರ ಸಹಾಯಕ ಸಿಬ್ಬಂದಿಗಾಗಿನ ನೀತಿ ಸಂಹಿತೆಯ 2.5ನೇ ವಿಧಿಯನ್ನು ಬ್ರಾರ್ ಉಲ್ಲಂಘಿಸಿದ್ದಾರೆಂದು ಪರಿಗಣಿಸಲಾಗಿದೆ.
ಸೀಫರ್ಟ್ ಔಟಾದ ನಂತರ 12ನೇ ಓವರ್ನ ಕೊನೆಯಲ್ಲಿ ಈ ಘಟನೆ ನಡೆದಿದೆ. ಬ್ರಾರ್ ಸಂಭ್ರಮಾಚರಣೆ ನಡೆಸಿದ ರೀತಿಯು ಆಕ್ರಮಣಕಾರಿಯಾಗಿತ್ತು ಹಾಗೂ ಬ್ಯಾಟರ್ಗೆ ಅವಮಾನಕರವಾಗುವಂತಿತ್ತು. ಇದು ಎದುರಾಳಿ ಆಟಗಾರನಿಂದಲೂ ಅಷ್ಟೇ ಆಕ್ರಮಣಕಾರಿ ಪ್ರತಿಕ್ರಿಯೆ ಬರುವಂತೆ ಪ್ರಚೋದಿಸುವ ಸಾಧ್ಯತೆಯಿತ್ತು.
ಅಧಿಕೃತ ವಾಗ್ದಂಡನೆಯ ಜೊತೆಗೆ ಬ್ರಾರ್ ಅವರ ಶಿಸ್ತು ದಾಖಲೆಗೆ ಒಂದು ಡಿಮೆರಿಟ್ ಅಂಕವನ್ನು ಸೇರಿಸಲಾಗಿದೆ. 24 ತಿಂಗಳ ಅವಧಿಯಲ್ಲಿ ಇದು ಅವರ ಎರಡನೇ ನೀತಿ ಸಂಹಿತೆ ಉಲ್ಲಂಘನೆಯಾಗಿದ್ದು, ಇದರೊಂದಿಗೆ ಅವರ ಒಟ್ಟು ಡಿಮೆರಿಟ್ ಅಂಕಗಳ ಸಂಖ್ಯೆಯು ಎರಡಕ್ಕೇರಿದೆ.






