ಕಿವೀಸ್ ವಿರುದ್ಧ ಚಾಂಪಿಯನ್ಸ್ ಟ್ರೋಫಿ ಪಂದ್ಯ: ಮೈಲಿಗಲ್ಲು ನಿರೀಕ್ಷೆಯಲ್ಲಿ ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ | PTI
ಹೊಸದಿಲ್ಲಿ: ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಇತ್ತೀಚೆಗಷ್ಟೇ ಪಾಕಿಸ್ತಾನ ತಂಡದ ವಿರುದ್ಧ ಶತಕ ಗಳಿಸಿರುವ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ದುಬೈನಲ್ಲಿ ರವಿವಾರ ಭಾರತ ತಂಡ ಆಡಲಿರುವ ನ್ಯೂಝಿಲ್ಯಾಂಡ್ ವಿರುದ್ಧದ ‘ಎ’ ಗುಂಪಿನ ಕೊನೆಯ ಪಂದ್ಯದ ವೇಳೆ ಮತ್ತೊಂದು ಮೈಲಿಗಲ್ಲು ತಲುಪಲು ಸಜ್ಜಾಗಿದ್ದಾರೆ.
ಇದು ಕೊಹ್ಲಿ ಆಡಲಿರುವ 300ನೇ ಏಕದಿನ ಪಂದ್ಯವಾಗಲಿದೆ. ಕೊಹ್ಲಿ 300ನೇ ಏಕದಿನ ಪಂದ್ಯವನ್ನಾಡಲಿರುವ ವಿಶ್ವದ 22ನೇ ಹಾಗೂ ಭಾರತದ 7ನೇ ಆಟಗಾರನಾಗಲಿದ್ದಾರೆ. 463 ಏಕದಿನ ಪಂದ್ಯವನ್ನಾಡಿರುವ ಸಚಿನ್ ತೆಂಡುಲ್ಕರ್ ಅವರು ಗರಿಷ್ಠ ಏಕದಿನ ಪಂದ್ಯಗಳನ್ನು ಆಡಿದ ಆಟಗಾರರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ.
ಈಗಾಗಲೇ ಭಾರತ ಹಾಗೂ ನ್ಯೂಝಿಲ್ಯಾಂಡ್ ತಂಡಗಳು ಸೆಮಿ ಫೈನಲ್ ಗೆ ತಲುಪಿವೆ. ರವಿವಾರದ ಪಂದ್ಯದಲ್ಲಿ ಜಯ ಸಾಧಿಸುವ ತಂಡವು ‘ಎ’ ಗುಂಪಿನಲ್ಲಿ ಅಗ್ರ ಸ್ಥಾನದೊಂದಿಗೆ ಲೀಗ್ ಹಂತವನ್ನು ಮುಗಿಸಲಿದೆ.
ಟಿ-20 ಕ್ರಿಕೆಟ್ನಿಂದ ನಿವೃತ್ತಿಯಾಗಿರುವ ಕೊಹ್ಲಿ , ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಔಟಾಗದೆ 100 ರನ್ ಗಳಿಸಿ ತನ್ನ ಫಾರ್ಮ್ ಅನ್ನು ಕಂಡುಕೊಂಡಿದ್ದಾರೆ. 36ರ ಹರೆಯದ ಕೊಹ್ಲಿ 2023ರ ನವೆಂಬರ್ ನಂತರ ಗಳಿಸಿರುವ ಮೊದಲ ಏಕದಿನ ಶತಕ ಇದಾಗಿದೆ. ಕೊಹ್ಲಿ ಕಳೆದ ವರ್ಷ ಆಸ್ಟ್ರೇಲಿಯ ತಂಡದ ವಿರುದ್ಧ ಶತಕ(ಔಟಾಗದೆ 100)ಗಳಿಸಿದ ನಂತರ ಅಹ್ಮದಾಬಾದ್ನಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ 3ನೇ ಏಕದಿನ ಪಂದ್ಯದ ವೇಳೆ ಅರ್ಧಶತಕ(52 ರನ್)ಸಿಡಿಸಿದ್ದರು. ಪ್ರಸಕ್ತ ಟೂರ್ನಿಯಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ ಆಡಿರುವ ಮೊದಲ ಪಂದ್ಯದಲ್ಲಿ ಕೊಹ್ಲಿ ಕೇವಲ 22 ರನ್ ಗಳಿಸಿ ಲೆಗ್ ಸ್ಪಿನ್ನರ್ ರಿಶಾದ್ ಹುಸೈನ್ಗೆ ವಿಕೆಟ್ ಒಪ್ಪಿಸಿದ್ದರು.
‘ಬ್ಯಾಟಿಂಗ್ ಲೆಜೆಂಡ್’ ಕೊಹ್ಲಿ ಪಾಕಿಸ್ತಾನದ ವಿರುದ್ಧ ಏಕದಿನ ಕ್ರಿಕೆಟ್ನಲ್ಲಿ ತನ್ನ 51ನೇ ಶತಕವನ್ನು ಸಿಡಿಸಿದ್ದು, ಇದೇ ಪಂದ್ಯದಲ್ಲಿ 14,000 ಏಕದಿನ ರನ್ ಪೂರೈಸಿ ಈ ಸಾಧನೆ ಮಾಡಿರುವ ಸಚಿನ್ ತೆಂಡುಲ್ಕರ್ ಹಾಗೂ ಕುಮಾರ ಸಂಗಕ್ಕರ ಅವರಿದ್ದ ಪಟ್ಟಿಗೆ ಸೇರಿದ್ದರು.
ಪಾಕಿಸ್ತಾನ ವಿರುದ್ಧದ 100 ರನ್ ಕೊಹ್ಲಿ ಅವರು ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಗಳಿಸಿರುವ 82ನೇ ಶತಕವಾಗಿದೆ. ತೆಂಡುಲ್ಕರ್ರ 100 ಅಂತರರಾಷ್ಟ್ರೀಯ ಶತಕಗಳ ದಾಖಲೆ ಸರಿಗಟ್ಟುವ ಗುರಿ ಇಟ್ಟುಕೊಂಡಿದ್ದಾರೆ.
‘‘ವಿರಾಟ್ ಕೊಹ್ಲಿ 300ನೇ ಏಕದಿನ ಪಂದ್ಯವನ್ನಾಡಲು ಸಜ್ಜಾಗಿದ್ದಾರೆ. ಅವರು ಎಷ್ಟೊಂದು ಉತ್ತಮ ಆಟಗಾರ, ಭಾರತೀಯ ಕ್ರಿಕೆಟಿಗೆ ಅವರು ಎಷ್ಟೊಂದು ಕೊಡುಗೆ ನೀಡಿದ್ದಾರೆಂದು ಬಣ್ಣಿಸಲು ಪದಗಳು ಸಾಲದು. ಅವರು ಪಾಕ್ ವಿರುದ್ಧದ ಪಂದ್ಯದಲ್ಲಿ ಶತಕ ಗಳಿಸಿದ್ದರು. ಅವರು ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿರುವುದನ್ನು ನೋಡಿ ನನಗೆ ತುಂಬಾ ಸಂತೋಷವಾಗಿದೆ. ವಿರಾಟ್ ಹಾಗೂ ಕೊಹ್ಲಿ ಇಬ್ಬರೂ ಹಿರಿಯ ಆಟಗಾರರು. ಪ್ರಮುಖ ಪಂದ್ಯಗಳು ಎದುರಾದಾಗ ಈ ಇಬ್ಬರು ಆಟಗಾರರು ಯಾವಾಗಲೂ ದೊಡ್ಡ ಸ್ಕೋರ್ ಮಾಡಬೇಕೆಂದು ನಿರೀಕ್ಷಿಸಲಾಗುತ್ತದೆ. ಅವರು(ಕೊಹ್ಲಿ)ಇನ್ನೂ ಅನೇಕ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಆಡಬೇಕೆಂದು ಆಶಿಸುವೆ’’ ಎನ್ನುವುದಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎಲ್.ರಾಹುಲ್ ಹೇಳಿದ್ದಾರೆ.







