ಸಚಿನ್ ತೆಂಡುಲ್ಕರ್ ಗಿಂತ ವಿರಾಟ್ ಕೊಹ್ಲಿಯೇ ನನ್ನ ಕಠಿಣ ಎದುರಾಳಿಯಾಗಿದ್ದರು: ಆ್ಯಂಡರ್ಸನ್

ಲೆಜೆಂಡ್ ಜೇಮ್ಸ್ ಆ್ಯಂಡರ್ಸನ್, ವಿರಾಟ್ ಕೊಹ್ಲಿ | PC : PTI
ಲಂಡನ್: ಆಧುನಿಕ ಕ್ರಿಕೆಟಿನ ಕೆಲವು ಶ್ರೇಷ್ಠ ಆಟಗಾರರೊಂದಿಗಿನ ತನ್ನ ಹೋರಾಟದ ಕುರಿತ ಅನುಭವವನ್ನು ಟಾಕ್ಸ್ಪೋರ್ಟ್ ಪಾಡ್ ಕಾಸ್ಟ್ನೊಂದಿಗೆ ಹಂಚಿಕೊಂಡಿರುವ ಇಂಗ್ಲೆಂಡ್ ವೇಗದ ಬೌಲಿಂಗ್ ಲೆಜೆಂಡ್ ಜೇಮ್ಸ್ ಆ್ಯಂಡರ್ಸನ್, ನಾಲ್ವರು ಪ್ರಮುಖ ದಿಗ್ಗಜರ ಪೈಕಿ ವಿರಾಟ್ ಕೊಹ್ಲಿ ತಾನೆದುರಿಸಿದ ಅತ್ಯಂತ ಕಠಿಣ ಬ್ಯಾಟರ್ ಆಗಿದ್ದಾರೆ ಎಂದು ಹೇಳಿದ್ದಾರೆ.
‘‘ಸಚಿನ್ ತೆಂಡುಲ್ಕರ್ ಗಿಂತಲೂ ವಿರಾಟ್ ಕೊಹ್ಲಿ ಅವರಿಗೆ ಬೌಲಿಂಗ್ ಮಾಡಲು ನನಗೆ ತುಂಬಾ ಕಷ್ಟವಾಗುತ್ತಿತ್ತು’’ ಎಂದು ಆ್ಯಂಡರ್ಸನ್ ಹೇಳಿದ್ದಾರೆ.
ಭಾರತ-ಇಂಗ್ಲೆಂಡ್ ತಂಡಗಳ ನಡುವಿನ ಪಂದ್ಯದಲ್ಲಿ ಕೊಹ್ಲಿ ಹಾಗೂ ಆ್ಯಂಡರ್ಸನ್ ನಡುವೆ ಯಾವಾಗಲೂ ಪೈಪೋಟಿ ನಡೆಯುತ್ತಲೇ ಇರುತ್ತಿತ್ತು. 36 ಇನಿಂಗ್ಸ್ಗಳಲ್ಲಿ ಕೊಹ್ಲಿ ಅವರು ಆ್ಯಂಡರ್ಸನ್ ವಿರುದ್ಧ 43.57ರ ಸರಾಸರಿಯಲ್ಲಿ 305 ರನ್ ಗಳಿಸಿದ್ದಾರೆ. ಇಂಗ್ಲೆಂಡ್ ವೇಗಿ, 7 ಬಾರಿ ಕೊಹ್ಲಿ ಅವರನ್ನು ಔಟ್ ಮಾಡಿದ್ದರು.
ಭಾರತದ ಇಂಗ್ಲೆಂಡ್ ಕ್ರಿಕೆಟ್ ಪ್ರವಾಸಕ್ಕೆ ಮುನ್ನ ಈ ವರ್ಷದ ಮೇನಲ್ಲಿ ಕೊಹ್ಲಿ ಅವರು ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿಯಾಗಿದ್ದಾರೆ. 122 ಟೆಸ್ಟ್ ಪಂದ್ಯಗಳಲ್ಲಿ 9,230 ರನ್ ಗಳಿಸಿದ್ದ ಕೊಹ್ಲಿಗೆ 10,000 ರನ್ ಮೈಲಿಗಲ್ಲು ತಲುಪಲು ಕೇವಲ 770 ರನ್ ಬೇಕಾಗಿತ್ತು.





