ಆಸ್ಟ್ರೇಲಿಯ ವಿರುದ್ಧ ಸರಣಿಗೆ ವಿರಾಟ್ ಕೊಹ್ಲಿ ತಯಾರಿ

ವಿರಾಟ್ ಕೊಹ್ಲಿ | PC: PTI
ಹೊಸದಿಲ್ಲಿ, ಆ.23: ಇತ್ತೀಚೆಗೆ ಲಂಡನ್ ನಲ್ಲಿ ಅಭ್ಯಾಸ ನಡೆಸುತ್ತಿರುವ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ವೈರಲ್ ಆಗುವ ಮೂಲಕ ಭಾರತದ ಬ್ಯಾಟರ್ ವಿರಾಟ್ ಕೊಹ್ಲಿ ಮೈದಾನದ ಹೊರಗೂ ಸುದ್ದಿಯಾಗುತ್ತಲೇ ಇದ್ದಾರೆ.
ಕೊಹ್ಲಿ ತನ್ನ ಪತ್ನಿ ಅನುಷ್ಕಾ ಶರ್ಮಾ ಜೊತೆ ಇಂಗ್ಲೆಂಡ್ ನಲ್ಲಿ ತನ್ನ ಸಮಯ ಕಳೆಯುತ್ತಿದ್ದಾರೆ. ಈ ವರ್ಷದ ಅಕ್ಟೋಬರ್ನಲ್ಲಿ ನಡೆಯಲಿರುವ ಆಸ್ಟ್ರೇಲಿಯ ವಿರುದ್ಧದ ಭಾರತದ ಏಕದಿನ ಸರಣಿಗಾಗಿ ತಯಾರಿ ನಡೆಸುತ್ತಿದ್ದಾರೆ.
ಕೊಹ್ಲಿ ಇತ್ತೀಚೆಗೆ ಗುಜರಾತ್ ಟೈಟಾನ್ಸ್ ನ ಸಹಾಯಕ ಕೋಚ್ ನಯೀಮ್ ಅಮೀನ್ ಅವರೊಂದಿಗಿನ ಒಳಾಂಗಣ ತರಬೇತಿಯ ವೇಳೆ ತೆಗೆದ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ಕೊಹ್ಲಿ ಜೂನ್ನಲ್ಲಿ ನಡೆದ 2025ರ ಆವೃತ್ತಿಯ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಕೊನೆಯ ಬಾರಿ ಸ್ಪರ್ಧಾತ್ಮಕ ಕ್ರಿಕೆಟ್ ಆಡಿದ್ದರು. ಆಗ ಅವರು 43 ರನ್ ಗಳಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಚೊಚ್ಚಲ ಐಪಿಎಲ್ ಪ್ರಶಸ್ತಿ ಗೆಲ್ಲುವಲ್ಲಿ ನೆರವಾಗಿದ್ದರು.
36ರ ಹರೆಯದ ಕೊಹ್ಲಿ ಏಕದಿನ ಕ್ರಿಕೆಟ್ನಲ್ಲಿ 51 ಶತಕಗಳ ಸಹಿತ ಒಟ್ಟು 14,181 ರನ್ ಗಳಿಸಿದ್ದಾರೆ. ಕೊಹ್ಲಿ ಸ್ವದೇಶದಲ್ಲಿ 2023ರಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 765 ರನ್ ಗಳಿಸಿ ಸಚಿನ್ ತೆಂಡುಲ್ಕರ್ರ ದಾಖಲೆಯನ್ನು ಮುರಿದಿದ್ದರು.
ಕೊಹ್ಲಿ ಹಾಗೂ ರೋಹಿತ್ ಶರ್ಮಾಗೆ ವಿದಾಯದ ಪಂದ್ಯಗಳನ್ನು ಆಯೋಜಿಸುವ ಕುರಿತ ಚರ್ಚೆಯನ್ನು ತಳ್ಳಿ ಹಾಕಿದ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ, ‘‘ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಏಕದಿನ ಪಂದ್ಯಗಳನ್ನು ಆಡುತ್ತಿದ್ದಾರೆ. ಏಕದಿನ ಕ್ರಿಕೆಟ್ನಿಂದ ಇನ್ನೂ ನಿವೃತ್ತಿ ತೆಗೆದುಕೊಂಡಿಲ್ಲ. ಅವರ ವಿದಾಯದ ಬಗ್ಗೆ ಮಾತನಾಡುವುದು ಸರಿಯಲ್ಲ. ಟೆಸ್ಟ್ ಹಾಗೂ ಟಿ-20 ಮಾದರಿ ಕ್ರಿಕೆಟ್ನಿಂದ ನಿವೃತ್ತಿಯಾಗಿದ್ದರೂ ಏಕದಿನ ಕ್ರಿಕೆಟ್ ನಲ್ಲಿ ಈಗಲೂ ಆಡುತ್ತಿದ್ದಾರೆ’’ಎಂದರು.
ಇದೀಗ ಕೊಹ್ಲಿ ಅವರು ಆಸ್ಟ್ರೇಲಿಯ ಸರಣಿಯತ್ತ ತನ್ನ ಎಲ್ಲ ಗಮನವನ್ನು ಹರಿಸುತ್ತಿದ್ದು, ಲಂಡನ್ ನಲ್ಲಿನ ಚಿತ್ರಗಳು ಅವರು ಈಗಾಗಲೇ ತಯಾರಿ ಆರಂಭಿಸಿದ್ದನ್ನು ಸೂಚಿಸುತ್ತಿವೆ.







