Virat Kohli ಇಲ್ಲದೆ ಭಾರತ ಈತನಕ 160 ರನ್ ಚೇಸ್ ಮಾಡಿಲ್ಲ: ಸೆಹ್ವಾಗ್

ವಿರಾಟ್ ಕೊಹ್ಲಿ , ವೀರೇಂದ್ರ ಸೆಹ್ವಾಗ್| Photo Credit ; PTI
ಹೊಸದಿಲ್ಲಿ, ಫೆ. 26: ಟೀಮ್ ಇಂಡಿಯಾ ಅಹ್ಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಟಿ-20 ವಿಶ್ವಕಪ್ ಟೂರ್ನಿಯ ತನ್ನ ಮೊದಲ ಸೂಪರ್-8 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋತ ನಂತರ ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಆಸಕ್ತಿದಾಯಕ ಅಂಕಿ-ಅಂಶವನ್ನು ಹಂಚಿಕೊಂಡಿದ್ದಾರೆ.
ಮೊದಲಿಗೆ ದಕ್ಷಿಣ ಆಫ್ರಿಕಾಕ್ಕೆ 187 ರನ್ ಬಿಟ್ಟುಕೊಟ್ಟ ಭಾರತ ತಂಡವು ರನ್ ಚೇಸ್ ವೇಳೆ ಕೇವಲ 111 ರನ್ ಗಳಿಸಿ ಆಲೌಟಾಯಿತು. ಈ ಮೂಲಕ 76 ರನ್ ಗಳಿಂದ ಸೋಲುಂಡಿತು. ಈ ಭಾರೀ ಅಂತರದ ಸೋಲಿನಿಂದಾಗಿ ಭಾರತ ತಂಡದ ಸೆಮಿಫೈನಲ್ ತಲುಪುವ ಅವಕಾಶಗಳಿಗೆ ಹಿನ್ನಡೆ ಉಂಟಾಗಿದೆ.
ಭಾರತ ತಂಡವು ವಿಶ್ವಕಪ್ ಟೂರ್ನಿಯಲ್ಲಿ 160ಕ್ಕೂ ಅಧಿಕ ರನ್ ಚೇಸ್ ಮಾಡುವಾಗ ಪಂದ್ಯವನ್ನು ಗೆದ್ದಿಲ್ಲ ಎಂದು ಸೆಹ್ವಾಗ್ ಬೆಟ್ಟು ಮಾಡಿದ್ದಾರೆ. ಒತ್ತಡದ ಪರಿಸ್ಥಿತಿಯಲ್ಲಿ ಕೊಹ್ಲಿ ಅವರಂತೆ ಆಡಿದ್ದರೆ ತಂಡಕ್ಕೆ ಅವಕಾಶ ಇತ್ತು. ಆದರೆ ತಿಲಕ್ ವರ್ಮಾ, ಸೂರ್ಯಕುಮಾರ್ಯಾದವ್, ಶಿವಂ ದುಬೆ ಹಾಗೂ ಹಾರ್ದಿಕ್ ಪಾಂಡ್ಯ ಅವರಂತಹ ಆಟಗಾರರು ಈ ನಿಟ್ಟಿನಲ್ಲಿ ಪ್ರಯತ್ನಪಡಲಿಲ್ಲ ಎಂದು ಹೇಳಿದ್ದಾರೆ.
“ವಿರಾಟ್ ಕೊಹ್ಲಿ ರನ್ ಗಳಿಸಿದ್ದಾಗ ಮಾತ್ರ ಭಾರತವು 160 ರನ್ ಗುರಿಯನ್ನು ಚೇಸ್ ಮಾಡಿ ಗೆಲುವು ಸಾಧಿಸಿತ್ತು. ವಿಶ್ವಕಪ್ ನಲ್ಲಿ ಭಾರತವು 160ಕ್ಕಿಂತ ಹೆಚ್ಚು ರನ್ ಚೇಸ್ ಮಾಡಿಲ್ಲ. ಬಹುತೇಕ ಪಂದ್ಯಗಳಲ್ಲಿ ಕೊಹ್ಲಿ ಔಟಾಗದೆ ಇರುತ್ತಿದ್ದರು. 80, 60 ಅಥವಾ ಔಟಾಗದೆ 50 ರನ್ ಗಳಿಸಿ ಪಂದ್ಯವನ್ನು ಮುಗಿಸುತ್ತಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯದಲ್ಲಿ ಯಾವ ಆಟಗಾರ ಪಂದ್ಯವನ್ನು ಮುಗಿಸಿದ್ದಾನೆ? ಮೊನ್ನೆಯ ಪಂದ್ಯದಲ್ಲಿ ಹಲವು ಆಟಗಾರರಿಗೆ ಕೊಹ್ಲಿ ಅವರಂತೆ ಆಡುವ ಅವಕಾಶವಿತ್ತು” ಎಂದು ಸೆಹ್ವಾಗ್ ಹೇಳಿದ್ದಾರೆ.
“ದಕ್ಷಿಣ ಆಫ್ರಿಕಾ ವಿರುದ್ಧ ಸೂರ್ಯಕುಮಾರ್ ಯಾದವ್ ತನ್ನ ಉತ್ತಮ ಪ್ರದರ್ಶನ ನೀಡಲಿಲ್ಲ. ಪಂದ್ಯವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಅವರು ಒತ್ತಡದಲ್ಲಿದ್ದಂತೆ ಕಂಡುಬಂದರು. ತನ್ನ ನೈಜ ಆಟವನ್ನು ಆಡಲಿಲ್ಲ. ಭಯದಿಂದ ಆಡಿದರೆ ಪ್ರಮುಖ ಪಂದ್ಯಗಳನ್ನು ಗೆಲ್ಲಲು ಸಾಧ್ಯವಾಗದು. ವಿಶ್ವಕಪ್ ನಲ್ಲಿ ಭಾರತ ತಂಡವು ಉತ್ತಮ ಪ್ರದರ್ಶನ ನೀಡಲು ಬಯಸಿದರೆ ನಿರ್ಭೀತಿಯ ಕ್ರಿಕೆಟ್ ಆಡಬೇಕು. ಕಠಿಣ ಪರಿಸ್ಥಿತಿಯಲ್ಲಿ ಆತ್ಮವಿಶ್ವಾಸದಿಂದ ಇರಬೇಕು” ಎಂದು ಸೆಹ್ವಾಗ್ ಹೇಳಿದ್ದಾರೆ.
ಭಾರತೀಯ ತಂಡದ ಬಲಿಷ್ಠ ಬ್ಯಾಟಿಂಗ್ ಸರದಿಯ ಬಗ್ಗೆ ಮಾತನಾಡಿದ ಸೆಹ್ವಾಗ್, “ಆಟಗಾರರು ವಿರಾಟ್ ಕೊಹ್ಲಿ ಅವರಿಂದ ಸಾಕಷ್ಟು ಕಲಿಯಬೇಕಾಗಿದೆ. ಟಿ-20 ಕ್ರಿಕೆಟ್ ನಲ್ಲಿ ಸ್ಟ್ರೈಕ್ ರೇಟ್ ಅತ್ಯಂತ ಮುಖ್ಯ. ಆದರೆ ರನ್ ಚೇಸ್ ಮಾಡುವಾಗ ಅದು ಮುಖ್ಯವಾಗುವುದಿಲ್ಲ; ಕೊನೆಯ ತನಕ ಇದ್ದು ಪಂದ್ಯವನ್ನು ಗೆಲ್ಲಿಸುವುದು ಮುಖ್ಯ. ಒತ್ತಡ ಪರಿಸ್ಥಿತಿಯಲ್ಲಿ ಭಾರತೀಯ ಬ್ಯಾಟರ್ ಗಳು ಹೆಚ್ಚು ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು. ಕ್ಷಿಪ್ರವಾಗಿ ರನ್ ಗಳಿಸುವ ಬದಲು ಪಂದ್ಯ ಗೆಲ್ಲುವತ್ತ ಗಮನ ನೀಡಬೇಕು” ಎಂದು ತಿಳಿಸಿದ್ದಾರೆ.






