ವಿರಾಟ್ ಕೊಹ್ಲಿಯಿಂದ ವೈಭವ್ ಸೂರ್ಯವಂಶಿಗೆ ಅಟೋಗ್ರಾಫ್: ಯುವ ಆಟಗಾರನ ಸ್ಫೋಟಕ ಇನ್ನಿಂಗ್ಸ್ ಗೆ ಮೆಚ್ಚುಗೆ

Photo| PTI
ಗುವಾಹಟಿ, ಎ.11: ಇಲ್ಲಿನ ಬರ್ಸಪಾರ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ 15 ವರ್ಷದ ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲರ್ ಗಳಿಗೆ ದುಃಸ್ವಪ್ನವಾಗಿ ಪರಿಣಮಿಸಿದ ಅವರು, ಕೇವಲ 26 ಎಸೆತಗಳಲ್ಲಿ 78 ರನ್ ಗಳನ್ನು ಸಿಡಿಸಿ ರಾಜಸ್ಥಾನ ರಾಯಲ್ಸ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಅವರ ಈ ಪ್ರದರ್ಶನದಿಂದ ಆರೆಂಜ್ ಕ್ಯಾಪ್ ಗೌರವವೂ ಅವರಿಗೆ ಲಭಿಸಿತು.
ಆರ್ಸಿಬಿ ನೀಡಿದ 202 ರನ್ಗಳ ಬೃಹತ್ ಗುರಿಯನ್ನು ರಾಜಸ್ಥಾನ ರಾಯಲ್ಸ್ ತಂಡ ಕೇವಲ 4 ವಿಕೆಟ್ ಕಳೆದುಕೊಂಡು 18 ಓವರ್ ಗಳಲ್ಲಿ ತಲುಪಿತು. ವೈಭವ್ ಸೂರ್ಯವಂಶಿ (78, 26 ಎಸೆತ) ಹಾಗೂ ಧ್ರುವ್ ಜುರೇಲ್ (ಅಜೇಯ 81, 43 ಎಸೆತ) ತಂಡದ ಗೆಲುವಿನ ಪ್ರಮುಖ ಶಿಲ್ಪಿಗಳಾದರು.
ಪಂದ್ಯ ಮುಕ್ತಾಯಗೊಂಡ ಬಳಿಕ ಆರ್ಸಿಬಿ ತಂಡದ ದಂತಕತೆ ಬ್ಯಾಟರ್ ವಿರಾಟ್ ಕೊಹ್ಲಿ ವೈಭವ್ ಸೂರ್ಯವಂಶಿಯನ್ನು ಅಭಿನಂದಿಸಿ ತಮ್ಮ ಅಟೋಗ್ರಾಫ್ ನೀಡಿದರು. “Dear Vaibhav, well done” ಎಂದು ಬರೆದು ಯುವ ಆಟಗಾರನ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
202 ರನ್ಗಳ ಗುರಿ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಕಠಿಣವಾಗಬಹುದು ಎಂಬ ನಿರೀಕ್ಷೆ ವ್ಯಕ್ತವಾಗಿತ್ತು. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ 13 ರನ್ ಗೆ ಔಟಾದ ಬಳಿಕ ಕ್ರೀಸಿಗೆ ಬಂದ ವೈಭವ್, ಧ್ರುವ್ ಜುರೇಲ್ ಜೊತೆಗೂಡಿ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಆರ್ಸಿಬಿ ಬೌಲರ್ ಗಳ ಎಸೆತಗಳನ್ನು ಕ್ರೀಡಾಂಗಣದ ಮೂಲೆಮೂಲೆಗೂ ಅಟ್ಟಿದ ಅವರು ಕ್ಷಿಪ್ರವಾಗಿ ರನ್ ಗಳಿಸಿದ್ದು ಗಮನಾರ್ಹ.
ವೈಭವ್ ಸೂರ್ಯವಂಶಿ ಕೃನಾಲ್ ಪಾಂಡ್ಯ ಬೌಲಿಂಗ್ ನಲ್ಲಿ ವಿರಾಟ್ ಕೊಹ್ಲಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಆ ಕ್ಯಾಚ್ ಅನ್ನು ಕೊಹ್ಲಿ ಡೈವ್ ಹೊಡೆದು ಹಿಡಿದದ್ದು ವಿಶೇಷವಾಗಿತ್ತು. ಮತ್ತೊಂದು ತುದಿಯಲ್ಲಿ ನೆಲಕಚ್ಚಿ ಆಡಿದ ಧ್ರುವ್ ಜುರೇಲ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿ ಅಜೇಯ 81 ರನ್ ಗಳನ್ನು ಗಳಿಸಿ ತಂಡದ ಗೆಲುವನ್ನು ಖಚಿತಪಡಿಸಿದರು.
ವೈಭವ್ ನಿರ್ಗಮನಕ್ಕೆ ಕಾರಣವಾದ ಅದೇ ವಿರಾಟ್ ಕೊಹ್ಲಿ, ಪಂದ್ಯ ಬಳಿಕ ಅವರನ್ನು ಅಭಿನಂದಿಸಿ ಅಟೋಗ್ರಾಫ್ ನೀಡಿರುವುದು ಈ ಪಂದ್ಯದ ವಿಶೇಷ ಕ್ಷಣವಾಗಿ ಉಳಿಯಿತು.
A job well done with a long road ahead! 💗 pic.twitter.com/tymVTrdeqK
— Rajasthan Royals (@rajasthanroyals) April 11, 2026






