ಸಚಿನ್ ತೆಂಡುಲ್ಕರ್ರ ಹಳೆಯ ದಾಖಲೆ ಮುರಿದ ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ | Photo Credit : PTI
ಆಕ್ಲೆಂಡ್: ಏಕದಿನ ಕ್ರಿಕೆಟ್ನಲ್ಲಿ ಯಶಸ್ವಿ ಹಾಗೂ ಯಶಸ್ವಿಯಾಗದ ರನ್ ಚೇಸ್ ವೇಳೆ ಅತ್ಯಂತ ಹೆಚ್ಚು ರನ್ ಗಳಿಸಿ ಬ್ಯಾಟಿಂಗ್ ದಂತಕತೆ ಸಚಿನ್ ತೆಂಡುಲ್ಕರ್ರ ದೀರ್ಘಕಾಲೀನ ದಾಖಲೆಯನ್ನು ಮುರಿದ ವಿರಾಟ್ ಕೊಹ್ಲಿ ತನ್ನ ಶ್ರೇಷ್ಠ ಪ್ರದರ್ಶನ ಮುಂದುವರಿಸಿದರು. ನ್ಯೂಝಿಲ್ಯಾಂಡ್ ವಿರುದ್ಧದ ಮಳೆ ಬಾಧಿತ ಮೊದಲ ಏಕದಿನ ಪಂದ್ಯದ ವೇಳೆ ಕೊಹ್ಲಿ ಈ ಸಾಧನೆ ಮಾಡಿದರು.
ಭಾರತ ತಂಡದ ಮಾಜಿ ನಾಯಕ ಕೊಹ್ಲಿ ರನ್ ಚೇಸ್ ವೇಳೆ ಕೇವಲ 51 ಎಸೆತಗಳಲ್ಲಿ 13 ಬೌಂಡರಿ, 1 ಸಿಕ್ಸರ್ ನೆರವಿನಿಂದ 74 ರನ್ ಗಳಿಸಿ ಮತ್ತೊಮ್ಮೆ ‘ಚೇಸ್ ಮಾಸ್ಟರ್’ ಎನಿಸಿಕೊಂಡರು. ಅರ್ಧಶತಕ ಗಳಿಸುವುದರೊಂದಿಗೆ ಕೊಹ್ಲಿ ಅವರು ಏಕದಿನ ಪಂದ್ಯದ ರನ್ ಚೇಸ್ ವೇಳೆ ಒಟ್ಟು 8,741 ರನ್ ಗಳಿಸಿ ತೆಂಡುಲ್ಕರ್ರ ಹಿಂದಿನ ದಾಖಲೆ(8,720 ರನ್)ಮುರಿದರು. ಸಾರ್ವಕಾಲಿಕ ಶ್ರೇಷ್ಠರ ಪಟ್ಟಿಯಲ್ಲಿ ಕೊಹ್ಲಿ ಅಗ್ರ ಸ್ಥಾನದಲ್ಲಿದ್ದಾರೆ.
ಅಂಕಿ-ಅಂಶಗಳು ಏಕದಿನ ಕ್ರಿಕೆಟ್ನಲ್ಲಿ ಕೊಹ್ಲಿ ಅವರ ಸ್ಥಿರ ಪ್ರದರ್ಶನಕ್ಕೆ ಸಾಕ್ಷಿಯಾಗಿವೆ. ಕೊಹ್ಲಿ 66.21ರ ಸರಾಸರಿಯಲ್ಲಿ 95.03ರ ಸ್ಟ್ರೈಕ್ರೇಟ್ನಲ್ಲಿ 8,741 ರನ್ ಗಳಿಸಿದ್ದಾರೆ. ತೆಂಡುಲ್ಕರ್ 42.33ರ ಸರಾಸರಿಯಲ್ಲಿ 88.44ರ ಸ್ಟ್ರೈಕ್ರೇಟ್ನಲ್ಲಿ 8,720 ರನ್ ಗಳಿಸಿದ್ದರು.
ಪಾಂಟಿಂಗ್ ದಾಖಲೆ ಸರಿಗಟ್ಟಿದ ಕೊಹ್ಲಿ: ನ್ಯೂಝಿಲ್ಯಾಂಡ್ ವಿರುದ್ಧ ಏಕದಿನ ಪಂದ್ಯದಲ್ಲಿ ಅತ್ಯಂತ ಹೆಚ್ಚು ರನ್ ಗಳಿಸಿರುವ ಆಸ್ಟ್ರೇಲಿಯದ ದಂತಕತೆ ರಿಕಿ ಪಾಂಟಿಂಗ್ ದಾಖಲೆಯನ್ನು ಸರಿಗಟ್ಟಿರುವ 37ರ ವಯಸ್ಸಿನ ಕೊಹ್ಲಿ ತನ್ನ ಏಕದಿನ ವೃತ್ತಿಜೀವನದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ತಲುಪಿದರು.
ಕೊಹ್ಲಿ ಇದೀಗ ಕಿವೀಸ್ ಪಡೆಯ ವಿರುದ್ಧ 1,971 ರನ್ ಗಳಿಸಿದ್ದಾರೆ. ಇದರೊಂದಿಗೆ ಪಾಂಟಿಂಗ್ ದಾಖಲೆಯನ್ನು (1,971)ಸರಿಗಟ್ಟಿದರು. ಪ್ರಸಕ್ತ ಸರಣಿಯಲ್ಲಿ ಕೊಹ್ಲಿ ಇನ್ನಷ್ಟು ಪಂದ್ಯಗಳನ್ನು ಆಡಲಿರುವುದರಿಂದ ಪಾಂಟಿಂಗ್ ದಾಖಲೆಯನ್ನು ಮುರಿಯುವ ಅವಕಾಶವಿದೆ.
ಭಾರತದ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡುಲ್ಕರ್(1,750 ರನ್)ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಶ್ರೀಲಂಕಾದ ಕುಮಾರ ಸಂಗಕ್ಕರ(1,568 ರನ್) ಹಾಗೂ ಸನತ್ ಜಯಸೂರ್ಯ(1,519 ರನ್) ಆ ನಂತರದ ಸ್ಥಾನದಲ್ಲಿದ್ದಾರೆ.
ಮೂರನೇ ಕ್ರಮಾಂಕದಲ್ಲಿ 13,000 ರನ್ ಗಳಿಸಿದ ಮೊದಲ ಬ್ಯಾಟರ್
ಕೊಹ್ಲಿ ಅವರು ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ 13,000 ರನ್ ತಲುಪಿದ ಮೊದಲ ಬ್ಯಾಟರ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ನ್ಯೂಝಿಲ್ಯಾಂಡ್ ವಿರುದ್ಧದ ಇನಿಂಗ್ಸ್ ವೇಳೆ ಕೊಹ್ಲಿ ಈ ಸಾಧನೆ ಮಾಡಿದರು. 61.61ರ ಸರಾಸರಿಯಲ್ಲಿ 13,000 ರನ್ ಗಳಿಸಿದ್ದಾರೆ.
ಕೊಹ್ಲಿಗಿಂತ ಮೊದಲು ತೆಂಡುಲ್ಕರ್ ಮಾತ್ರ ನಿರ್ದಿಷ್ಟ ಬ್ಯಾಟಿಂಗ್ ಕ್ರಮಾಂಕದಲ್ಲಿ 13,000 ರನ್ ಗಳಿಸಿದ್ದರು. ‘ಮಾಸ್ಟರ್ಬ್ಲಾಸ್ಟರ್’ ತೆಂಡುಲ್ಕರ್ 2ನೇ ಕ್ರಮಾಂಕದ ಬ್ಯಾಟಿಂಗ್ನಲ್ಲಿ 13,685 ರನ್ ಗಳಿಸಿದ್ದಾರೆ.
ಮೂರನೇ ಕ್ರಮಾಂಕದಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಕೊಹ್ಲಿ ಇದೀಗ ಮೊದಲ ಸ್ಥಾನದಲ್ಲಿದ್ದಾರೆ. ಪಾಂಟಿಂಗ್(12,662 ರನ್)ಹಾಗೂ ಸಂಗಕ್ಕರ(9,747 ರನ್)ಅವರಿಗಿಂತ ಮುಂದಿದ್ದಾರೆ.






