ಕಾರ್ಪೋರೇಟ್ ಲೋಕಕ್ಕೆ ಎಂಟ್ರಿ ನೀಡಿದ ವಿರಾಟ್ ಕೊಹ್ಲಿ; ವೈರಲ್ ಆದ ಮೊದಲ ʼಲಿಂಕ್ಡ್ಇನ್ʼ ಪೋಸ್ಟ್!

ವಿರಾಟ್ ಕೊಹ್ಲಿ (Photo: PTI)
ಭಾರತದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ತಮ್ಮ 37ನೇ ವಯಸ್ಸಿನಲ್ಲಿ ‘ಲಿಂಕ್ಡ್ ಇನ್’ ವೇದಿಕೆಯಲ್ಲಿ ಖಾತೆ ತೆರೆದಿದ್ದಾರೆ. ತಮ್ಮ ಮೊದಲ ಪೋಸ್ಟ್ನಲ್ಲಿ ಅವರು ತಮ್ಮ ದೂರದೃಷ್ಟಿ ಮತ್ತು ತಾವು ಹೂಡಿಕೆ ಮಾಡಿರುವ ಬ್ರ್ಯಾಂಡ್ ಕುರಿತು ಹೆಚ್ಚಿನ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇದೀಗ ಅವರ ಪೋಸ್ಟ್ ವೈರಲ್ ಆಗಿದೆ.
ಸಾಮಾನ್ಯ ಮಿತಿಗಳನ್ನು ಮೀರಿ ಬೆಳೆಯುವ ಆಕಾಂಕ್ಷೆಯ ಜೊತೆಗೆ ವಿರಾಟ್ ಕೊಹ್ಲಿ Puma ಸಂಸ್ಥೆಯ ಜೊತೆಗಿನ ಎಂಟು ವರ್ಷಗಳ ಅವಧಿಗೆ ಸುಮಾರು 300 ಕೋಟಿ ಮೌಲ್ಯದ ಒಪ್ಪಂದವನ್ನು ವಿಸ್ತರಿಸಿಕೊಳ್ಳುವ ಅವಕಾಶದಿಂದ ಹೊರನಡೆದರು. ಹೀಗಾಗಿ ಅವರು ಒಬ್ಬ ಶ್ರೇಷ್ಠ ಕ್ರಿಕೆಟಿಗ ಮಾತ್ರರಲ್ಲ, ಬದಲಾಗಿ ಬ್ರ್ಯಾಂಡ್ಗಳನ್ನು ರೂಪಿಸುವಲ್ಲಿಯೂ ಉತ್ತಮ ಒಳನೋಟ ಹೊಂದಿದ್ದಾರೆ.
ಹಿಂದೆ ಹಲವು ಬ್ರ್ಯಾಂಡ್ಗಳೊಂದಿಗೆ ಗುರುತಿಸಿಕೊಂಡಿದ್ದ ಅವರು ಇದೀಗ ಕ್ರೀಡಾ ಉಡುಪುಗಳ ಬ್ರ್ಯಾಂಡ್ ಆದ Agilitas ನಲ್ಲಿ ಹೂಡಿಕೆ ಮಾಡಿದ್ದಾರೆ. ಅಲ್ಲದೆ, one8world ನ ಸಹಸ್ಥಾಪಕರಾಗಿದ್ದಾರೆ. ವಿಶ್ವ ಕ್ರಿಕೆಟ್ ಲೋಕದಲ್ಲಿ ಅವರ ಧೈರ್ಯವನ್ನು ಪ್ರಶಂಸಿಸಲಾಗುತ್ತಿದೆ. ಇದೀಗ ಕೊಹ್ಲಿ ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. LinkedIn ವೃತ್ತಿಪರ ಸಾಮಾಜಿಕ ಜಾಲತಾಣದಲ್ಲಿ ಖಾತೆಯನ್ನು ತೆರೆದು ತಮ್ಮ ಬ್ರ್ಯಾಂಡ್ ಬಗ್ಗೆ ವಿವರ ಹಂಚಿಕೊಂಡಿದ್ದಾರೆ.
ಕೆಲ ತಿಂಗಳ ಹಿಂದೆ ಹೊಸದಿಲ್ಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು Agilitas ಬ್ರ್ಯಾಂಡ್ ಅನ್ನು ಪರಿಚಯಿಸಿದರು. ಇದೀಗ ಉದ್ಯಮಿಯೊಬ್ಬರ ಮನಸ್ಥಿತಿಯನ್ನು ಹಂಚಿಕೊಳ್ಳುವ ವೇದಿಕೆಗೂ ಆಗಮಿಸಿದ್ದಾರೆ. “ಪ್ರತಿಯೊಂದು ಕ್ರೀಡೆಯನ್ನು ಅನುಸರಿಸುವ, ಸಂಭ್ರಮಿಸುವ ಮತ್ತು ಆಡುವ ಭಾರತವನ್ನು ನೋಡಬೇಕೆಂಬುದು ನನ್ನ ಬಹುಕಾಲದ ಆಶಯವಾಗಿತ್ತು. ಇಂದು ಆ ದೂರದೃಷ್ಟಿ ಸಾಕಾರಗೊಳ್ಳುವ ಹಂತ ಹಿಂದೆಂದಿಗಿಂತಲೂ ಸಮೀಪ ಬಂದಿದೆ. ಭಾರತವು ವಿಶ್ವದರ್ಜೆಯ ಕ್ರೀಡಾಪಟುಗಳನ್ನು ಸೃಷ್ಟಿಸಬಲ್ಲದು ಮತ್ತು ಜಾಗತಿಕ ಮಟ್ಟದ ಬ್ರ್ಯಾಂಡ್ಗಳನ್ನು ರೂಪಿಸಬಲ್ಲದು ಎಂಬುದನ್ನು ಹೊಸ ಪೀಳೀಗೆಯು ಸಾಬೀತುಪಡಿಸುತ್ತಿದೆ. ಉತ್ಪಾದನೆ, ಗ್ರಾಹಕ ಬ್ರ್ಯಾಂಡ್ಗಳು ಮತ್ತು ಕ್ರೀಡಾ ವಿತರಣೆಯಂತಹ ಕ್ಷೇತ್ರಗಳನ್ನು ಒಳಗೊಂಡಿರುವ ಭಾರತದಿಂದಲೇ ಆರಂಭವಾಗುವ ಸಮಗ್ರ ಕ್ರೀಡಾ ವೇದಿಕೆಯನ್ನು ನಿರ್ಮಿಸುವುದೇ ನಮ್ಮ ಗುರಿ. ಜಾಗತಿಕ ಕ್ರೀಡಾ ಕ್ಷೇತ್ರದಲ್ಲಿ ಕೇವಲ ಭಾಗವಹಿಸುವುದಲ್ಲದೆ ಅದರ ಭವಿಷ್ಯವನ್ನು ರೂಪಿಸುವಲ್ಲಿಯೂ ಭಾರತ ಕೊಡುಗೆ ನೀಡಬಲ್ಲದು ಎಂಬುದು ನನ್ನ ದೃಢ ನಂಬಿಕೆ” ಎಂದು ಅವರು ಬರೆದಿದ್ದಾರೆ.
ಮುಂದುವರಿದು, “ಅದಕ್ಕಾಗಿಯೇ ನಾನು Agilitas ನ ಹೂಡಿಕೆದಾರನಾಗಿ ಮತ್ತು 'one8world ನ ಸಹ ಸ್ಥಾಪಕ ಮತ್ತು ಸಹ ಸೃಷ್ಟಿಕರ್ತನಾಗಿ ಸೇರ್ಪಡೆಗೊಂಡಿದ್ದೇನೆ. ನನ್ನ ವೃತ್ತಿಜೀವನದಾದ್ಯಂತ ನಾನು ನಂಬಿಕೊಂಡು ಬಂದಿರುವ ತತ್ವದ ಮೇಲೆ one8 ರೂಪುಗೊಂಡಿದೆ. ಮಿತಿಗಳನ್ನು ಮೀರುವುದು, ಗುಣಮಟ್ಟ ಹೆಚ್ಚಿಸುವುದು ಮತ್ತು ವಿಭಿನ್ನವಾಗಿ ಏನನ್ನಾದರೂ ಮಾಡುವ ಧೈರ್ಯವನ್ನು ತೋರುವುದರ ಮೂಲಕವೇ ಪ್ರಗತಿ ಸಾಧ್ಯ. ಹೀಗೆಯೇ ನಾವು ಈ ಬ್ರ್ಯಾಂಡ್ ಅನ್ನು ಜಗತ್ತಿಗೆ ಪರಿಚಯಿಸಿದೆವು. ನನ್ನ ತವರು ನಗರದಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ one8world ಸಾಕಾರಗೊಳ್ಳುವುದನ್ನು ನೋಡುವುದು ನನ್ನ ಜೀವನದ ಅತ್ಯಂತ ಅರ್ಥಪೂರ್ಣ ಕ್ಷಣಗಳಲ್ಲಿ ಒಂದಾಗಿತ್ತು. ನಮ್ಮ ಗುರಿ ಸ್ಪಷ್ಟವಾಗಿದೆ. ನಮ್ಮೆಲ್ಲರ ನಂತರವೂ ಉಳಿದುಕೊಳ್ಳುವಂತಹದನ್ನು ನಿರ್ಮಿಸುವ ಸಮಯ ಬಂದಿದೆ. ನಾವು ಅಂತಹದ್ದೇ ಒಂದು ಪಯಣದಲ್ಲಿದ್ದೇವೆ” ಎಂದು ಅವರು ಬರೆದಿದ್ದಾರೆ.
ವಿರಾಟ್ ಕೊಹ್ಲಿ Agilitas Sports ನಲ್ಲಿ ತಮ್ಮದೇ ಆದ 40 ಕೋಟಿ ರೂಪಾಯಿ ಬಂಡವಾಳವನ್ನು ಹೂಡಿಕೆ ಮಾಡಿದ್ದಾರೆ. ಮಾತ್ರವಲ್ಲದೆ, ತಮಗೆ ಷೇರು ಪಾಲು ಇರುವ ವ್ಯವಹಾರದಲ್ಲಿ (one8world) ತೊಡಗಿಸಿಕೊಂಡಿದ್ದಾರೆ.
Puma India ಮತ್ತು ಆಗ್ನೇಯ ಏಷ್ಯಾದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಅಭಿಷೇಕ್ ಗಂಗೂಲಿ ಅವರು ಅತುಲ್ ಬಜಾಜ್ ಮತ್ತು ಅಮಿತ್ ಪ್ರಭು ಅವರೊಂದಿಗೆ ಸೇರಿ 2023ರಲ್ಲಿ ಸ್ಥಾಪಿಸಿದ Agilitas, ಉತ್ಪನ್ನ ವಿನ್ಯಾಸ, ಉತ್ಪಾದನೆ ಮತ್ತು ಚಿಲ್ಲರೆ ಮಾರಾಟವನ್ನು ಸಂಯೋಜಿಸುವ ಮಾದರಿಯನ್ನು ಅನುಸರಿಸುತ್ತಿದೆ. ಅಂದರೆ ಸಾಮಾನ್ಯವಾಗಿ ಒಂದು ವಸ್ತು ಗ್ರಾಹಕರ ಕೈ ಸೇರಲು ಬೇರೆ ಬೇರೆ ಕಂಪನಿಗಳು ಕೆಲಸ ಮಾಡುತ್ತವೆ. ಆದರೆ Agilitas ಕಂಪನಿ ಎಲ್ಲಾ ಹಂತಗಳನ್ನು ತಾನೇ ನಿರ್ವಹಿಸುತ್ತಿದೆ.






