ʼಕಮ್ ಬ್ಯಾಕ್ʼ ಪಂದ್ಯದಲ್ಲಿ ರೋಹಿತ್-ವಿರಾಟ್ ಜೋಡಿಗೆ ನಿರಾಸೆ

Photo credit: PTI
ಪರ್ತ್: ಬಹುನಿರೀಕ್ಷಿತ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿ ಮೊದಲ ಪಂದ್ಯದಲ್ಲಿ ಭಾರತ ತಂಡಕ್ಕೆ ಮರಳಿದ ಬ್ಯಾಟಿಂಗ್ ದಿಗ್ಗಜರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ನಿರೀಕ್ಷಿತ ಪ್ರದರ್ಶನ ನೀಡದೆ ವಿಫಲಗೊಂಡರು.
ಪರ್ತ್ ನ ಆಪ್ಟನ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ, ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲ ಬಾರಿಗೆ ಏಕದಿನ ಪಂದ್ಯದ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿರುವ ಶುಭಮನ್ ಗಿಲ್ ಟಾಸ್ ಸೋತರು.
ಚಾಂಪಿಯನ್ಸ್ ಟ್ರೋಫಿಯ ಬಳಿಕ ಇದೇ ಮೊದಲ ಬಾರಿಗೆ ಭಾರತ ತಂಡದ ಪರವಾಗಿ ಆಡುತ್ತಿರುವ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯ ಮೇಲೆ ಅಭಿಮಾನಿಗಳ ಭಾರೀ ನಿರೀಕ್ಷೆ ಇತ್ತು. ಆದರೆ, ಅವರನ್ನು ನಿರಾಸೆಗೊಳಿಸಿದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ, ಕ್ರಮವಾಗಿ 8 ರನ್ ಹಾಗೂ ಶೂನ್ಯ ಸಂಪಾದನೆ ಮಾಡಿ ಔಟಾದರು.
ರೋಹಿತ್ ಶರ್ಮಾ ಜೋಶ್ ಹೇಝಲ್ವುಡ್ ಬೌಲಿಂಗ್ ನಲ್ಲಿ ಮ್ಯಾಟ್ ರೆನ್ ಶಾಗೆ ಕ್ಯಾಚಿತ್ತು ಔಟಾದರೆ, ವಿರಾಟ್ ಕೊಹ್ಲಿ ಮಿಚೆಲ್ ಸ್ಟಾರ್ಕ್ ಬೌಲಿಂಗ್ ನಲ್ಲಿ ಕೂಪರ್ ಕೊನೊಲಿಗೆ ಕ್ಯಾಚಿತ್ತು ನಿರ್ಗಮಿಸಿದರು. ಅವರು ಎಂಟು ಬಾಲ್ ಗಳನ್ನು ಎದುರಿಸಿದರೂ, ಯಾವುದೇ ರನ್ ಗಳಿಸಲು ಸಾಧ್ಯವಾಗಿಲ್ಲ.
ಇವರಿಬ್ಬರೊಂದಿಗೆ ನಾಯಕ ಶುಭಮನ್ ಗಿಲ್ ಕೂಡಾ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಕೇವಲ 10 ರನ್ ಗಳಿಸಿದ್ದಾಗ, ನೇಥನ್ ಎಲ್ಲಿಸ್ ಬೌಲಿಂಗ್ ನಲ್ಲಿ ಜೋಶ್ ಫಿಲಿಪ್ ಗೆ ಕ್ಯಾಚಿತ್ತು ಅವರು ಔಟಾದರು.
ಇತ್ತೀಚಿನ ವರದಿಗಳ ಪ್ರಕಾರ, ಭಾರತ ತಂಡವು ವಿಕೆಟ್ ಕಳೆದುಕೊಂಡು 37 ರನ್ ಗಳಿಸಿದೆ.







