ಆಸ್ಟ್ರೇಲಿಯದಲ್ಲಿ ಹಲವು ದಾಖಲೆ ನಿರ್ಮಿಸುವ ವಿಶ್ವಾಸದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ | Photo Credit : PTI
ಪರ್ತ್, ಅ.18: ಆಸ್ಟ್ರೇಲಿಯ ವಿರುದ್ಧ ರವಿವಾರ ಆರಂಭವಾಗಲಿರುವ ಏಕದಿನ ಸರಣಿಯ ವೇಳೆ ಭಾರತೀಯ ಕ್ರಿಕೆಟ್ ಸ್ಟಾರ್ ಗಳಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಹಲವು ಮೈಲಿಗಲ್ಲುಗಳನ್ನು ತಲುಪಲು ಸಜ್ಜಾಗುತ್ತಿದ್ದಾರೆ.
2ನೇ ಸಾರ್ವಕಾಲಿಕ ಶ್ರೇಷ್ಠ ಏಕದಿನ ರನ್ ಸ್ಕೋರರ್ ಎನಿಸಿಕೊಳ್ಳಲು ಕೊಹ್ಲಿಗೆ ಕೇವಲ 54 ರನ್ ಅಗತ್ಯವಿದೆ. 500ನೇ ಅಂತರರಾಷ್ಟ್ರೀಯ ಪಂದ್ಯವನ್ನು ಆಡಲು ಸಜ್ಜಾಗಿರುವ ರೋಹಿತ್ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಗರಿಷ್ಠ ಸಿಕ್ಸರ್ ಸರದಾರನಾಗುವ ಗುರಿಯನ್ನೂ ಇಟ್ಟುಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಸದ್ಯ ಏಕದಿನ ಪಂದ್ಯದಲ್ಲಿ 57.88ರ ಸರಾಸರಿಯಲ್ಲಿ14,181 ರನ್ ಗಳಿಸಿದ್ದು, ಗರಿಷ್ಠ ಶತಕಗಳನ್ನು(51)ಸಿಡಿಸಿದ ದಾಖಲೆ ಹೊಂದಿದ್ದಾರೆ. ಏಕದಿನ ಕ್ರಿಕೆಟಿನ ಸಾರ್ವಕಾಲಿಕ ಶ್ರೇಷ್ಠ ರನ್ ಗಳಿಸಿದವರ ಪಟ್ಟಿಯಲ್ಲಿ ಕುಮಾರ ಸಂಗಕ್ಕರ (14,234 ರನ್)ಹಾಗೂ ಸಚಿನ್ ತೆಂಡುಲ್ಕರ್(18, 426 ರನ್)ಮೊದಲೆರಡು ಸ್ಥಾನದಲ್ಲಿದ್ದಾರೆ. ಸಂಗಕ್ಕರ ದಾಖಲೆ ಮುರಿಯಲು ಕೊಹ್ಲಿ 54 ರನ್ ಗಳಿಸಬೇಕಾಗಿದೆ.
ಏಕದಿನ ಹಾಗೂ ಟಿ-20 ಪಂದ್ಯಗಳಲ್ಲಿ ಸಚಿನ್ ತೆಂಡುಲ್ಕರ್ ದಾಖಲೆ(18,436 ರನ್)ಯನ್ನು ಮುರಿಯಲು ಕೊಹ್ಲಿಗೆ ಕೇವಲ 67 ರನ್ ಅಗತ್ಯವಿದೆ. ಕೊಹ್ಲಿ ಈ ತನಕ ಏಕದಿನ-ಟಿ-20 ಪಂದ್ಯಗಳಲ್ಲಿ ಒಟ್ಟು 18,369 ರನ್ ಕಲೆ ಹಾಕಿದ್ದಾರೆ.
500ನೇ ಅಂತರರಾಷ್ಟ್ರೀಯ ಪಂದ್ಯವನ್ನಾಡಲು ಸಜ್ಜಾಗಿರುವ ರೋಹಿತ್ ಶರ್ಮಾ, ಈ ಮೈಲಿಗಲ್ಲು ತಲುಪಿದ ವಿಶ್ವದ 11ನೇ ಕ್ರಿಕೆಟಿಗನಾಗಲು ಇನ್ನೊಂದು ಪಂದ್ಯ ಆಡಬೇಕಾಗಿದೆ. ರೋಹಿತ್ 2007ರಲ್ಲಿ ಐರ್ಲ್ಯಾಂಡ್ ವಿರುದ್ಧ ತನ್ನ ಚೊಚ್ಚಲ ಪಂದ್ಯವನ್ನಾಡಿದ ನಂತರ 67 ಟೆಸ್ಟ್, 273 ಏಕದಿನ ಹಾಗೂ 159 ಟಿ-20 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.
ಈ ತನಕ ಭಾರತದ ನಾಲ್ವರು ಕ್ರಿಕೆಟಿಗರು ಹೆಚ್ಚು ಅಂತರರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ಅವರುಗಳೆಂದರೆ: ಸಚಿನ್ ತೆಂಡುಲ್ಕರ್(664), ವಿರಾಟ್ ಕೊಹ್ಲಿ(550*), ಎಂ.ಎಸ್. ಧೋನಿ(538)ಹಾಗೂ ರಾಹುಲ್ ದ್ರಾವಿಡ್(509).
ರೋಹಿತ್ಗೆ ಏಕದಿನ ಕ್ರಿಕೆಟ್ ನಲ್ಲಿ 350ನೇ ಸಿಕ್ಸರ್ ಸಿಡಿಸಲು 6 ಸಿಕ್ಸರ್ ಗಳ ಅಗತ್ಯವಿದೆ.
ರೋಹಿತ್ ಸದ್ಯ 265 ಇನಿಂಗ್ಸ್ಗಳಲ್ಲಿ 344 ಸಿಕ್ಸರ್ ಗಳನ್ನು ಗಳಿಸಿದ್ದಾರೆ. ಶಾಹೀದ್ ಅಫ್ರಿದಿ(369 ಇನಿಂಗ್ಸ್ಸ್, 351 ಸಿಕ್ಸರ್)ಮೊದಲ ಸ್ಥಾನದಲ್ಲಿದ್ದಾರೆ. ಇನ್ನೂ 8 ಸಿಕ್ಸರ್ ಗಳನ್ನು ಸಿಡಿಸಿದರೆ ಏಕದಿನ ಕ್ರಿಕೆಟ್ ನಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ಸಾಧನೆ ಮಾಡಲಿದ್ದಾರೆ.
ಆಸ್ಟ್ರೇಲಿಯದ ವಿರುದ್ಧ ಅದರದೆ ನೆಲದಲ್ಲಿ ರೋಹಿತ್ ಈ ತನಕ ಆಡಿರುವ 19 ಪಂದ್ಯಗಳಲ್ಲಿ 58.23ರ ಸರಾಸರಿಯಲ್ಲಿ 990 ರನ್ ಗಳಿಸಿದ್ದಾರೆ. ಇದರಲ್ಲಿ 4 ಶತಕ ಹಾಗೂ 2 ಅರ್ಧಶತಕಗಳಿವೆ. ಆಸ್ಟ್ರೇಲಿಯದಲ್ಲಿ ಆಸೀಸ್ ವಿರುದ್ಧ 1,000 ರನ್ ಪೂರೈಸಿದ ಭಾರತದ ಮೊದಲ ಬ್ಯಾಟರ್ ಎನಿಸಿಕೊಳ್ಳಲು ಕೇವಲ10 ರನ್ ಅವಶ್ಯಕತೆ ಇದೆ.
ರೋಹಿತ್ ತನ್ನ 50ನೇ ಅಂತರರಾಷ್ಟ್ರೀಯ ಶತಕದಂಚಿನಲ್ಲಿದ್ದಾರೆ. ಸದ್ಯ ಎಲ್ಲ 3 ಮಾದರಿಯ ಕ್ರಿಕೆಟ್ ನಲ್ಲಿ 49 ಶತಕಗಳನ್ನು ದಾಖಲಿಸಿದ್ದಾರೆ. ಇನ್ನೊಂದು ಶತಕ ಗಳಿಸಿದರೆ ಈ ಸಾಧನೆ ಮಾಡಿದ ವಿಶ್ವದ 9ನೇ ಹಾಗೂ ಭಾರತದ 3ನೇ ಆಟಗಾರ ಎನಿಸಿಕೊಳ್ಳಲಿದ್ದಾರೆ.
ಆಸ್ಟ್ರೇಲಿಯ ವಿರುದ್ಧ ಏಕದಿನ ಪಂದ್ಯದಲ್ಲಿ ರೋಹಿತ್ ಹಾಗೂ ಕೊಹ್ಲಿ ಅವರು ತಲಾ 8 ಶತಕಗಳನ್ನು ಗಳಿಸಿದ್ದಾರೆ. ಇನ್ನೊಂದು ಶತಕ ಗಳಿಸಿದರೆ ಆಸ್ಟ್ರೇಲಿಯದ ವಿರುದ್ಧ 9 ಏಕದಿನ ಶತಕಗಳನ್ನು ಗಳಿಸಿರುವ ಸಚಿನ್ ತೆಂಡುಲ್ಕರ್ ದಾಖಲೆಯನ್ನು ಸರಿಗಟ್ಟಲಿದ್ದಾರೆ.
ರೋಹಿತ್ಗೆ ಎಲ್ಲ ಮಾದರಿಯ ಕ್ರಿಕೆಟ್ ನಲ್ಲಿ 20,000 ಅಂತರರಾಷ್ಟ್ರೀಯ ರನ್ಗಳ ಮೈಲಿಗಲ್ಲು ತಲುಪಿ ತೆಂಡುಲ್ಕರ್(34, 357), ಕೊಹ್ಲಿ(27,599)ಹಾಗೂ ದ್ರಾವಿಡ್(24,208) ಅವರನ್ನೊಳಗೊಂಡ ಕ್ಲಬ್ಗೆ ಸೇರಲು 300 ರನ್ ಗಳಿಸಬೇಕಾಗಿದೆ.
ಈ ಸಾಧನೆಗಳು ಆಸ್ಟ್ರೇಲಿಯ ವಿರುದ್ಧ ಏಕದಿನ ಸರಣಿಯಲ್ಲಿ ಹೆಚ್ಚುವರಿ ಮಹತ್ವವನ್ನು ನೀಡಲಿದೆ. ಈ ಎಲ್ಲ ಮಹತ್ವದ ಮೈಲಿಗಲ್ಲುಗಳನ್ನು ತಲುಪಿ ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ ತಮ್ಮ ಪರಂಪರೆಯನ್ನು ಇನ್ನಷ್ಟು ಗಟ್ಟಿಗೊಳಿಸುವತ್ತ ವಿರಾಟ್-ರೋಹಿತ್ ಚಿತ್ತಹರಿಸಿದ್ದಾರೆ.







