ಆಸ್ಟ್ರೇಲಿಯದ ವಿರುದ್ಧ ಸೀಮಿತ ಓವರ್ಗಳ ಸರಣಿ : ಅಂತಾರಾಷ್ಟ್ರೀಯ ಕ್ರಿಕೆಟಿಗೆ ಮರಳಿದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ | Photo Credit : PTI
ಹೊಸದಿಲ್ಲಿ, ಅ.15: ಮುಂಬರುವ ಮೂರು ಪಂದ್ಯಗಳ ಏಕದಿನ ಹಾಗೂ 5 ಪಂದ್ಯಗಳ ಟಿ-20 ಸರಣಿಯನ್ನಾಡಲು ಭಾರತೀಯ ಪುರುಷರ ಕ್ರಿಕೆಟ್ ತಂಡವು ಬುಧವಾರ ಬೆಳಗ್ಗೆ ಹೊಸದಿಲ್ಲಿಯಿಂದ ಆಸ್ಟ್ರೇಲಿಯಕ್ಕೆ ಪ್ರಯಾಣ ಬೆಳೆಸಿತು.
ಆಸ್ಟ್ರೇಲಿಯ ಪ್ರವಾಸದ ವೇಳೆ ಬ್ಯಾಟಿಂಗ್ ದಿಗ್ಗಜರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅಂತರ್ರಾಷ್ಟ್ರೀಯ ಕ್ರಿಕೆಟಿಗೆ ಮರಳಲಿದ್ದು, ನೂತನ ನಾಯಕ ಶುಭಮನ್ ಗಿಲ್ ಏಕದಿನ ತಂಡವನ್ನು ಮುನ್ನಡೆಸಲಿದ್ದಾರೆ.
ಏಕದಿನ ಸರಣಿಯು ಪರ್ತ್ನ ಒಪ್ಟಸ್ ಸ್ಟೇಡಿಯಂನಲ್ಲಿ ರವಿವಾರ ಆರಂಭವಾಗಲಿದೆ. ಆ ನಂತರ ಅಕ್ಟೋಬರ್ 23 ಹಾಗೂ 25ರಂದು ಇನ್ನೆರಡು ಪಂದ್ಯಗಳು ನಡೆಯಲಿವೆ. ಟಿ-20 ಸರಣಿಯು ಅ.29ರಿಂದ ನ.8ರ ತನಕ ನಡೆಯಲಿದೆ.
ನಾಯಕ ಶುಭಮನ್ ಗಿಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಧ್ರುವ ಜುರೆಲ್, ಯಶಸ್ವಿ ಜೈಸ್ವಾಲ್, ಹರ್ಷಿತ್ ರಾಣಾ, ಕೆ.ಎಲ್.ರಾಹುಲ್, ವಾಶಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ನಿತೀಶ್ ಕುಮಾರ್ ರೆಡ್ಡಿ ಹಾಗೂ ಪ್ರಸಿದ್ಧ ಕೃಷ್ಣ ದಿಲ್ಲಿ ವಿಮಾನ ನಿಲ್ದಾಣದಿಂದ ತೆರಳಿದರು.
ವಿರಾಟ್ ಹಾಗೂ ರೋಹಿತ್, ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ವೇಳೆ ಕೊನೆಯ ಬಾರಿ ಕ್ರಿಕೆಟ್ ಆಡಿದ್ದರು. ಚಾಂಪಿಯನ್ಸ್ ಟ್ರೋಫಿಯಲ್ಲಿ ಅಜೇಯವಾಗುಳಿದಿದ್ದ ಭಾರತ ತಂಡದ ಪರ ರೋಹಿತ್ ಶರ್ಮಾ ಫೈನಲ್ನಲ್ಲಿ 76 ರನ್ ಗಳಿಸಿದ್ದು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
ಈ ಇಬ್ಬರು ಆಟಗಾರರು ಟಿ-20 ಹಾಗೂ ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿಯಾಗಿರುವ ಹಿನ್ನೆಲೆಯಲ್ಲಿ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಮಾತ್ರ ಲಭ್ಯವಿದ್ದಾರೆ.







