ವಿರಾಟ್ ಕೊಹ್ಲಿ, ರೋಹಿತ್ ಏಕದಿನ ಕ್ರಿಕೆಟ್ ಭವಿಷ್ಯದ ಕುರಿತು ಸುಳಿವು ನೀಡಿದ ಗಂಭೀರ್

ಗೌತಮ್ ಗಂಭೀರ್ , ರೋಹಿತ್, ವಿರಾಟ್ ಕೊಹ್ಲಿ | PTI
ಹೊಸದಿಲ್ಲಿ: ಈಗಾಗಲೇ ಟೆಸ್ಟ್ ಹಾಗೂ ಟಿ-20 ಪಂದ್ಯಗಳಿಂದ ನಿವೃತ್ತಿಯಾಗಿರುವ ಭಾರತೀಯ ದಿಗ್ಗಜರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಏಕದಿನ ಅಂತರ್ರಾಷ್ಟ್ರೀಯ ಕ್ರಿಕೆಟ್ನಲ್ಲಿ ಮಾತ್ರ ಉಳಿದುಕೊಂಡಿದ್ದಾರೆ. ಈ ಜೋಡಿ ದಕ್ಷಿಣ ಆಫ್ರಿಕಾದಲ್ಲಿ 2027ರಲ್ಲಿ ನಡೆಯಲಿರುವ 50 ಓವರ್ಗಳ ವಿಶ್ವಕಪ್ ಪಂದ್ಯಾವಳಿಯಲ್ಲಿ ಯಶಸ್ಸು ಗಳಿಸುವ ಗುರಿಯನ್ನು ಇಟ್ಟುಕೊಂಡಿದೆ.
2027ರ ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಹಾಗೂ ರೋಹಿತ್ ಆಡುವ ಸಾಧ್ಯತೆ ಕುರಿತ ಪ್ರಶ್ನೆಗೆ ಉತ್ತರಿಸಿದ ಗಂಭೀರ್, ‘‘ 50 ಓವರ್ಗಳ ವಿಶ್ವಕಪ್ ಟೂರ್ನಿಗೆ ಇನ್ನೂ ಎರಡೂವರೆ ವರ್ಷಗಳು ಬಾಕಿ ಇವೆ. ಸದ್ಯದ ವಿಚಾರ ಅತ್ಯಂತ ಮುಖ್ಯವಾಗಿದೆ. ಇಬ್ಬರೂ ಉತ್ತಮ ಆಟಗಾರರು ಹಾಗೂ ಆಸ್ಟ್ರೇಲಿಯ ಕ್ರಿಕೆಟ್ ಪ್ರವಾಸದಲ್ಲಿ ಈ ಇಬ್ಬರ ಅನುಭವ ಅಮೂಲ್ಯವಾದುದು. ಈ ಇಬ್ಬರು ಆಟಗಾರರು ಯಶಸ್ವಿ ಪ್ರವಾಸ ಕೈಗೊಳ್ಳುವ ವಿಶ್ವಾಸದಲ್ಲಿರುವೆ. ಅತ್ಯಂತ ಮುಖ್ಯವಾಗಿ ತಂಡವು ಸರಣಿಯನ್ನು ಜಯಿಸುವ ವಿಶ್ವಾಸದಲ್ಲಿದ್ದೇನೆ’’ ಎಂದರು.
ಅಕ್ಟೋಬರ್ 19, 23 ಹಾಗೂ 25ರಂದು ಪರ್ತ್, ಅಡಿಲೇಡ್ ಹಾಗೂ ಸಿಡ್ನಿಯಲ್ಲಿ ನಡೆಯಲಿರುವ 3 ಪಂದ್ಯಗಳ ಏಕದಿನ ಸರಣಿಗಾಗಿ ಭಾರತ ಪ್ರಕಟಿಸಿರುವ 15 ಸದಸ್ಯರ ಏಕದಿನ ತಂಡದಲ್ಲಿ ವಿರಾಟ್ ಹಾಗೂ ರೋಹಿತ್ ಇದ್ದಾರೆ.
ಇತ್ತೀಚೆಗೆ ಟೆಸ್ಟ್ ನಾಯಕನಾಗಿ ನೇಮಕಗೊಂಡಿರುವ ಶುಭಮನ್ ಗಿಲ್ ಈ ಸರಣಿಯಲ್ಲಿ ಮೊದಲ ಬಾರಿ ಏಕದಿನ ಕ್ರಿಕೆಟ್ ತಂಡದಲ್ಲಿ ಪೂರ್ಣಕಾಲಿಕ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.
ಜೂನ್-ಆಗಸ್ಟ್ನಲ್ಲಿ ಇಂಗ್ಲೆಂಡ್ನಲ್ಲಿ ನಡೆದಿದ್ದ 5 ಪಂದ್ಯಗಳ ಟೆಸ್ಟ್ ಸರಣಿಯನ್ನು 2-2ರಿಂದ ರೋಚಕ ಡ್ರಾನಲ್ಲಿ ಕೊನೆಗೊಳಿಸಿರುವ ಗಿಲ್ ಅವರು ವಿಂಡೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು ಇನಿಂಗ್ಸ್ ಹಾಗೂ 140 ರನ್ಗಳ ಅಂತರದಿಂದ ಗೆದ್ದುಕೊಂಡಿದ್ದರು.







