ಅಫ್ಘಾನಿಸ್ತಾನ ವಿರುದ್ಧ ಏಕದಿನ ಸರಣಿಗೆ ವಿರಾಟ್ ಕೊಹ್ಲಿ ಅಲಭ್ಯ: ಅಜಿತ್ ಅಗರ್ಕರ್

ವಿರಾಟ್ ಕೊಹ್ಲಿ |Photo Credit : PTI
ಹೊಸದಿಲ್ಲಿ, ಜೂ.6: ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಗಾಯದ ಕುರಿತು ಹೆಚ್ಚಿನ ವಿವರ ಹಂಚಿಕೊಂಡಿರುವ ಟೀಮ್ ಇಂಡಿಯಾದ ಆಯ್ಕೆ ಸಮಿತಿಯ ಮುಖ್ಯಸ್ಥ ಅಜಿತ್ ಅಗರ್ಕರ್, ಮುಂಬರುವ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಗೆ ಕೊಹ್ಲಿ ಲಭ್ಯವಿರುವುದಿಲ್ಲ. ಅವರು ಇಂಗ್ಲೆಂಡ್ ಪ್ರವಾಸದ ವೇಳೆ ತಂಡಕ್ಕೆ ಮರಳುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಗರ್ಕರ್, ‘‘ಐಪಿಎಲ್ ಫೈನಲ್ ಪಂದ್ಯದ ವೇಳೆ ವಿರಾಟ್ ಗಾಯಗೊಂಡಿದ್ದರು. ಅವರು ಯಾವಾಗ ಸಂಪೂರ್ಣ ಚೇತರಿಸಿಕೊಳ್ಳಲಿದ್ದಾರೆ ಎಂಬ ಬಗ್ಗೆ ನಿಖರ ಮಾಹಿತಿ ಇಲ್ಲ. ಆದರೆ ಇಂಗ್ಲೆಂಡ್ ಸರಣಿಯ ವೇಳೆಗೆ ಫಿಟ್ ಆಗುವ ಸಾಧ್ಯತೆ ಇದೆ’’ ಎಂದರು.
ಮೇ 31ರಂದು ಅಹ್ಮದಾಬಾದ್ನಲ್ಲಿ ನಡೆದಿದ್ದ 2026ರ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಕೊಹ್ಲಿ ಮಂಡಿರಜ್ಜು ಗಾಯಕ್ಕೆ ಒಳಗಾಗಿದ್ದರು. ಫೈನಲ್ನಲ್ಲಿ ಔಟಾಗದೆ 75 ರನ್ ಗಳಿಸಿದ್ದ ಅವರು, ಆರ್ಸಿಬಿ ಸತತ ಎರಡನೇ ಐಪಿಎಲ್ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಧರ್ಮಶಾಲಾದಲ್ಲಿ ಜೂನ್ 13ರಿಂದ ಆರಂಭವಾಗಲಿರುವ ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಿಂದ ಕೊಹ್ಲಿ ಹೊರಗುಳಿದಿದ್ದಾರೆ. ಏಕದಿನ ಪಂದ್ಯಗಳು ಲಕ್ನೊ ಹಾಗೂ ಚೆನ್ನೈನಲ್ಲೂ ನಡೆಯಲಿವೆ.
ಕೊಹ್ಲಿ ಬದಲಿಗೆ ಯುವ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಆಯ್ಕೆಯಾಗಿದ್ದಾರೆ. ತಮ್ಮ ಹಿಂದಿನ ಏಕದಿನ ಪಂದ್ಯದಲ್ಲಿ ಜೈಸ್ವಾಲ್ ದಕ್ಷಿಣ ಆಫ್ರಿಕಾ ವಿರುದ್ಧ ಶತಕ ಗಳಿಸಿದ್ದರು.
ಕೊಹ್ಲಿ ಅವರು 2026ರ ಐಪಿಎಲ್ ಟೂರ್ನಿಯಲ್ಲಿ 16 ಪಂದ್ಯಗಳಲ್ಲಿ 56.25ರ ಸರಾಸರಿಯಲ್ಲಿ ಹಾಗೂ 165.85ರ ಸ್ಟ್ರೈಕ್ರೇಟ್ನಲ್ಲಿ ಒಟ್ಟು 675 ರನ್ ಗಳಿಸಿದ್ದರು.
ಭಾರತ ತಂಡವು ಜುಲೈ 14ರಿಂದ ಇಂಗ್ಲೆಂಡ್ ವಿರುದ್ಧ ಸರಣಿಯನ್ನಾಡಲಿದೆ. ಕೊಹ್ಲಿ ಅವರ ಲಭ್ಯತೆಯು ಮುಂದಿನ ವಾರಗಳಲ್ಲಿ ಅವರು ಹೇಗೆ ಚೇತರಿಸಿಕೊಳ್ಳಲಿದ್ದಾರೆ ಎಂಬುದನ್ನು ಅವಲಂಬಿಸಿದೆ.
ಅಫ್ಘಾನಿಸ್ತಾನ ವಿರುದ್ಧ ಭಾರತದ ಏಕದಿನ ತಂಡ:
ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್ (ಉಪ ನಾಯಕ), ಕೆ.ಎಲ್. ರಾಹುಲ್ (ವಿಕೆಟ್ಕೀಪರ್), ಇಶಾನ್ ಕಿಶನ್ (ವಿಕೆಟ್ಕೀಪರ್), ಹಾರ್ದಿಕ್ ಪಾಂಡ್ಯ, ನಿತೀಶ್ ಕುಮಾರ್ ರೆಡ್ಡಿ, ವಾಶಿಂಗ್ಟನ್ ಸುಂದರ್, ಕುಲದೀಪ ಯಾದವ್, ಅರ್ಷದೀಪ್ ಸಿಂಗ್, ಪ್ರಸಿದ್ಧ ಕೃಷ್ಣ, ಪ್ರಿನ್ಸ್ ಯಾದವ್, ಗುರ್ನೂರ್ ಬ್ರಾರ್, ಹರ್ಷ ದುಬೆ.






