ಕ್ಲಚ್ ಚೆಸ್ ಲೆಜಂಡ್ಸ್ : ಸಮಯ ಮರೆತು ಸೋಲು ಕಂಡ ವಿಶ್ವನಾಥನ್ ಆನಂದ್!

Photo Credit : NDTV
ಸೈಂಟ್ ಲೂಯಿಸ್, ಅ. 10: ಅಮೆರಿಕದ ಸೇಂಟ್ ಲೂಯಿಸ್ನಲ್ಲಿ ನಡೆಯುತ್ತಿರುವ ವಿಶ್ವನಾಥನ್ ಆನಂದ್ ಮತ್ತು ಗ್ಯಾರಿ ಕ್ಯಾಸ್ಪರೊವ್ ನಡುವಿನ ‘ಕ್ಲಚ್ ಚೆಸ್ ಲೆಜಂಡ್ಸ್’ ಪಂದ್ಯಾವಳಿಯ ಮುಕ್ತಾಯದ ಮುನ್ನಾ ದಿನವಾದ ಗುರುವಾರ ಆನಂದ್ ತನ್ನ ಗೆಲ್ಲುವ ಕೆಲವು ಮುಖ್ಯ ಅವಕಾಶಗಳನ್ನು ಕೈಚೆಲ್ಲಿದರು. ಇದರ ಪರಿಣಾಮವಾಗಿ ರಶ್ಯದ ಚೆಸ್ ದಂತಕತೆ ಕ್ಯಾಸ್ಪರೊವ್ ತನ್ನ ಮುನ್ನಡೆಯನ್ನು ಎರಡು ವಿಜಯಗಳು ಮತ್ತು ಎರಡು ಡ್ರಾಗಳಿಂದ ಐದು ಅಂಕಗಳಿಗೆ ಹೆಚ್ಚಿಸಿಕೊಂಡಿದ್ದಾರೆ.
ಕ್ಯಾಸ್ಪರೊವ್ ಮೊದಲ ಪಂದ್ಯವನ್ನು ಅದೃಷ್ಟದ ಬಲದಿಂದ ಗೆದ್ದರು. ಆ ಪಂದ್ಯದಲ್ಲಿ ವಿಶ್ವನಾಥನ್ ಆನಂದ್ ಗೆಲ್ಲುವ ಹಂತದಲ್ಲಿದ್ದರು. ಆದರೆ, ಗಡಿಯಾರದ ಮೇಲೆ ನಿಗಾ ಇಡಲು ವಿಫಲರಾದ ಅವರಿಗೆ ಪಂದ್ಯವನ್ನು ಮುಗಿಸಲು ಸಮಯದ ಅಭಾವ ಕಾಡಿತು.
ಗುರುವಾರದ ಎಡು ಬ್ಲಿಜ್ ಪಂದ್ಯಗಳ ಪೈಕಿ ಒಂದನ್ನು ಕ್ಯಾಸ್ಪರೊವ್ ಗೆದ್ದರು. ಆ ಮೂಲಕ ಅವರು ತನ್ನ ಮುನ್ನಡೆಯನ್ನು 8.5-3.5ಕ್ಕೆ ಹೆಚ್ಚಿಸಿಕೊಂಡರು.
12 ಪಂದ್ಯಗಳ ಪಂದ್ಯಾವಳಿಯಲ್ಲಿ ಇನ್ನು ನಾಲ್ಕು ಪಂದ್ಯಗಳು ನಡೆಯಬೇಕಾಗಿವೆ. ಹೊಸದಾಗಿ ಪರಿಚಯಿಸಲಾಗಿರುವ ಮಾದರಿಯಿಂದಾಗಿ, ಗೆಲ್ಲಲು ಆನಂದ್ಗೆ ಇನ್ನೂ ಅವಕಾಶವಿದೆ. ಕೊನೆಯ ದಿನವಾದ ಶುಕ್ರವಾರ (ಅಮೆರಿಕದ ಕಾಲಮಾನ) ಪ್ರತಿಯೊಂದು ವಿಜಯಕ್ಕೆ ಮೂರು ಅಂಕಗಳು ಲಭಿಸುತ್ತವೆ ಮತ್ತು ಪ್ರತಿ ಡ್ರಾಗೆ 1.5 ಅಂಕಗಳು ಸಿಗುತ್ತವೆ.





