ಡೋಪಿಂಗ್ ಟೆಸ್ಟ್ಗೆ ನಿರಾಕರಿಸಿದ ವೊಂಡ್ರೋಸೋವಾಗೆ ನಾಲ್ಕು ವರ್ಷ ನಿಷೇಧ

ಮಾರ್ಕೆಟಾ ವೊಂಡ್ರೋಸೋವಾ | Photo Credit : NDTV
ಲಂಡನ್, ಜೂ.22: ಡೋಪಿಂಗ್ ಪರೀಕ್ಷೆಗೆ ಒಳಗಾಗಲು ನಿರಾಕರಿಸಿದ ಮಾಜಿ ವಿಂಬಲ್ಡನ್ ಚಾಂಪಿಯನ್ ಮಾರ್ಕೆಟಾ ವೊಂಡ್ರೋಸೋವಾಗೆ ಸೋಮವಾರ ನಾಲ್ಕು ವರ್ಷಗಳ ಕಾಲ ನಿಷೇಧ ವಿಧಿಸಲಾಗಿದೆ.
2025ರ ಡಿಸೆಂಬರ್ ನಲ್ಲಿ ಸ್ಪರ್ಧೆಯಿಂದ ಹೊರಗಿದ್ದಾಗ ಡೋಪಿಂಗ್ ನಿಯಂತ್ರಣ ಅಧಿಕಾರಿಯೊಬ್ಬರ ಸೂಚನೆಯಂತೆ ಮಾದರಿಯನ್ನು ಸಲ್ಲಿಸಿರಲಿಲ್ಲ.
ಒತ್ತಡ ಹಾಗೂ ಕಳಪೆ ಮಾನಸಿಕ ಆರೋಗ್ಯ, ಜೊತೆಗೆ ತನ್ನ ಸುರಕ್ಷತೆಯ ಬಗೆಗಿನ ಕಳವಳವು ತನ್ನ ನಿರ್ಧಾರದ ಮೇಲೆ ಪರಿಣಾಮ ಬೀರಿದೆ ಎಂದು 2023ರಲ್ಲಿ ವಿಂಬಲ್ಡನ್ ಚಾಂಪಿಯನ್ಶಿಪ್ ಗೆದ್ದಿರುವ 26 ವರ್ಷದ ಝೆಕ್ ಆಟಗಾರ್ತಿ ಹೇಳಿದ್ದಾರೆ.
ಸ್ವತಂತ್ರ ನ್ಯಾಯ ಮಂಡಳಿಯು ವೊಂಡ್ರೋಸೋವಾ ಅವರ ವಾದವನ್ನು ಹಾಗೂ ಪರೀಕ್ಷೆ ನಡೆಸಲು ಪ್ರಯತ್ನಿಸಿದ ಡೋಪಿಂಗ್ ನಿಯಂತ್ರಣ ಅಧಿಕಾರಿಯ ಸಾಕ್ಷ್ಯವನ್ನು ಪರಿಗಣಿಸಿತು.
ವಿಶ್ವದ ನಂ.122ನೇ ಆಟಗಾರ್ತಿ ಪರೀಕ್ಷೆಯನ್ನು ನಿರಾಕರಿಸಲು ನೀಡಿರುವ ಪುರಾವೆಗಳು ಯಾವುದೇ ಸಮರ್ಪಕ ಸಮರ್ಥನೆಯನ್ನು ನೀಡುವುದಿಲ್ಲ ಎಂದು ನ್ಯಾಯ ಮಂಡಳಿ ತೀರ್ಪು ನೀಡಿದೆ.
ವೊಂಡ್ರೋಸೋವಾ ಅವರ ನಿಷೇಧವು 2030ರ ಜೂನ್ 21ಕ್ಕೆ ಕೊನೆಗೊಳ್ಳಲಿದೆ. ನಿಷೇಧದ ಅವಧಿಯಲ್ಲಿ ಝೆಕ್ ಆಟಗಾರ್ತಿ ಐಟಿಎಫ್, ಡಬ್ಲ್ಯುಟಿಎ, ಎಟಿಪಿ, ಗ್ರ್ಯಾನ್ಸ್ಲಾಮ್ ಅಥವಾ ಯಾವುದೇ ರಾಷ್ಟ್ರೀಯ ಸಂಸ್ಥೆಗಳು ಆಯೋಜಿಸುವ ಸ್ಪರ್ಧೆಗಳಲ್ಲಿ ಭಾಗವಹಿಸುವಂತಿಲ್ಲ.
ವೊಂಡ್ರೋಸೋವಾ ಮೂರು ಡಬ್ಲ್ಯುಟಿಎ ಟೂರ್ ಸಿಂಗಲ್ಸ್ ಪ್ರಶಸ್ತಿಗಳನ್ನು ಜಯಿಸಿದ್ದಾರೆ. ವಿಂಬಲ್ಡನ್ ಸಿಂಗಲ್ಸ್ ಪ್ರಶಸ್ತಿ ಗೆದ್ದ ಮೊದಲ ಶ್ರೇಯಾಂಕರಹಿತ ಆಟಗಾರ್ತಿಯಾಗಿದ್ದಾರೆ. 2019ರಲ್ಲಿ ಫ್ರೆಂಚ್ ಓಪನ್ ಫೈನಲ್ಗೆ ತಲುಪಿದ್ದ ಅವರು ಅಶ್ಲೆ ಬಾರ್ಟಿಗೆ ಸೋತಿದ್ದರು. 2021ರ ಟೋಕಿಯೊ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.
2023ರಲ್ಲಿ ಡಬ್ಲ್ಯುಟಿಎ ರ್ಯಾಂಕಿಂಗ್ನಲ್ಲಿ ಆರನೇ ಸ್ಥಾನ ಪಡೆದು ಜೀವನಶ್ರೇಷ್ಠ ಸಾಧನೆ ಮಾಡಿದ್ದರು. ಈ ವರ್ಷ ಡಬ್ಲ್ಯುಟಿಎ ಟೂರ್ನಲ್ಲಿ ಕೇವಲ ಎರಡು ಪಂದ್ಯಗಳನ್ನು ಆಡಿದ್ದರು.






