ಭಾರತದ ಮೊದಲ ಮಹಿಳಾ ಟೆಸ್ಟ್ ಅಂಪೈರ್ ಆಗಿ ಕಾರ್ಯನಿರ್ವಹಿಸಿದ ವೃಂದಾ ರಾಠಿ

ವೃಂದಾ ರಾಠಿ | Photo: X
ನವಿ ಮುಂಬೈ: ಭಾರತದ ಮಹಿಳಾ ತಂಡ 9 ವರ್ಷಗಳ ನಂತರ ಸ್ವದೇಶದಲ್ಲಿ ಆಡುತ್ತಿರುವ ಟೆಸ್ಟ್ ಪಂದ್ಯವು ವೃಂದಾ ಘನಶ್ಯಾಮ್ ರಾಠಿ ಅವರ ಪಾಲಿಗೆ ವಿಶೇಷವಾಗಿದೆ. ಭಾರತ ಹಾಗೂ ಇಂಗ್ಲೆಂಡ್ ಮಧ್ಯೆ ಡಿ.ವೈ. ಪಾಟೀಲ್ ಸ್ಟೇಡಿಯಮ್ ನಲ್ಲಿ ಗುರುವಾರ ಆರಂಭವಾದ ಏಕೈಕ ಟೆಸ್ಟ್ ನ ಮೊದಲ ದಿನದಾಟದಲ್ಲಿ ಭಾರತದ ಮೊದಲ ಮಹಿಳಾ ಟೆಸ್ಟ್ ಅಂಪೈರ್ ಆಗಿ ಕಾರ್ಯನಿರ್ವಹಿಸಿದ ವೃಂದಾ ರಾಠಿ ಭಾರತೀಯ ಮಹಿಳಾ ಕ್ರಿಕೆಟ್ ನ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಿಸಿದರು.
ವೃಂದಾ ತಾನು ಜನಿಸಿರುವ ನವಿ ಮುಂಬೈನಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ಮೊದಲ ಬಾರಿ ಅಂಪೈರ್ ಆಗಿ ಕಾಣಿಸಿಕೊಂಡರು. ಈ ಸಂದರ್ಭವು ವೃಂದಾ ಪಾಲಿಗೆ ಅತ್ಯಂತ ಸ್ಮರಣೀಯವಾಗಿತ್ತು.
ವೃಂದಾ ಅವರು 2014ರಲ್ಲಿ ಮುಂಬೈ ಕ್ರಿಕೆಟ್ ಸಂಸ್ಥೆ ನಡೆಸಿದ್ದ ಅಂಪೈರ್ ಗಳ ಪರೀಕ್ಷೆಯಲ್ಲಿ ಪಾಸಾಗಿದ್ದರು. 4 ವರ್ಷಗಳ ನಂತರ 2018ರಲ್ಲಿ ಬಿಸಿಸಿಐ ನಡೆಸಿದ್ದ ಅಂಪೈರ್ ಗಳ ಪರೀಕ್ಷೆಯಲ್ಲೂ ಉತ್ತೀರ್ಣರಾದರು. ಆ ನಂತರ 34ರ ಹರೆಯದ ವೃಂದಾ ಅವರು 13 ಮಹಿಳೆಯರ ಏಕದಿನ ಹಾಗೂ 43 ಮಹಿಳೆಯರ ಟಿ-20 ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದರು.
2020ರಲ್ಲಿ ವೃಂದಾ ಅವರು ಐಸಿಸಿ ಡೆವಲಪ್ಮೆಂಟ್ ಪ್ಯಾನೆಲ್ ಆಫ್ ಅಂಪೈರ್ ಆಗಿ ಭಡ್ತಿ ಪಡೆದರು. 2022ರಲ್ಲಿ ಇಂಗ್ಲೆಂಡ್ನ ಬರ್ಮಿಂಗ್ ಹ್ಯಾಮ್ ನಲ್ಲಿ ನಡೆದಿದ್ದ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಅಂಪೈರ್ ಆಗಿ ಕೆಲಸ ಮಾಡಿದ್ದರು.
ವೃಂದಾ ಅವರು 2023ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಮಹಿಳಾ ಟಿ-20 ವಿಶ್ವಕಪ್ ನಲ್ಲಿ ಅಂಪೈರ್ ಆಗಿದ್ದರು. ಮೊದಲ ಮಹಿಳಾ ಪ್ರೀಮಿಯರ್ ಲೀಗ್ ನ ಅಂತಿಮ ಪಂದ್ಯದಲ್ಲಿ ಹಾಗೂ ಚೀನಾದ ಹಾಂಗ್ಝೌನಲ್ಲಿ ನಡೆದಿದ್ದ ಏಶ್ಯನ್ ಗೇಮ್ಸ್ ನಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದರು. ವಾಂಖೆಡೆ ಸ್ಟೇಡಿಯಮ್ ನಲ್ಲಿ ಇತ್ತೀಚೆಗೆ ನಡೆದಿದ್ದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟಿ-20 ಸರಣಿಯಲ್ಲೂ ಅಂಪೈರ್ ಆಗಿದ್ದರು.







