ಗಂಭೀರ್ ಬದಲಿಗೆ ವಿವಿಎಸ್ ಲಕ್ಷ್ಮಣ್ ʼಭಾರತದ ಟೆಸ್ಟ್ ಕೋಚ್ʼ ವದಂತಿ: BCCI ಹೇಳಿದ್ದೇನು?

ವಿವಿಎಸ್ ಲಕ್ಷ್ಮಣ್ | Photo Credit : PTI
ಹೊಸದಿಲ್ಲಿ, ಡಿ.28: ಟೀಮ್ ಇಂಡಿಯಾದ ಮುಂದಿನ ಟೆಸ್ಟ್ ತಂಡದ ಕೋಚ್ ಆಗಲು ಭಾರತೀಯ ಬ್ಯಾಟಿಂಗ್ ಲೆಜೆಂಡ್ ವಿವಿಎಸ್ ಲಕ್ಷ್ಮಣ್ ಅವರನ್ನು ಸಂಪರ್ಕಿಸಲಾಗಿದೆ ಎಂಬ ಊಹಾಪೋಹಗಳನ್ನು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ತಳ್ಳಿ ಹಾಕಿದ್ದಾರೆ. ಇದೊಂದು ತಪ್ಪಾದ ಹಾಗೂ ಹುರುಳಿಲ್ಲದ ವಿಚಾರವಾಗಿದೆ. ಟೆಸ್ಟ್ ಕ್ರಿಕೆಟಿನ ನಾಯಕತ್ವದ ಗುಂಪನ್ನು ಬದಲಾಯಿಸುವ ಕುರಿತು ಕ್ರಿಕೆಟ್ ಮಂಡಳಿಯು ಯಾವುದೇ ಹೆಜ್ಜೆಯನ್ನು ಇಟ್ಟಿಲ್ಲ ಎಂದು ಸೈಕಿಯಾ ಸ್ಪಷ್ಟನೆ ನೀಡಿದರು.
''ಇದು ಸಂಪೂರ್ಣ ತಪ್ಪು ಸುದ್ದಿ. ಇದೊಂದು ಊಹಾತ್ಮಕ ಸುದ್ದಿ. ಕೆಲವು ಅತ್ಯಂತ ಪ್ರತಿಷ್ಠಿತ ಸುದ್ದಿಸಂಸ್ಥೆಗಳು ಕೂಡ ಸುದ್ದಿಯನ್ನು ಪ್ರಸಾರ ಮಾಡುತ್ತಿವೆ. ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ. ಬಿಸಿಸಿಐ ಇದನ್ನು ನಿರಾಕರಿಸುತ್ತಿದೆ. ಜನರು ತಮಗೆ ಬೇಕಾದ್ದನ್ನು ಯೋಚಿಸಬಹುದು. ಆದರೆ ಬಿಸಿಸಿಐ ಅಂತಹ ಯಾವುದೇ ಹೆಜ್ಜೆ ಇಟ್ಟಿಲ್ಲ. ಇದು ಯಾರದೋ ಕಲ್ಪನೆ. ಇದು ವಾಸ್ತವಿಕವಾಗಿ ತಪ್ಪು ಹಾಗೂ ಆಧಾರರಹಿತ ಸುದ್ದಿ ಯಾಗಿದೆ'' ಎಂದು ಸೈಕಿಯಾ ANIಗೆ ತಿಳಿಸಿದರು.
ಭಾರತದ ಮುಂದಿನ ಟೆಸ್ಟ್ ತಂಡದ ಕೋಚ್ ಆಗಿಸಲು ಬಿಸಿಸಿಐ ಲಕ್ಷ್ಮಣ್ ರನ್ನು ಸಂಪರ್ಕಿಸಿದೆ ಎಂಬ ಮಾಧ್ಯಮ ವರದಿಗಳು ಎಲ್ಲೆಡೆ ಹರಿದಾಡುತ್ತಿವೆ. ಗೌತಮ್ ಗಂಭೀರ್ ಕೋಚಿಂಗ್ ನಲ್ಲಿ ಭಾರತ ತಂಡವು ಸ್ವದೇಶದಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ಟೆಸ್ಟ್ ಸರಣಿಯಲ್ಲಿ 0-2ರಿಂದ ಕ್ಲೀನ್ ಸ್ವೀಪ್ ಗೆ ಒಳಗಾದ ಕೆಲವು ವಾರಗಳ ನಂತರ ಈ ಸುದ್ದಿ ಹರಿದಾಡುತ್ತಿದೆ.
ಗೌತಮ್ ಗಂಭೀರ್ ಕೋಚಿಂಗ್ ನಲ್ಲಿ ಭಾರತ ತಂಡವು ಸ್ವದೇಶದಲ್ಲಿ ಸತತ ಎರಡನೇ ಬಾರಿ ಟೆಸ್ಟ್ ಸರಣಿಯಲ್ಲಿ ವೈಟ್ ವಾಶ್ ಅನುಭವಿಸಿತ್ತು. ಕಳೆದ ವರ್ಷ ಭಾರತ ತಂಡವು ನ್ಯೂಝಿಲ್ಯಾಂಡ್ ವಿರುದ್ಧ 0-3 ಅಂತರದಿಂದ ಟೆಸ್ಟ್ ಸರಣಿಯನ್ನು ಸೋತಿತ್ತು. ಆಗ ಭಾರತವು 12 ವರ್ಷಗಳ ನಂತರ ಮೊದಲ ಬಾರಿ ಟೆಸ್ಟ್ ಸರಣಿಯನ್ನು ಕಳೆದುಕೊಂಡಿತ್ತು. ದಶಕಗಳ ಕಾಲ ಎಂಎಸ್ ಧೋನಿ, ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾರ ನಾಯಕತ್ವದಲ್ಲಿ ಟೆಸ್ಟ್ ಸಾಮ್ರಾಜ್ಯವನ್ನು ಕಟ್ಟಿದ್ದ ಭಾರತ ಕುಸಿತದ ಹಾದಿ ಹಿಡಿದಿತ್ತು.







