ವಾಂಖೇಡೆ ಸ್ಟೇಡಿಯಮ್ ನಲ್ಲಿ 14,505 ಚೆಂಡುಗಳನ್ನು ಬಳಸಿ ಗಿನ್ನೆಸ್ ವಿಶ್ವ ದಾಖಲೆ

PC : X
ಮುಂಬೈ : ಮುಂಬೈಯ ವಾಂಖೇಡೆ ಸ್ಟೇಡಿಯಮ್ನಲ್ಲಿ ಕ್ರಿಕೆಟ್ ಚೆಂಡುಗಳ ಮೂಲಕ ಅತ್ಯಂತ ದೊಡ್ಡ ವಾಕ್ಯವೊಂದನ್ನು ಬರೆಯುವ ಮೂಲಕ ಮುಂಬೈ ಕ್ರಿಕೆಟ್ ಅಸೋಸಿಯೇಶನ್ (ಎಂಸಿಎ) ನೂತನ ಗಿನ್ನೆಸ್ ವಿಶ್ವ ದಾಖಲೆಯನ್ನು ನಿರ್ಮಿಸಿದೆ. 14,505 ಕೆಂಪು ಮತ್ತು ಬಿಳಿ ಕ್ರಿಕೆಟ್ ಚೆಂಡುಗಳನ್ನು ಬಳಸಿ ‘‘ಫಿಫ್ಟಿ ಇಯರ್ಸ್ ಆಫ್ ವಾಂಖೆಡೆ ಸ್ಟೇಡಿಯಮ್’’ ಎಂದು ಬರೆಯಲಾಗಿದೆ.
ಐತಿಹಾಸಿಕ ವಾಂಖೇಡೆ ಸ್ಟೇಡಿಯಮ್ನ 50ನೇ ವರ್ಷಾಚರಣೆಯ ಅಂಗವಾಗಿ ಏರ್ಪಡಿಸಲಾದ ಆಚರಣೆಗಳ ಭಾಗವಾಗಿ ಈ ಸಾಧನೆಯನ್ನು ಮಾಡಲಾಗಿದೆ.
ಈ ಕ್ರಿಕೆಟ್ ಮೈದಾನವು ಹಲವು ಶ್ರೇಷ್ಠ ಭಾರತೀಯ ಕ್ರಿಕೆಟಿಗರ ತವರು ಮೈದಾನವಾಗಿದೆ. ಇದೇ ಮೈದಾನದಲ್ಲಿ 2011ರಲ್ಲಿ ಭಾರತೀಯ ಕ್ರಿಕೆಟ್ ತಂಡವು ತನ್ನ ಎರಡನೇ 50 ಓವರ್ಗಳ ವಿಶ್ವಕಪ್ ಜಯಿಸಿತ್ತು.
‘‘ವಾಂಖೇಡೆ ಸ್ಟೇಡಿಯಮ್ನಲ್ಲಿ, 14,505 ಕೆಂಪು ಮತ್ತು ಬಿಳಿ ಕ್ರಿಕೆಟ್ ಚೆಂಡುಗಳನ್ನು ಬಳಸಿ ‘‘ಫಿಫ್ಟಿ ಇಯರ್ಸ್ ಆಫ್ ವಾಂಖೆಡೆ ಸ್ಟೇಡಿಯಮ್’’ ಎಂದು ಇಂಗ್ಲಿಷ್ನಲ್ಲಿ ವಾಕ್ಯವನ್ನು ರಚಿಸಿ ಮುಂಬೈ ಕ್ರಿಕೆಟ್ ಅಸೋಸಿಯೇಶನ್ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಲಾಗಿದೆ ಎಂದು ತಿಳಿಸಲು ನಾವು ರೋಮಾಂಚಿತರಾಗಿದ್ದೇವೆ’’ ಎಂದು ಎಂಸಿಎ ಅಧ್ಯಕ್ಷ ಅಜಿಂಕ್ಯ ನಾಯಕ್ ಹೇಳಿದ್ದಾರೆ.





