ಐಪಿಎಲ್ ನ 'ಇಂಪ್ಯಾಕ್ಟ್ ಪ್ಲೇಯರ್' ನಿಯಮಕ್ಕೆ ವಸೀಮ್ ಜಾಫರ್ ಆಕ್ಷೇಪ
ಆಲ್ರೌಂಡರ್ ಗಳಿಗೆ ಬೌಲ್ ಮಾಡಲು ಅವಕಾಶ ನೀಡುವುದಿಲ್ಲ ಎಂದ ಮಾಜಿ ಕ್ರಿಕೆಟಿಗ

ವಸೀಮ್ ಜಾಫರ್ | Photo: @WasimJaffer14 \ X
ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ತನ್ನ 'ಇಂಪ್ಯಾಕ್ಟ್ ಪ್ಲೇಯರ್' ನಿಯಮವನ್ನು ತೆಗೆದುಹಾಕಬೇಕು ಎಂದು ಭಾರತೀಯ ಕ್ರಿಕೆಟ್ ತಂಡದ ಮಾಜಿ ಬ್ಯಾಟರ್ ವಸೀಮ್ ಜಾಫರ್ ರವಿವಾರ ಹೇಳಿದ್ದಾರೆ. ಈ ನಿಯಮವು ಬೌಲ್ ಮಾಡಲು ಆಲ್ರೌಂಡರ್ ಗಳನ್ನು ಉತ್ತೇಜಿಸುವುದಿಲ್ಲ. ಅವರ ಬೌಲಿಂಗ್ ಕೊರತೆಯು ಭಾರತೀಯ ಕ್ರಿಕೆಟಿಗೆ ಆತಂಕಕಾರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
'ಇಂಪ್ಯಾಕ್ಟ್ ಪ್ಲೇಯರ್' ನಿಯಮವು ಆಲ್ ರೌಂಡರ್ಗಳು ಬೌಲ್ ಮಾಡುವುದನ್ನು ಹೇಗೆ ತಡೆಯುತ್ತದೆ. ಅದು ಒಟ್ಟಾರೆಯಾಗಿ ಅವರ ಬೆಳವಣಿಗೆಯನ್ನು ಹೇಗೆ ತಡೆಯುತ್ತದೆ ಎನ್ನುವುದನ್ನು ಅವರು ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಹಾಕಿದ ಸಂದೇಶವೊಂದರಲ್ಲಿ ವಿವರಿಸಿದ್ದಾರೆ.
“ಐಪಿಎಲ್ ತನ್ನ 'ಇಂಪ್ಯಾಕ್ಟ್ ಪ್ಲೇಯರ್' ನೀತಿಯನ್ನು ಹಿಂದಕ್ಕೆ ಪಡೆದುಕೊಳ್ಳಬೇಕಾದ ಅಗತ್ಯವಿದೆ ಎಂದು ನನಗನಿಸುತ್ತದೆ. ಯಾಕೆಂದರೆ ಅದು ಆಲ್ ರೌಂಡರ್ ಗಳು ಹೆಚ್ಚು ಬೌಲ್ ಮಾಡಲು ಅವಕಾಶ ನೀಡುವುದಿಲ್ಲ. ಆಲ್ ರೌಂಡರ್ ಗಳು ಮತ್ತು ಬ್ಯಾಟರ್ ಗಳು ಬೌಲ್ ಮಾಡದಿರುವುದು ಭಾರತೀಯ ಕ್ರಿಕೆಟಿಗೆ ಪೂರಕವಾಗಿರುವುದಿಲ್ಲ. ನಿಮಗೇನಾದರೂ ಹೀಗೆ ಅನಿಸುತ್ತಿದೆಯೇ?'' ಎಂದು ಅವರು ತನ್ನ ಸಂದೇಶದಲ್ಲಿ ಪ್ರಶ್ನಿಸಿದ್ದಾರೆ.
'ಇಂಪ್ಯಾಕ್ಟ್ ಪ್ಲೇಯರ್' ನಿಯಮದ ಪ್ರಕಾರ, ಐಪಿಎಲ್ ತಂಡವೊಂದು ಪಂದ್ಯವೊಂದರ ನಡುವೆ, ಆಡುವ ಹನ್ನೊಂದರ ಬಳಗದ ಯಾವುದೇ ಸದಸ್ಯನ ಸ್ಥಾನಕ್ಕೆ ಬದಲಿ ಆಟಗಾರನೊಬ್ಬನನ್ನು ತರಬಹುದಾಗಿದೆ. ಅದಕ್ಕಾಗಿ ಟಾಸ್ ಸಂದರ್ಭದಲ್ಲಿ, ಆಡುವ ಹನ್ನೊಂದು ಆಟಗಾರರ ಪಟ್ಟಿಯೊಂದಿಗೆ ಐವರು ಬದಲಿ ಆಟಗಾರರ ಪಟ್ಟಿಯನ್ನೂ ತಂಡವು ಒದಗಿಸಬೇಕಾಗುತ್ತದೆ. ಈ ಐವರು ಬದಲಿ ಆಟಗಾರರ ಪಟ್ಟಿಯಿಂದ ಯಾವುದಾರೂ ಒಬ್ಬ ಆಟಗಾರನನ್ನು ಇಳಿಸಬಹುದಾಗಿದೆ. ಬ್ಯಾಟಿಂಗ್ ಅಥವಾ ಬೌಲಿಂಗ್ ನಲ್ಲಿ ತಂಡಗಳಿಗೆ ಹೆಚ್ಚಿನ ಸಾಮಥ್ರ್ಯವನ್ನು ಒದಗಿಸಲು ಈ ನಿಯಮವನ್ನು ಜಾರಿಗೆ ತರಲಾಗಿದೆ.







