2005ರ ವಿಶ್ವಕಪ್ನಲ್ಲಿ ಪ್ರತೀ ಪಂದ್ಯಕ್ಕೆ 1,000 ರೂ. ಸ್ವೀಕರಿಸಿದ್ದೆವು : ಮಿಥಾಲಿ ರಾಜ್

Image Source : PTI
ಹೊಸದಿಲ್ಲಿ, ನ.4: ಸುಮಾರು 2 ದಶಕಗಳ ಹಿಂದೆ ಭಾರತದ ಮಹಿಳಾ ಕ್ರಿಕೆಟ್ ತಂಡವನ್ನು ಮೊದಲ ಬಾರಿ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಮುನ್ನಡೆಸಿದ್ದ ಮಾಜಿ ನಾಯಕಿ ಮಿಥಾಲಿ ರಾಜ್, ಒಂದು ಕಾಲದಲ್ಲಿ ಮಹಿಳಾ ಕ್ರಿಕೆಟ್ ತಂಡ ಎದುರಿಸುತ್ತಿದ್ದ ಸಮಸ್ಯೆಯನ್ನು ತೆರೆದಿಟ್ಟಿದ್ದು, ಆಗ ನಮಗೆ ಹಣಕ್ಕಿಂತ ಬದ್ಧತೆ ಮುಖ್ಯವಾಗಿತ್ತು ಎಂದಿದ್ದಾರೆ.
ಭಾರತದ ಮಹಿಳಾ ತಂಡವು 2025ರ ವಿಶ್ವಕಪ್ ಟ್ರೋಫಿಯನ್ನು ಜಯಿಸಿದ ನಂತರ ಮಿಥಾಲಿ ರಾಜ್ ಅವರು ‘ದ ಲಲನ್ಟಾಪ್’ಗೆ ನೀಡಿರುವ ಹಳೆಯ ಸಂದರ್ಶನದ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
‘‘2005ರ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ನಾವು ರನ್ನರ್ಸ್ ಅಪ್ ಆಗಿದ್ದಾಗ ಪ್ರತಿಯೊಬ್ಬರೂ ಪ್ರತೀ ಪಂದ್ಯಕ್ಕೆ ತಲಾ 1,000ರೂ. ಸ್ವೀಕರಿಸಿದ್ದೆವು. ಆ ಪಂದ್ಯಾವಳಿಯಲ್ಲಿ ನಾವು 8 ಪಂದ್ಯಗಳನ್ನು ಆಡಿದ್ದೆವು. ಹೀಗಾಗಿ ಒಟ್ಟು 8,000 ರನ್ ಸ್ವೀಕರಿಸಿದ್ದೆವು. ಆಗ ನಮಗೆ ವಾರ್ಷಿಕ ಒಪ್ಪಂದವಾಗಲಿ ಅಥವಾ ಪಂದ್ಯ ಶುಲ್ಕವಾಗಲಿ ಸರಿಯಾಗಿ ಇರಲಿಲ್ಲ’’ ಎಂದು ಮಿಥಾಲಿ ಹೇಳಿದ್ದಾರೆ.
2005ರಲ್ಲಿ ಭಾರತದಲ್ಲಿ ಮಹಿಳೆಯರ ಕ್ರಿಕೆಟ್ನ್ನು ಭಾರತದ ಮಹಿಳೆಯರ ಕ್ರಿಕೆಟ್ ಅಸೋಸಿಯೇಶನ್(ಡಬ್ಲ್ಯುಸಿಎಐ)ನಿರ್ವಹಿಸುತ್ತಿತ್ತು. ಯಾವುದೇ ಪ್ರಮುಖ ಪ್ರಾಯೋಜಕರಿಲ್ಲದೆ ಅಥವಾ ಉತ್ತಮ ಆರ್ಥಿಕ ಬೆಂಬಲವಿಲ್ಲದೆ ಕಾರ್ಯನಿರ್ವಹಿಸುತ್ತಿತ್ತು. ಆಟಗಾರ್ತಿಯರು ರೈಲಿನ ಸಾಮಾನ್ಯ ಬೋಗಿಗಳಲ್ಲಿ ಪ್ರಯಾಣಿಸುತ್ತಿದ್ದರು. ಸಾಧಾರಣ ಹೋಟೇಲ್ಗಳಲ್ಲಿ ತಂಗುತ್ತಿದ್ದರು.
‘‘ಕ್ರಿಕೆಟ್ ಅಸೋಸಿಯೇಶನ್ನಲ್ಲೇ ನಿಧಿ ಇರಲಿಲ್ಲ. ಹೀಗಾಗಿ ಸಾಕಷ್ಟು ಹಣವೂ ಇರಲಿಲ್ಲ. ನಮಗೆ ಸಾಕಷ್ಟು ವೇತನ ಲಭಿಸುತ್ತಿರಲಿಲ್ಲ. ಆದರೆ, ಕ್ರಿಕೆಟ್ ಮೇಲಿನ ಪ್ರೀತಿಯಿಂದ ನಾವು ಉತ್ಸಾಹದಿಂದ ಆಡುತ್ತಿದ್ದೆವು’’ ಎಂದು ಮಿಥಾಲಿ ಹೇಳಿದ್ದಾರೆ.
2006ರಲ್ಲಿ ಮಹಿಳೆಯರ ಕ್ರಿಕೆಟ್ ಅನ್ನು ಬಿಸಿಸಿಐ ತನ್ನ ತೆಕ್ಕೆಗೆ ಸೇರಿಸಿಕೊಂಡ ನಂತರ ಬದಲಾವಣೆ ಆರಂಭವಾಯಿತು. ಬಲಿಷ್ಠ ಹಣಕಾಸು ಬೆಂಬಲ ಹಾಗೂ ಉತ್ತಮ ಮೂಲಭೂತ ಸೌಕರ್ಯದಿಂದಾಗಿ ಆಟಗಾರ್ತಿಯರು ಪ್ರತೀ ಸರಣಿಗೆ ಹಾಗೂ ಪ್ರತೀ ಪಂದ್ಯಕ್ಕೂ ವೇತನ ಪಡೆಯಲಾರಂಭಿಸಿದರು.
2022ರಲ್ಲಿ ದೊಡ್ಡ ಬದಲಾವಣೆಯಾಗಿದ್ದು, ಪುರುಷರು ಹಾಗೂ ಮಹಿಳಾ ಕ್ರಿಕೆಟಿಗರಿಗೆ ಸಮಾನ ಪಂದ್ಯ ಶುಲ್ಕಗಳನ್ನು ಬಿಸಿಸಿಐ ಪ್ರಕಟಿಸಿತು. ಇದೀಗ ಮಹಿಳಾ ಕ್ರಿಕೆಟಿಗರು ಟೆಸ್ಟ್ ಪಂದ್ಯಕ್ಕೆ ತಲಾ 15 ಲಕ್ಷ ರೂ., ಏಕದಿನ ಪಂದ್ಯಕ್ಕೆ 6 ಲಕ್ಷ ರೂ. ಹಾಗೂ ಟಿ-20 ಪಂದ್ಯಕ್ಕೆ 3 ಲಕ್ಷ ರೂ. ಗಳಿಸುತ್ತಿದ್ದಾರೆ.
2017ರ ವಿಶ್ವಕಪ್ನಲ್ಲೂ ಭಾರತದ ಮಹಿಳಾ ತಂಡವನ್ನು ಫೈನಲ್ನಲ್ಲಿ ಮುನ್ನಡೆಸಿದ್ದ ಮಿಥಾಲಿ ಅವರ ಕ್ರಿಕೆಟ್ ಪಯಣವು ಸಂಪೂರ್ಣ ಒಂದು ವೃತ್ತ ಪೂರೈಸಿದೆ. ಪ್ರತೀ ಪಂದ್ಯಕ್ಕೆ 1,000ರೂ. ಸ್ವೀಕರಿಸುವುದರಿಂದ ಆರಂಭಿಸಿ ಭಾರತದ ಮಹಿಳಾ ತಂಡ ಪರಿಪೂರ್ಣ ವೃತ್ತಿಪರತೆಯೊಂದಿಗೆ ವಿಶ್ವ ದರ್ಜೆಯ ವ್ಯವಸ್ಥೆಗಳು ಹಾಗೂ ಸಮಾನ ವೇತನದೊಂದಿಗೆ ವಿಶ್ವಕಪ್ ಎತ್ತಿ ಹಿಡಿದಿರುವುದನ್ನು ನೋಡಿದ್ದಾರೆ.







