ಬುಧವಾರ (ನಾಳೆ) ಭಾರತ-ಅಫ್ಘಾನಿಸ್ತಾನ ಕೊನೆಯ ಟಿ20 ; ವಿಶ್ವಕಪ್ಗಾಗಿ ಆಕ್ರಮಣಶೀಲತೆಯತ್ತ ಭಾರತದ ಚಿತ್ತ!

Photo: X/@bcci
ಬೆಂಗಳೂರು: ಭಾರತ ಮತ್ತು ಪ್ರವಾಸಿ ಅಫ್ಘಾನಿಸ್ತಾನ ಕ್ರಿಕೆಟ್ ತಂಡಗಳ ನಡುವಿನ ಟ್ವೆಂಟಿ20 ಸರಣಿಯ ಮೂರನೇ ಹಾಗೂ ಕೊನೆಯ ಪಂದ್ಯವು ಬುಧವಾರ ಬೆಂಗಳೂರಿನ ಚಿನ್ನಾಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಈ ಸರಣಿಯನ್ನು ಈಗಾಗಲೇ 2-0 ಅಂತರದಿಂದ ಗೆದ್ದಿರುವ ಭಾರತಕ್ಕೆ, ಜೂನ್ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಮುನ್ನ ತಂಡದಲ್ಲಿ ಪ್ರಯೋಗಗಳನ್ನು ನಡೆಸಲು ಇದು ಒಳ್ಳೆಯ ಅವಕಾಶವಾಗಿದೆ. ಟಿ20 ಪಂದ್ಯದಲ್ಲಿ ಆಕ್ರಮಣಕಾರಿ ಧೋರಣೆಯನ್ನು ಅನುಸರಿಸುವ ನಿಟ್ಟಿನಲ್ಲಿ ಅದು ಪ್ರಯೋಗಗಳನ್ನು ಮಾಡುವ ನಿರೀಕ್ಷೆಯಿದೆ.
ವಿಶ್ವಕಪ್ಗೆ ಮುನ್ನ ಇದು ಭಾರತ ಆಡಲಿರುವ ಕೊನೆಯ ಅಂತರ್ರಾಷ್ಟ್ರೀಯ ಟಿ20 ಪಂದ್ಯವಾಗಿದೆ. ಹಾಗಾಗಿ, ಮೊಹಾಲಿ ಮತ್ತು ಇಂದೋರ್ ಗಳಲ್ಲಿ ಪ್ರದರ್ಶಿಸಿರುವ ಆಕ್ರಮಣಶೀಲತೆಗಿಂತಲೂ ಒಂದು ಹಂತ ಮೇಲಿನ ಆಕ್ರಮಣಶೀಲತೆಯೊಂದಿಗೆ ಪ್ರಯೋಗ ನಡೆಸಲು ಭಾರತೀಯ ತಂಡದ ಆಡಳಿತ ಮುಂದಾಗಿದೆ.
ಮೊದಲ ಎರಡು ಪಂದ್ಯಗಳಲ್ಲಿ ಭಾರತದ ಆಕ್ರಮಣಶೀಲ ಧೋರಣೆ ಫಲ ನೀಡಿದೆ. ಮೊದಲ ಪಂದ್ಯದಲ್ಲಿ ಭಾರತವು 17.3 ಓವರ್ಗಳಲ್ಲಿ ವಿಜಯದ ಗುರಿ 159 ರನ್ಗಳನ್ನು ಮತ್ತು ಎರಡನೇ ಪಂದ್ಯದಲ್ಲಿ 15.4 ಒವರ್ ಗಳಲ್ಲಿ ವಿಜಯದ ಗುರಿ 173 ರನ್ಗಳನ್ನು ಯಶಸ್ವಿಯಾಗಿ ಬೆನ್ನತ್ತಿದೆ.
14 ತಿಂಗಳ ಅಂತರದ ಬಳಿಕ ಮೊದಲ ಅಂತರ್ರಾಷ್ಟ್ರೀಯ ಟಿ20 ಪಂದ್ಯ ಆಡಿದ ವಿರಾಟ್ ಕೊಹ್ಲಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಇಂದೋರ್ ನಲ್ಲಿ ಅವರು 16 ಎಸೆತಗಳಲ್ಲಿ 29 ರನ್ಗಳನ್ನು ಸಿಡಿಸಿ ತನ್ನ ಆಕ್ರಮಣಶೀಲತೆಯನ್ನು ಪ್ರದರ್ಶಿಸಿದರು.
ಮೂರು ವರ್ಷಗಳ ಬಳಿಕ ತಂಡಕ್ಕೆ ಮರಳಿರುವ ಶಿವಮ್ ದುಬೆ ಕೂಡ ತನ್ನ ಸಾಮರ್ಥ್ಯವನ್ನು ನಿರೂಪಿಸಿದರು. ಅವರು ಎರಡು ಸ್ಫೋಟಕ ಅರ್ಧ ಶತಕಗಳನ್ನು ಸಿಡಿಸಿದರು.
ಗಾಯದಿಂದಾಗಿ ಮೊದಲ ಪಂದ್ಯದಿಂದ ಹೊರಗುಳಿದು, ಎರಡನೇ ಪಂದ್ಯದಲ್ಲಿ ಆಡಿದ ಯಶಸ್ವಿ ಜೈಸ್ವಾಲ್ ಕೂಡ ಕ್ಷಿಪ್ರ ಅರ್ಧ ಶತಕದ ಮೂಲಕ ತನ್ನ ಉಪಯುಕ್ತತೆಯನ್ನು ಸಾಬೀತುಪಡಿಸಿದರು.
ಆದರೆ, ನಾಯಕ ರೋಹಿತ್ ಶರ್ಮರಿಗೆ ಅದು ನಿರಾಶಾದಾಯಕ ಸರಣಿಯಾಗಿತ್ತು. ಮೊದಲ ಪಂದ್ಯದಲ್ಲಿ ಅವರು ಶೂನ್ಯಕ್ಕೆ ರನೌಟ್ ಆದರೆ, ಎರಡನೇ ಪಂದ್ಯದಲ್ಲಿ ಎಸೆತವೊಂದನ್ನು ತಪ್ಪು ಅಂದಾಜಿಸಿ ಶೂನ್ಯಕ್ಕೆ ಮರಳಿದರು.
ಮೂರನೇ ಪಂದ್ಯದಲ್ಲಿ ಬೌಲರ್ಗಳಾದ ಕುಲದೀಪ್ ಯಾದವ್ ಮತ್ತು ಆವೇಶ್ ಖಾನ್ರನ್ನು ಆಡಲು ಇಳಿಸುವ ಸಾಧ್ಯತೆಗಳಿವೆ.
ಅಫ್ಘಾನಿಸ್ತಾನದ ಪಾಲಿಗೆ ಈ ಸರಣಿಯು ಭರವಸೆಯನ್ನು ಹುಟ್ಟಿಸಿದೆ. ಆ ತಂಡದ ಆಟಗಾರರು ಅಲ್ಲೊಮ್ಮೆ ಇಲ್ಲೊಮ್ಮೆ ಮಿಂಚಿದ್ದಾರೆ. ಆದರೆ, ಆ ನಿರ್ವಹಣೆಗಳನ್ನು ಗೆಲುವಾಗಿ ಪರಿವರ್ತಿಸಿಕೊಳ್ಳಲು ಅದಕ್ಕೆ ಸಾಧ್ಯವಾಗಿಲ್ಲ.
ಪಂದ್ಯ ಆರಂಭ ಸಂಜೆ 7 ಗಂಟೆ
ತಂಡಗಳು
ಭಾರತ: ರೋಹಿತ್ ಶರ್ಮ (ನಾಯಕ), ಶುಬ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ತಿಲಕ್ ವರ್ಮ, ರಿಂಕು ಸಿಂಗ್, ಜಿತೇಶ್ ಶರ್ಮ (ವಿಕೆಟ್ಕೀಪರ್), ಸಂಜು ಸ್ಯಾಮನ್ಸ್ (ವಿಕೆಟ್ಕೀಪರ್), ಶಿವಮ್ ದುಬೆ, ವಾಶಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ರವಿ ಬಿಷ್ಣೋಯಿ, ಕುಲದೀಪ್ ಯಾದವ್, ಅರ್ಶದೀಪ್ ಸಿಂಗ್, ಆವೇಶ್ ಖಾನ್, ಮುಕೇಶ್ ಕುಮಾರ್.
ಅಫ್ಘಾನಿಸ್ತಾನ: ಇಬ್ರಾಹೀಮ್ ಝದ್ರಾನ್ (ನಾಯಕ), ರಹ್ಮಾನುಲ್ಲಾ ಗುರ್ಬಾಝ್ (ವಿಕೆಟ್ಕೀಪರ್), ಇಕ್ರಮ್ ಅಲಿಖಿಲ್ (ವಿಕೆಟ್ಕೀಪರ್), ಹಝ್ರತುಲ್ಲಾ ಝಝೈ, ರಹಮತ್ ಶಾ, ನಜೀಬುಲ್ಲಾ ಝದ್ರಾನ್, ಮುಹಮ್ಮದ್ ನಬಿ, ಕರೀಮ್ ಜಾನತ್, ಅಝ್ಮತುಲ್ಲಾ ಉಮರ್ಝಾಯಿ, ಶರಾಫುದ್ದೀನ್ ಅಶ್ರಫ್, ಮುಜೀಬುರ್ರಹ್ಮಾನ್, ಫಝಲ್ಹಕ್ ಫಾರೂಖಿ, ಫರೀದ್ ಅಹ್ಮದ್, ನವೀನ್ ಉಲ್ ಹಕ್, ನೂರ್ ಅಹ್ಮದ್, ಮುಹಮ್ಮದ್ ಸಲೀಮ್, ಖಾಯಿಸ್ ಅಹ್ಮದ್, ಗುಲ್ಬದೀನ್ ನಯೀಬ್, ರಶೀದ್ ಖಾನ್.
ಪ್ಯಾಟ್ ಕಮಿನ್ಸ್, ದೀಪ್ತಿ ಶರ್ಮ ಐಸಿಸಿ ಡಿಸೆಂಬರ್ ತಿಂಗಳ ಶ್ರೇಷ್ಠ ಆಟಗಾರರು (ವಾ)
ದುಬೈ: ಆಸ್ಟ್ರೇಲಿಯ ಕ್ರಿಕೆಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಐಸಿಸಿ ಡಿಸೆಂಬರ್ ತಿಂಗಳ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಗೆದ್ದರೆ, ಭಾರತದ ದೀಪ್ತಿ ಶರ್ಮ ಐಸಿಸಿ ಡಿಸೆಂಬರ್ ತಿಂಗಳ ಶ್ರೇಷ್ಠ ಆಟಗಾರ್ತಿ ಪ್ರಶಸ್ತಿ ಪಡೆದಿದ್ದಾರೆ ಎಂದು ಅಂತರ್ರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯ ಪ್ರಕಟನೆಯೊಂದು ಮಂಗಳವಾರ ತಿಳಿಸಿದೆ.
ಪಾಕಿಸ್ತಾನದ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಗಳಿಸಿರುವ ಗೆಲುವಿನಲ್ಲಿ ವಹಿಸಿರುವ ಪಾತ್ರಕ್ಕಾಗಿ ಪ್ಯಾಟ್ ಕಮಿನ್ಸ್ ರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅದೇ ವೇಳೆ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯ ವಿರುದ್ಧದ ಬಹು ಮಾದರಿ ಕ್ರಿಕೆಟ್ ಸರಣಿಯಲ್ಲಿ ನೀಡಿರುವ ಉತ್ತಮ ಪ್ರದರ್ಶನಕ್ಕಾಗಿ ದೀಪ್ತಿ ಶರ್ಮರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ದೀಪ್ತಿ ಈ ಪ್ರಶಸ್ತಿಯನ್ನು ಮೊದಲ ಬಾರಿ ಪಡೆದಿದ್ದಾರೆ.
ಡಿಸೆಂಬರ್ ನಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಆಸ್ಟ್ರೇಲಿಯದ ಟೆಸ್ಟ್ ವಿಜಯದಲ್ಲಿ ಕಮಿನ್ಸ್ ಮಹತ್ವದ ಪಾತ್ರ ವಹಿಸಿದ್ದಾರೆ. ಅವರ ನಾಯಕತ್ವ ಮತ್ತು ಬೌಲಿಂಗ್ ಚಳಕದಿಂದಾಗಿ 2023ರಲ್ಲಿ ಆಸ್ಟ್ರೇಲಿಯ ಯಶಸ್ಸಿನತ್ತ ದಾಪುಗಾಲಿರಿಸಿದೆ. ಅದು ತನ್ನ ಚೊಚ್ಚಲ ಟೆಸ್ಟ್ ಚಾಂಪಿಯನ್ಶಿಪ್ ಗೆದ್ದಿತು ಹಾಗೂ ಬಳಿಕ, ತನ್ನ ಆರನೇ ಏಕದಿನ ಕ್ರಿಕೆಟ್ ವಿಶ್ವಕಪ್ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿತು.
ಮೆಲ್ಬರ್ನ್ನಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಎರಡನೇ ಟೆಸ್ಟ್ನಲ್ಲಿ ಕಮಿನ್ಸ್ 10 ವಿಕೆಟ್ಗಳನ್ನು ಉರುಳಿಸಿದರು.
ಬಾಂಗ್ಲಾದೇಶದ ತೈಜುಲ್ ಇಸ್ಲಾಮ್ ಮತ್ತು ನ್ಯೂಝಿಲ್ಯಾಂಡ್ನ ಗ್ಲೆನ್ ಫಿಲಿಪ್ಸ್ರನ್ನು ಹಿಂದಿಕ್ಕಿ ಕಮಿನ್ಸ್ ಪ್ರಶಸ್ತಿ ಗೆದ್ದರೆ, ತನ್ನದೇ ತಂಡದ ಜೆಮಿಮಾ ರೋಡ್ರಿಗಸ್ ಮತ್ತು ಝಿಂಬಾಬ್ವೆಯ ಪ್ರೇಶಿಯಸ್ ಮರಾಂಗೆಯನ್ನು ಹಿಂದಿಕ್ಕಿ ದೀಪ್ತಿ ಶರ್ಮ ಪ್ರಶಸ್ತಿ ಪಡೆದಿದ್ದಾರೆ.
ಈ ನಡುವೆ, 2023ರ ಸಾಧನೆಗಾಗಿ ನೀಡುವ ಸರ್ ಗ್ಯಾರಿಫೀಲ್ಡ್ ಸೋಬರ್ಸ್ ಟ್ರೋಫಿ ಪ್ರಶಸ್ತಿಗಾಗಿ ಕಮಿನ್ಸ್ ನಾಮನಿರ್ದೇಶನಗೊಂಡಿದ್ದಾರೆ.
ಪ್ರಶಸ್ತಿಗೆ ಪ್ರತಿಕ್ರಿಯಿಸಿರುವ ದೀಪ್ತಿ ಶರ್ಮ, “ಡಿಸೆಂಬರ್ ತಿಂಗಳ ಐಸಿಸಿ ಶ್ರೇಷ್ಠ ಆಟಗಾರ್ತಿ ಪ್ರಶಸ್ತಿಗೆ ಆಯ್ಕೆಯಾಗಿರುವುದು ನನಗೆ ಸಿಕ್ಕಿದ ದೊಡ್ಡ ಗೌರವವಾಗಿದೆ. ನನ್ನ ನಿರ್ವಹಣೆಯ ಬಗ್ಗೆ ಈ ಕ್ಷಣದಲ್ಲಿ ನನಗೆ ಸಂತೋಷವಾಗುತ್ತಿದೆ. ಕಷ್ಟಪಟ್ಟು ಕೆಲಸ ಮಾಡುವುದನ್ನು ನಾನು ಮುಂದುವರಿಸುತ್ತೇನೆ. ಮುಂದಿನ ದಿನಗಳಲ್ಲಿ ಇಂಥದೇ ಕ್ಷಣಗಳನ್ನು ನಾನು ಎದುರು ನೋಡುತ್ತೇನೆ’’ ಎಂದು ಹೇಳಿದ್ದಾರೆ.







