West Bengal | "ತಪ್ಪು ಮಾಡಬೇಡಿ": ಬಿಜೆಪಿ ಆಡಳಿತ ರಾಜ್ಯಗಳಲ್ಲಿ ಕೆಲಸ ಮಾಡುವ ಮುಸ್ಲಿಂ ವಲಸೆ ಕಾರ್ಮಿಕರಿಗೆ ಸುವೇಂದು ಅಧಿಕಾರಿ ಎಚ್ಚರಿಕೆ

ಸುವೇಂದು ಅಧಿಕಾರಿ | Photo Credit : PTI
ಹೊಸದಿಲ್ಲಿ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಪ್ರಚಾರದ ವೇಳೆ ಬಿಜೆಪಿ ನಾಯಕ ಹಾಗೂ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ನೀಡಿದ ಹೇಳಿಕೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಕೆಲಸ ಮಾಡುತ್ತಿರುವ ಮುಸ್ಲಿಂ ವಲಸೆ ಕಾರ್ಮಿಕರಿಗೆ ಅವರು ನೀಡಿದ ಎಚ್ಚರಿಕೆ ಭೀತಿಯ ವಾತಾವರಣ ಸೃಷ್ಟಿಸುವಂತಿದೆ ಎಂಬ ಟೀಕೆಗಳು ವ್ಯಕ್ತವಾಗಿವೆ.
ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ನಡೆಯುತ್ತಿರುವ ಸಂದರ್ಭದಲ್ಲೇ ಸಾಮೂಹಿಕ ಮತದಾರರ ಹಕ್ಕು ನಿರಾಕರಣೆಯ ಕುರಿತು ಕಳವಳಗಳು ವ್ಯಕ್ತವಾಗುತ್ತಿರುವ ಸಮಯದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.
ನಂದಿಗ್ರಾಮ ಕ್ಷೇತ್ರವನ್ನು ಉಲ್ಲೇಖಿಸಿದ ಅವರು, ಸಾವಿರಾರು ವಲಸೆ ಕಾರ್ಮಿಕರು ಗುಜರಾತ್, ಮಹಾರಾಷ್ಟ್ರ ಹಾಗೂ ಒಡಿಶಾ ರಾಜ್ಯಗಳಲ್ಲಿ ಉದ್ಯೋಗದಲ್ಲಿದ್ದಾರೆ ಎಂದು ಹೇಳಿದರು. “ನಂದಿಗ್ರಾಮದ 30,000ಕ್ಕೂ ಹೆಚ್ಚು ವಲಸೆ ಕಾರ್ಮಿಕರಿದ್ದಾರೆ. ಗುಜರಾತ್ ನಲ್ಲಿ 1,100 ಮುಸ್ಲಿಂ ಯುವಕರು, ಒಡಿಶಾದಲ್ಲಿ 800, ಮಹಾರಾಷ್ಟ್ರದಲ್ಲಿ 3,300 ಮಂದಿ ವಾಸಿಸುತ್ತಿದ್ದಾರೆ. ಈ ರಾಜ್ಯಗಳಲ್ಲಿ ಯಾರ ಸರ್ಕಾರವಿದೆ? ಬಿಜೆಪಿ ಸರ್ಕಾರ. ತಪ್ಪು ಮಾಡಬೇಡಿ. ನಿಮ್ಮ ನಡೆ ಸರಿಪಡಿಸಿಕೊಳ್ಳಿ. ಮೇ 4 (ಎಣಿಕೆ ದಿನ) ನಂತರ ಯಾವುದೇ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಿ. ನೀವು ‘ಜಾಯ್ ಬಾಂಗ್ಲಾ’ ಎಂದು ಹೇಳಬಹುದು, ಆದರೆ ನಾನು ಎಲ್ಲವನ್ನೂ ಗಮನಿಸುತ್ತಿದ್ದೇನೆ,” ಎಂದು ಹೇಳಿದರು.
ಈ ಹೇಳಿಕೆಗೆ ಪ್ರತಿಕ್ರಿಯಿಸಿದ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಪಾಬಿತ್ರ ಕರ್, ಸುವೇಂದು ಅವರ ರಾಜಕೀಯ ಶೈಲಿ ಬೆದರಿಕೆ ಮತ್ತು ಭೀತಿಯ ಮೇಲೆ ಆಧಾರಿತವಾಗಿದೆ ಎಂದು ಆರೋಪಿಸಿದರು. “ಚುನಾಯಿತ ಪ್ರತಿನಿಧಿಯಾಗಿ ತನ್ನ ಕ್ಷೇತ್ರದ ಪ್ರತಿಯೊಬ್ಬರೂ ಶಾಂತಿಯುತವಾಗಿ ಬದುಕುವಂತೆ ನೋಡಿಕೊಳ್ಳುವುದು ಅವರ ಕರ್ತವ್ಯ. ಆದರೆ ಅವರು ಇದಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ನಂದಿಗ್ರಾಮದ ಜನರು ಇವಿಎಂನಲ್ಲಿ ಅವರ ಬೆದರಿಕೆಗಳಿಗೆ ತಕ್ಕ ಉತ್ತರ ನೀಡುತ್ತಾರೆ,” ಎಂದು ಹೇಳಿದರು.
ಈ ವಿಷಯವನ್ನು ಚುನಾವಣಾ ಆಯೋಗದ ಗಮನಕ್ಕೆ ತರಲಾಗುವುದು ಎಂದು ತೃಣಮೂಲ ಕಾಂಗ್ರೆಸ್ ವಕ್ತಾರರು ತಿಳಿಸಿದ್ದಾರೆ.
ಇದರ ಮಧ್ಯೆ, ʼಟೈಮ್ಸ್ ಆಫ್ ಇಂಡಿಯಾʼ ವರದಿಯಲ್ಲಿ ಉಲ್ಲೇಖಿಸಲಾದ ಅಧ್ಯಯನದ ಪ್ರಕಾರ, ನಂದಿಗ್ರಾಮದ ಮತದಾರರ ಪಟ್ಟಿಯಿಂದ ತೆಗೆದುಹಾಕಲಾದ ಹೆಸರುಗಳಲ್ಲಿ 95.5 ಶೇಕಡಾ ಮುಸ್ಲಿಮರದ್ದಾಗಿದ್ದು, ಕ್ಷೇತ್ರದ ಒಟ್ಟು ಜನಸಂಖ್ಯೆಯಲ್ಲಿ ಅವರ ಪಾಲು ಕೇವಲ 25 ಶೇಕಡಾ ಮಾತ್ರವಾಗಿದೆ. ಸಾರ್ವಜನಿಕ ನೀತಿ ಸಂಶೋಧನಾ ಸಂಸ್ಥೆ ಸಬರ್ ಇನ್ಸ್ಟಿಟ್ಯೂಟ್ ವರದಿ ಪ್ರಕಾರ, ತೆಗೆದುಹಾಕಲಾದ ಹೆಸರುಗಳಲ್ಲಿ ಕೇವಲ 4.5 ಶೇಕಡಾ ಮಾತ್ರ ಮುಸ್ಲಿಮೇತರರಿಗೆ ಸೇರಿದ್ದವು ಎಂದು ತಿಳಿಸಲಾಗಿದೆ.






