ವೆಸ್ಟ್ಇಂಡೀಸ್ ಸ್ಟಾರ್ ವೇಗಿ ಶಮರ್ ಜೋಸೆಫ್ ಭಾರತ ವಿರುದ್ಧದ ಟೆಸ್ಟ್ ಸರಣಿಯಿಂದ ಔಟ್

ಶಮರ್ ಜೋಸೆಫ್ | PC : X
ಹೊಸದಿಲ್ಲಿ, ಸೆ.26: ಭಾರತ ತಂಡದ ವಿರುದ್ಧ ಮುಂಬರುವ 2 ಪಂದ್ಯಗಳ ಟೆಸ್ಟ್ ಸರಣಿಗಿಂತ ಮೊದಲು ತನ್ನ ತಂಡದಲ್ಲಿ ಬದಲಾವಣೆ ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿರುವ ವೆಸ್ಟ್ಇಂಡೀಸ್ ಕ್ರಿಕೆಟ್ ತಂಡವು ಗಾಯಗೊಂಡಿರುವ ಸ್ಟಾರ್ ವೇಗದ ಬೌಲರ್ ಶಮರ್ ಜೋಸೆಫ್ ಬದಲಿಗೆ 22ರ ಹರೆಯದ ಜೋಹಾನ್ ಲೇನ್ಗೆ ಅವಕಾಶ ನೀಡಿದೆ.
ಕ್ರಿಕೆಟ್ ವೆಸ್ಟ್ಇಂಡೀಸ್ ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ಈ ಬೆಳವಣಿಗೆಯನ್ನು ದೃಢಪಡಿಸಿದ್ದು, ಜೋಸೆಫ್ ಗಾಯದ ಸಮಸ್ಯೆಯಿಂದಾಗಿ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ. ಅಕ್ಟೋಬರ್ 18ರಿಂದ ಆರಂಭವಾಗಲಿರುವ ಬಾಂಗ್ಲಾದೇಶ ವಿರುದ್ಧ ಸೀಮಿತ ಓವರ್ ಸರಣಿಗಿಂತ ಮೊದಲು ಅವರನ್ನು ಪರೀಕ್ಷಿಸಲಾಗುವುದು ಎಂದಿದೆ.
ಬಾರ್ಬಡೋಸ್ನ ಆಲ್ರೌಂಡರ್ ಲೇನ್ 19 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. 2 ಅರ್ಧಶತಕಗಳ ಸಹಿತ ಒಟ್ಟು 495 ರನ್ ಗಳಿಸಿದ್ದಾರೆ. ಬೌಲಿಂಗ್ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದು, 22.28ರ ಸರಾಸರಿಯಲ್ಲಿ 4 ಬಾರಿ ಐದು ವಿಕೆಟ್ ಗೊಂಚಲುಗಳ ಸಹಿತ 66 ವಿಕೆಟ್ಗಳನ್ನು ಉರುಳಿಸಿದ್ದಾರೆ.
ಭಾರತ ವಿರುದ್ಧ ಟೆಸ್ಟ್ ಸರಣಿಗೆ ಪರಿಷ್ಕೃತ ತಂಡವನ್ನು ಪ್ರಕಟಿಸಿರುವ ವೆಸ್ಟ್ಇಂಡೀಸ್, ರೋಸ್ಟನ್ ಚೇಸ್ರನ್ನು ನಾಯಕರನ್ನಾಗಿ ಹಾಗೂ ಜೋಮೆಲ್ ವಾರಿಕನ್ರನ್ನು ಉಪ ನಾಯಕರನ್ನಾಗಿ ನೇಮಿಸಿದೆ. ಮೊದಲ ಟೆಸ್ಟ್ ಪಂದ್ಯವು ಅ.2ರಂದು ಅಹ್ಮದಾಬಾದ್ನಲ್ಲಿ ಆರಂಭವಾಗಲಿದೆ.
ವೆಸ್ಟ್ಇಂಡೀಸ್ ಟೆಸ್ಟ್ ತಂಡ:
ರೋಸ್ಟನ್ ಚೇಸ್(ನಾಯಕ),ಜೋಮೆಲ್ ವಾರಿಕನ್(ಉಪ ನಾಯಕ), ಕೆವ್ಲಾನ್ ಆ್ಯಂಡರ್ಸನ್, ಅಲಿಕ್ ಅಥನಾಝೆ, ಜಾನ್ ಕ್ಯಾಂಪ್ಬೆಲ್, ಟಗನರೇನ್ ಚಂದರ್ಪಾಲ್, ಜಸ್ಟಿನ್ ಗ್ರೀವ್ಸ್, ಶೈ ಹೋಪ್, ಟೆವಿನ್ ಇಮ್ಲಾಚ್, ಅಲ್ಝಾರಿ ಜೋಸೆಫ್, ಜೋಹಾನ್ ಲೇನ್, ಬ್ರೆಂಡನ್ ಕಿಂಗ್, ಆ್ಯಂಡರ್ಸನ್ ಫಿಲಿಪ್, ಖಾರಿ ಪಿಯರೆ, ಜೇಡನ್ ಸೀಲ್ಸ್.







