ಮಧ್ಯ ಪ್ರಾಚ್ಯದಲ್ಲಿನ ಬಿಕ್ಕಟ್ಟು | ಭಾರತದಲ್ಲೇ ಉಳಿದುಕೊಂಡಿರುವ ವಿಂಡೀಸ್, ಝಿಂಬಾಬ್ವೆ ಕ್ರಿಕೆಟ್ ತಂಡಗಳ ನೆರವಿಗೆ ಮುಂದಾದ ಐಸಿಸಿ

Photo Credit : PTI
ಮುಂಬೈ: ಈಗ ನಡೆಯುತ್ತಿರುವ ಟಿ-20 ವಿಶ್ವಕಪ್ನ ಸೂಪರ್-8 ಹಂತದಿಂದ ನಿರ್ಗಮಿಸಿರುವ ವೆಸ್ಟ್ಇಂಡೀಸ್ ಹಾಗೂ ಝಿಂಬಾಬ್ವೆ ಕ್ರಿಕೆಟ್ ತಂಡಗಳು ಮಧ್ಯ ಪ್ರಾಚ್ಯದಲ್ಲಿನ ಬಿಕ್ಕಟ್ಟಿನ ಕಾರಣದಿಂದ ಭಾರತದಿಂದ ನಿರ್ಗಮಿಸುವುದು ವಿಳಂಬವಾಗುತ್ತಿದೆ. ಅಂತರ್ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಉಭಯ ತಂಡಗಳು ತಮ್ಮ ಸ್ವದೇಶಕ್ಕೆ ಸುರಕ್ಷಿತವಾಗಿ ಮರಳುವುದಕ್ಕೆ ಸಂಬಂಧಿಸಿ ಸೂಕ್ತ ಹೆಜ್ಜೆಗಳನ್ನು ಇಡಲಾರಂಭಿಸಿದೆ.
ಮಧ್ಯ ಏಶ್ಯದಲ್ಲಿ ಉದ್ವಿಗ್ನಪರಿಸ್ಥಿತಿ ನೆಲೆಸಿರುವ ಹಿನ್ನೆಲೆಯಲ್ಲಿ ಅಂತರ್ರಾಷ್ಟ್ರೀಯ ವಿಮಾನ ಹಾರಾಟದಲ್ಲಿ ವ್ಯತ್ಯಯವಾಗಿದೆ. ಪ್ರಯಾಣದ ವೇಳಾಪಟ್ಟಿಯನ್ನು ಅನಿವಾರ್ಯವಾಗಿ ಬದಲಾಯಿಸಲಾಗಿದ್ದು, ಇದು ಎರಡೂ ತಂಡಗಳ ಮೇಲೆ ಪರಿಣಾಮಬೀರಿದೆ.
‘ವೆಸ್ಟ್ಇಂಡೀಸ್ ಹಾಗೂ ಝಿಂಬಾಬ್ವೆ ಕ್ರಿಕೆಟ್ ತಂಡಗಳು ಸುರಕ್ಷಿತವಾಗಿ ತಮ್ಮ ದೇಶಕ್ಕೆ ಪ್ರಯಾಣಿಸುವ ನಿಟ್ಟಿನಲ್ಲಿ ಐಸಿಸಿ ಎಲ್ಲ ನೆರವನ್ನು ನೀಡುತ್ತಿದೆ. ಯಾವ ತಂಡವೂ ಸಿಲುಕಿಕೊಂಡಿಲ್ಲ. ಎರಡೂ ತಂಡಗಳ ಟೀಮ್ ಮ್ಯಾನೇಜ್ಮೆಂಟ್ ಐಸಿಸಿ ತಂಡಗಳೊಂದಿಗೆ ಸಂಪರ್ಕದಲ್ಲಿವೆ. ಕ್ರಿಕೆಟ್ ವೆಸ್ಟ್ಇಂಡೀಸ್ ಹಾಗೂ ಝಿಂಬಾಬ್ವೆ ಕ್ರಿಕೆಟಿಗನ ಸೀನಿಯರ್ ಮ್ಯಾನೇಜ್ಮೆಂಟ್ ಜೊತೆಗೆ ಐಸಿಸಿ ಸಿಇಒ ಸಂಜೋಗ್ ಗುಪ್ತಾ ನಿರಂತರ ಸಂಪರ್ಕದಲ್ಲಿದ್ದಾರೆ’ ಎಂದು ಮೂಲಗಳು ತಿಳಿಸಿವೆ.
ಭಾರತ ತಂಡದ ವಿರುದ್ಧ ರವಿವಾರ ನಡೆದಿದ್ದ ತನ್ನ ಸೂಪರ್-8 ಪಂದ್ಯವನ್ನು ಸೋತ ನಂತರ ವೆಸ್ಟ್ಇಂಡೀಸ್ ತಂಡವು ಕೋಲ್ಕತಾದಲ್ಲಿ ಬಾಕಿಯಾಗಿದೆ.
‘ಪುರುಷರ ಐಸಿಸಿ ಟಿ-20 ವಿಶ್ವಕಪ್ನಿಂದ ನಿರ್ಗಮಿಸಿದ ನಂತರ ವೆಸ್ಟ್ಇಂಡೀಸ್ನ ಹಿರಿಯ ಪುರುಷರ ತಂಡವು ಭಾರತದಿಂದ ನಿರ್ಗಮಿಸುವುದು ಅಂತರ್ರಾಷ್ಟ್ರೀಯ ವಾಯು ಪ್ರದೇಶದ ನಿರ್ಬಂಧಗಳಿಂದಾಗಿ ವಿಳಂಬವಾಗಿದೆ ಎಂದು ಕ್ರಿಕೆಟ್ ವೆಸ್ಟ್ಇಂಡೀಸ್(ಸಿಡಬ್ಲ್ಯುಐ)ನಿಮಗೆ ತಿಳಿಸಲು ಬಯಸುತ್ತದೆ. ಗಲ್ಫ್ ಪ್ರದೇಶದಲ್ಲಿ ಮಿಲಿಟರಿ ಕ್ರಮದಿಂದ ಉಂಟಾಗಿರುವ ಭದ್ರತಾ ಬೆದರಿಕೆಯಿಂದಾಗಿ ಹಲವಾರು ಅಂತರ್ರಾಷ್ಟ್ರೀಯ ವಿಮಾನ ಮಾರ್ಗಗಳ ಮೇಲೆ ಪರಿಣಾಮ ಬೀರಿದೆ. ಸುರಕ್ಷತಾ ಕಾರಣಗಳಿಗಾಗಿ ವಿಮಾನಯಾನ ಸಂಸ್ಥೆಗಳು ನಿಗದಿತ ಸೇವೆಗಳನ್ನು ಸರಿ ಹೊಂದಿಸಬೇಕಾಗುತ್ತದೆ’ ಎಂದು ಸಿಡಬ್ಲ್ಯುಐ ಪ್ರಕಟನೆಯಲ್ಲಿ ತಿಳಿಸಿದೆ.
‘ವೆಸ್ಟ್ಇಂಡೀಸ್ ತಂಡ ಹಾಗೂ ಸಹಾಯಕ ಸಿಬ್ಬಂದಿಗೆ ಸಾಧ್ಯವಾದಷ್ಟು ಬೇಗ ಸುರಕ್ಷಿತ ಪ್ರಯಾಣ ವ್ಯವಸ್ಥೆಗಳನ್ನು ಖಚಿತಪಡಿಸಿಕೊಳ್ಳಲು ಐಸಿಸಿ, ಸಂಬಂಧಿತ ಸರಕಾರಿ ಅಧಿಕಾರಿಗಳು ಹಾಗೂ ವಿಮಾನಯಾನ ಪಾಲುದಾರರೊಂದಿಗೆ ಸಿಡಬ್ಲ್ಯುಐ ತಂಡವು ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ. ನಮ್ಮ ಆಟಗಾರರು, ತರಬೇತುದಾರರು ಹಾಗೂ ಅಧಿಕಾರಿಗಳ ಸುರಕ್ಷತೆ ಹಾಗೂ ಯೋಗಕ್ಷೇಮವು ನಮ್ಮ ಮೊದಲ ಆದ್ಯತೆಯಾಗಿದೆ. ತಂಡವು ಸದ್ಯ ಭಾರತದಲ್ಲಿದ್ದು, ಸುರಕ್ಷಿತವಾಗಿದೆ. ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಪ್ರಯಾಣ ವ್ಯವಸ್ಥೆಗಳು ಅಂತಿಮಗೊಂಡ ನಂತರ ಹೆಚ್ಚಿನ ಮಾಹಿತಿ ಒದಗಿಸುತ್ತೇವೆ’ ಎಂದು ಸಿಡಬ್ಲ್ಯುಐ ತಿಳಿಸಿದೆ.






