ಭಾರತದಿಂದ ನಿರ್ಗಮನ ವಿಳಂಬ: ಬೇಸರ ವ್ಯಕ್ತಪಡಿಸಿದ ವಿಂಡೀಸ್ ಆಟಗಾರ

ಸಾಂದರ್ಭಿಕ ಚಿತ್ರ | Photo Credit : PTI
ಹೊಸದಿಲ್ಲಿ, ಮಾ.6: ಟಿ-20 ವಿಶ್ವಕಪ್ ಟೂರ್ನಿಯಿಂದ ನಿರ್ಗಮಿಸಿದ ನಂತರ ಭಾರತದಿಂದ ಸ್ವದೇಶಕ್ಕೆ ತಂಡದ ನಿರ್ಗಮನ ವಿಳಂಬವಾಗುತ್ತಿರುವುದಕ್ಕೆ ವೆಸ್ಟ್ಇಂಡೀಸ್ ಸ್ಪಿನ್ನರ್ ಅಕೀಲ್ ಹುಸೇನ್ ಸಾಮಾಜಿಕ ಮಾಧ್ಯಮದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
‘ನಮ್ಮನ್ನು ರಕ್ಷಿಸಿ’ ಎಂದು ಫುಟ್ಬಾಲ್ ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊಗೆ ವಿನಂತಿಸಿರುವ ಹುಸೇನ್ ನಗೆ ಚಟಾಕಿಯನ್ನು ಹಾರಿಸಿದರು.
ಅಮೆರಿಕ, ಇಸ್ರೇಲ್ ಹಾಗೂ ಇರಾನ್ ನಡುವೆ ಸಂಘರ್ಷ ತಲೆದೋರಿರುವ ಹಿನ್ನೆಲೆಯಲ್ಲಿ ಅಂತರ್ರಾಷ್ಟ್ರೀಯ ಪ್ರಯಾಣವು ವ್ಯತ್ಯಯವಾಗಿದ್ದು, ಪಶ್ಚಿಮ ಏಶ್ಯದ ಹಲವು ಏರ್ಪೋರ್ಟ್ಗಳಲ್ಲಿ ಕಟ್ಟೆಚ್ಚರವಹಿಸಲಾಗಿದ್ದು, ವಿಮಾನಗಳನ್ನು ರದ್ದುಪಡಿಸಲಾಗಿದೆ.
ಭಾರತ ಹಾಗೂ ಶ್ರೀಲಂಕಾದಲ್ಲಿ ತನ್ನ ಟಿ-20 ವಿಶ್ವಕಪ್ ಅಭಿಯಾನವನ್ನು ಅಂತ್ಯಗೊಳಿಸಿರುವ ವೆಸ್ಟ್ಇಂಡೀಸ್ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿ ಪಶ್ಚಿಮ ಏಶ್ಯದ ಉದ್ವಿಗ್ನ ಪರಿಸ್ಥಿತಿಯ ಕಾರಣ ಸ್ವದೇಶಕ್ಕೆ ವಾಪಸಾಗಲು ಸಾಧ್ಯವಾಗದೆ ಸಮಸ್ಯೆಗೆ ಸಿಲುಕಿದ್ದಾರೆ.
24 ಗಂಟೆಗಳೊಳಗೆ ಸ್ವದೇಶಕ್ಕೆ ಕರೆದೊಯ್ಯಲು ವಿಶೇಷ ವಿಮಾನ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಕಾರ್ಯನಿರತವಾಗಿದ್ದೇವೆೆ ಎಂದು ಕ್ರಿಕೆಟ್ ವೆಸ್ಟ್ಇಂಡೀಸ್ ಗುರುವಾರ ಪ್ರಕಟಿಸಿದ ಬೆನ್ನಿಗೆ ಈ ಬೆಳವಣಿಗೆ ನಡೆದಿದೆ.
‘‘ಈ ಹಂತದಲ್ಲಿ ನನ್ನನ್ನು ರಕ್ಷಿಸಲು ಬರುವಂತೆ ಕ್ರಿಸ್ಟಿಯಾನೊ ರೊನಾಲ್ಡೊ ಅವರನ್ನು ಕೇಳಿಕೊಳ್ಳುವುದು ಉತ್ತಮ’’ ಎಂದು ಹುಸೇನ್ ಎಕ್ಸ್ನಲ್ಲಿ ಬರೆದಿದ್ದಾರೆ.
ಕಳೆದ ರವಿವಾರ ಈಡನ್ಗಾರ್ಡನ್ಸ್ನಲ್ಲಿ ಭಾರತ ವಿರುದ್ಧ ಐದು ವಿಕೆಟ್ಗಳಿಂದ ಸೋತ ನಂತರ ಕೆರಿಬಿಯನ್ ತಂಡವು ಕೋಲ್ಕತಾದಲ್ಲೇ ಉಳಿದುಕೊಂಡಿದೆ. ತಂಡದ ಪ್ರಯಾಣದ ಯೋಜನೆಗೆ ಕುರಿತು ಸ್ಪಷ್ಟನೆ ನೀಡುವಂತೆ ವೆಸ್ಟ್ಇಂಡೀಸ್ ಮುಖ್ಯ ಕೋಚ್ ಡರೆನ್ ಸಮ್ಮಿ ಐಸಿಸಿಯಿಂದ ಗುರುವಾರ ಸ್ಪಷ್ಟನೆ ಕೇಳಿದ್ದರು. ತಂಡದ ಮರಳಿಕೆಗೆ ಸಂಬಂಧಿಸಿ ವ್ಯವಸ್ಥೆ ಮಾಡಲು ಪ್ರಯತ್ನ ಮುಂದುವರಿದಿದೆ ಎಂದು ವಿಂಡೀಸ್ ಕ್ರಿಕೆಟ್ ಮಂಡಳಿ ಹೇಳಿಕೆಯಲ್ಲಿ ಪ್ರತಿಕ್ರಿಯಿಸಿತ್ತು.
ತಕ್ಷಣವೇ ಸ್ವದೇಶಕ್ಕೆ ವಾಪಸಾಗಲು ಸಾಧ್ಯವಾಗದೆ ಇರುವ ಹಲವು ವಿಂಡೀಸ್ ಆಟಗಾರರು ಮುಂಬರುವ ಐಪಿಎಲ್ನಲ್ಲಿ ಸಂಬಂಧಿತ ಫ್ರಾಂಚೈಸಿಗಳನ್ನು ಸೇರಿಕೊಳ್ಳಲು ಭಾರತದಲ್ಲೇ ಉಳಿದುಕೊಳ್ಳುವ ಸಾಧ್ಯತೆಯಿದೆ.







