34 ವರ್ಷ ಬಳಿಕ ಪಾಕ್ ವಿರುದ್ಧ ಏಕದಿನ ಸರಣಿ ಗೆದ್ದ ವಿಂಡೀಸ್

PC : @ICC
ಟ್ರಿನಿಡಾಡ್, ಆ. 13: ಮೂರನೇ ಹಾಗೂ ಸರಣಿ ನಿರ್ಣಾಯಕ ಏಕದಿನ ಪಂದ್ಯದಲ್ಲಿ ಮಂಗಳವಾರ ಆತಿಥೇಯ ವೆಸ್ಟ್ ಇಂಡೀಸ್ ತಂಡವು ಪಾಕಿಸ್ತಾನವನ್ನು 202 ರನ್ ಗಳಿಂದ ಭರ್ಜರಿಯಾಗಿ ಸೋಲಿಸಿತು. ವೇಗದ ಬೌಲರ್ ಜೇಡನ್ ಸೀಲ್ಸ್ ಪಾಕಿಸ್ತಾನಿ ಬ್ಯಾಟಿಂಗನ್ನು ಚಿಂದಿ ಉಡಾಯಿಸಿದರು. ಅವರು ಕೇವಲ 18 ರನ್ ಗಳನ್ನು ನೀಡಿ ಆರು ವಿಕೆಟ್ ಗಳನ್ನು ಉರುಳಿಸಿ ವೆಸ್ಟ್ ಇಂಡೀಸ್ ವಿಜಯದಲ್ಲಿ ಮಹತ್ವದ ಪಾತ್ರ ವಹಿಸಿದರು.
ಇದರೊಂದಿಗೆ ಈ ಮೂರು ಪಂದ್ಯಗಳ ಏಕದಿನ ಸರಣಿಯನ್ನು ವೆಸ್ಟ್ ಇಂಡೀಸ್ 2-1ರಿಂದ ಗೆದ್ದಿದೆ.
ಇದು, 1991ರ ಬಳಿಕ ಪಾಕಿಸ್ತಾನದ ವಿರುದ್ಧ ವೆಸ್ಟ್ ಇಂಡೀಸ್ನ ಮೊದಲ ಏಕದಿನ ಸರಣಿ ವಿಜಯವಾಗಿದೆ. ಈ ಸರಣಿಗಿಂತ ಮೊದಲು ನಡೆದ ಆಸ್ಟ್ರೇಲಿಯ ವಿರುದ್ಧದ ಸರಣಿಯಲ್ಲಿ ವೆಸ್ಟ್ ಇಂಡೀಸ್ ಟೆಸ್ಟ್ ಮತ್ತು ಟಿ20 ಸರಣಿಗಳನ್ನು ಕ್ರಮವಾಗಿ 0-3 ಮತ್ತು 0-5ರಿಂದ ಸೋತಿತ್ತು.
ಗೆಲ್ಲಲು 295 ರನ್ ಗಳ ಗುರಿಯನ್ನು ಪಡೆದ ಪ್ರವಾಸಿ ಪಾಕಿಸ್ತಾನಿ ತಂಡವು ಕೇವಲ 29.2 ಓವರ್ ಗಳಲ್ಲಿ 92 ರನ್ ಗಳಿಗೆ ತನ್ನ ಇನಿಂಗ್ಸ್ ಮುಕ್ತಾಯಗೊಳಿಸಿತು.
ಟಾಸ್ ಗೆದ್ದ ಪಾಕಿಸ್ತಾನವು ಎದುರಾಳಿ ತಂಡವನ್ನು ಮೊದಲು ಬ್ಯಾಟಿಂಗ್ಗೆ ಇಳಿಸಿತು. ವೆಸ್ಟ್ ಇಂಡೀಸ್, ನಾಯಕ ಶಾಯಿ ಹೋಪ್ರ ಅಜೇಯ ಶತಕದ ನೆರವಿನಿಂದ 50 ಓವರ್ ಗಳಲ್ಲಿ ಆರು ವಿಕೆಟ್ ಗಳ ನಷ್ಟಕ್ಕೆ 294 ರನ್ ಗಳನ್ನು ಗಳಿಸಿತು.
ಹೋಪ್ 94 ಎಸೆತಗಳಲ್ಲಿ 120 ರನ್ ಗಳನ್ನು ಗಳಿಸಿ ಅಜೇಯವಾಗಿ ಉಳಿದರು. ಅವರನ್ನು ಪಂದ್ಯಶ್ರೇಷ್ಠ ಪ್ರಶಸ್ತಿಯಿಂದ ಪುರಸ್ಕರಿಸಲಾಯಿತು.
ಆರಂಭಿಕ ಬ್ಯಾಟರ್ ಎವಿನ್ ಲೂಯಿಸ್ 54 ಎಸೆತಗಳಲ್ಲಿ 37 ರನ್ ಗಳಿಸಿದರು. ಬಳಿಕ, ಕೆಳ ಕ್ರಮಾಂಕದಲ್ಲಿ ರೋಸ್ಟನ್ ಚೇಸ್ 29 ಎಸೆತಗಳಲ್ಲಿ 36 ರನ್ ಗಳಿಸಿ ತಂಡದ ಮೊತ್ತವನ್ನು ವೃದ್ಧಿಸಿದರು.
ಜಸ್ಟಿನ್ ಗ್ರೀವ್ಸ್ 24 ಎಸೆತಗಳಲ್ಲಿ 43 ರನ್ ಸಿಡಿಸಿ ಕೊನೆಯ ಓವರ್ ಗಳಲ್ಲಿ ರನ್ ಧಾರಣೆಯನ್ನು ಹೆಚ್ಚಿಸಿದರು. ಅವರು ಅಜೇಯವಾಗಿ ಉಳಿದರು.
ಪಾಕಿಸ್ತಾನದ ಪರವಾಗಿ ನಸೀಮ್ ಶಾ ಮತ್ತು ಅಬ್ರಾರ್ ಅಹ್ಮದ್ ತಲಾ ಎರಡು ವಿಕೆಟ್ ಗಳನ್ನು ಉರುಳಿಸಿದರು.
ಗೆಲ್ಲಲು 50 ಓವರ್ ಗಳಲ್ಲಿ 295 ರನ್ ಗಳನ್ನು ಗಳಿಸುವ ಗುರಿಯನ್ನು ಪಡೆದ ಪಾಕಿಸ್ತಾನಕ್ಕೆ ಆರಂಭಿಕ ಆಘಾತ ಎದುರಾಯಿತು. ಇಬ್ಬರೂ ಆರಂಭಿಕರನ್ನು ಅವರು ಖಾತೆಗಳನ್ನು ತೆರೆಯುವ ಮೊದಲೇ ಸೀಲ್ಸ್ ಪೆವಿಲಿಯನ್ಗೆ ಕಳುಹಿಸಿದರು.
ಬಾಬರ್ ಅಝಮ್ 9 ರನ್ ಗಳಿಸಿದರೆ, ನಾಯಕ ಮುಹಮ್ಮದ್ ರಿಝ್ವಾನ್ ಶೂನ್ಯಕ್ಕೆ ವಾಪಸಾದರು.
ಬಳಿಕ ಸಲ್ಮಾನ್ ಅಘ (30) ತಂಡಕ್ಕೆ ಕೊಂಚ ಆಸರೆಯೊದಗಿಸಿದರು. ಅಂತಿಮವಾಗಿ ಮುಹಮ್ಮದ್ ನವಾಝ್ 23 ರನ್ ಗಳನ್ನು ಗಳಿಸುವ ಮೂಲಕ ನಿಚ್ಚಳ ಸೋಲನ್ನು ಕೊಂಚ ಮುಂದೂಡಿದರು.
ಪಾಕಿಸ್ತಾನ ಐವರು ಬ್ಯಾಟರ್ ಗಳು- ಸಯೀಮ್ ಅಯೂಬ್, ಅಬ್ದುಲ್ಲಾ ಶಫೀಕ್, ಮುಹಮ್ಮದ್ ರಿಝ್ವಾನ್, ಹಸನ್ ಅಲಿ ಮತ್ತು ಅಬ್ರಾರ್ ಅಹ್ಮದ್- ಶೂನ್ಯ ಗಳಿಸಿದರು.
ಜೇಡನ್ ಸೀಲ್ಸ್ 7.2 ಓವರ್ ಗಳಲ್ಲಿ ಕೇವಲ 18 ರನ್ ಗಳನ್ನು ನೀಡಿ 6 ವಿಕೆಟ್ ಗಳನ್ನು ಉರುಳಿಸಿದರು. ಅವರನ್ನು ಸರಣಿಶ್ರೇಷ್ಠ ಪ್ರಶಸ್ತಿಯಿಂದ ಪುರಸ್ಕರಿಸಲಾಯಿತು.
ಉಳಿದಂತೆ, ಗುಡಕೇಶ್ ಮೋಟೀ 2 ವಿಕೆಟ್ ಗಳನ್ನು ಪಡೆದರು.







