2024ರ ಐಪಿಎಲ್ ನಲ್ಲಿ RCB ಗೆ ಮರಳುವ ಬಗ್ಗೆ ಡಿ ವಿಲಿಯರ್ಸ್ ಹೇಳಿದ್ದೇನು?

ಎಬಿ ಡಿ ವಿಲಿಯರ್ಸ್ | Photo : PTI
ಜೊಹಾನ್ಸ್ಬರ್ಗ್: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 2024ರ ಆವೃತ್ತಿಯಲ್ಲಿ ನಾನು ಯಾವುದೇ ಪಾತ್ರದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದೊಂದಿಗೆ ಇರುವುದಿಲ್ಲ ಎಂದು ದಕ್ಷಿಣ ಆಫ್ರಿಕ ತಂಡ ಮತ್ತು ಆರ್ಸಿಬಿಯ ಮಾಜಿ ಬ್ಯಾಟರ್ ಎಬಿ ಡಿ ವಿಲಿಯರ್ಸ್ ಸ್ಪಷ್ಟಪಡಿಸಿದ್ದಾರೆ.
ಭವಿಷ್ಯದಲ್ಲಿ RCBಯಲ್ಲಿ ಯಾವುದಾದರೂ ಪಾತ್ರ ವಹಿಸಲು ನಾನು ಉತ್ಸುಕನಾಗಿರುವೆನಾದರೂ, ಈಗಿನ ಮಟ್ಟಿಗೆ ನಾನು ಅದಕ್ಕೆ ಸಿದ್ಧವಾಗಿಲ್ಲ ಎಂದು ಅವರು ಹೇಳಿದರು.
ಡಿ ವಿಲಿಯರ್ಸ್ 2011ರಿಂದ 2021ರವರೆಗೆ RCBಯಲ್ಲಿ ಆಡಿದ್ದಾರೆ. ಬಳಿಕ ಎಲ್ಲಾ ವಿಧದ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದ್ದಾರೆ.
ದಕ್ಷಿಣ ಆಫ್ರಿಕ ತಂಡದ ಮಾಜಿ ನಾಯಕನಾಗಿರುವ ವಿಲಿಯರ್ಸ್, RCB ಪರವಾಗಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಆಗಿದ್ದಾರೆ. ಅವರು 157 ಪಂದ್ಯಗಳಲ್ಲಿ 41.10 ಸರಾಸರಿಯಲ್ಲಿ ಮತ್ತು 158.33ರ ಸ್ಟ್ರೈಕ್ ರೇಟ್ನಲ್ಲಿ 4,522 ರನ್ಗಳನ್ನು ಗಳಿಸಿದ್ದಾರೆ. ಇದರಲ್ಲಿ ಎರಡು ಶತಕಗಳು ಮತ್ತು 37 ಅರ್ಧ ಶತಕಗಳಿವೆ.
ಇತ್ತೀಚೆಗೆ, RCBಯು ಆ್ಯಂಡಿ ಫ್ಲವರ್ರನ್ನು ನೂತನ ಪ್ರಧಾನ ಕೋಚ್ ಆಗಿ ನೇಮಿಸಿದೆ. ವಿಲಿಯರ್ಸ್, ಫ್ಲವರ್ ಜೊತೆಗೆ ಮೆಂಟರ್ ಆಗಿ ಕೆಲಸ ಮಾಡಬಹುದು ಎಂದು ‘ಕ್ರಿಕ್ಬಝ್’ ವರದಿ ಮಾಡಿತ್ತು.
ಆದರೆ, ಅದನ್ನು ವಿಲಿಯರ್ಸ್ ತಳ್ಳಿಹಾಕಿದ್ದಾರೆ.
“ನಾನು ಯಾರೊಂದಿಗೂ ಮಾತುಕತೆಯಲ್ಲಿ ತೊಡಗಿಲ್ಲ. ಆಸಕ್ತಿಯಿದೆ, ಆದರೆ ನಾನು ಅದಕ್ಕೆ ಈಗ ಸಿದ್ಧವಾಗಿಲ್ಲ. ಇದನ್ನು ನಾನು ಹೃದಯದಿಂದ ಹೇಳುತ್ತಿದ್ದೇನೆ. ನಾನು ಒಬ್ಬ RCB ಹುಡುಗ. ನಾನು ಈಗಲೇ ಯಾವುದೇ ತಂಡ ಸೇರಲು ನಾನು ಸಿದ್ಧವಾಗಿಲ್ಲ. ನಾನು ಇತ್ತೀಚೆಗಷ್ಟೇ ನಿವೃತ್ತಿಗೊಂಡಿದ್ದೇನೆ’’ ಎಂದು ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ನೀಡಿದ ಸಂದರ್ಶನವೊಂದರಲ್ಲಿ ವಿಲಿಯರ್ಸ್ ಹೇಳಿದ್ದಾರೆ.







