ರೋಹಿತ್ ಶರ್ಮಾ ಮುಂದಿನ ಗುರಿಯೇನು?

ರೋಹಿತ್ ಶರ್ಮಾ | PC : PTI
ಹೊಸದಿಲ್ಲಿ: ಐಸಿಸಿ ಟಿ20 ವಿಶ್ವಕಪ್ ಹಾಗೂ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಎತ್ತಿ ಹಿಡಿದಿರುವ ರೋಹಿತ್ ಶರ್ಮಾ ಇದೀಗ ಏಕದಿನ ವಿಶ್ವಕಪ್ ಟ್ರೋಫಿ ಗೆಲ್ಲುವತ್ತ ಚಿತ್ತಹರಿಸಿದ್ದಾರೆ. ಬಾರ್ಬಡೋಸ್ನಲ್ಲಿ 2024ರಲ್ಲಿ ಟಿ20 ವಿಶ್ವಕಪ್ ಗೆಲ್ಲುವಲ್ಲಿ ಟೀಮ್ ಇಂಡಿಯಾದ ನೇತೃತ್ವವಹಿಸಿದ್ದ ರೋಹಿತ್ ಬುಧವಾರ ದಿಢೀರನೆ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿ ಪ್ರಕಟಿಸಿದ್ದಾರೆ. ತನ್ನ ಭವಿಷ್ಯದ ಯೋಜನೆಗಳ ಕುರಿತು ದೊಡ್ಡ ಸುಳಿವೊಂದನ್ನು ನೀಡಿದ್ದಾರೆ.
ಕಳೆದ ವರ್ಷ ವಿಶ್ವಕಪ್ ಗೆದ್ದ ತಕ್ಷಣವೇ ಟಿ20 ಅಂತರ್ರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಹೇಳಿರುವ 38ರ ಹರೆಯದ ರೋಹಿತ್ ಇನ್ನು ಮುಂದೆ ಏಕದಿನ ಮಾದರಿಯ ಕ್ರಿಕೆಟ್ ನಲ್ಲಿ ಮಾತ್ರ ಭಾರತ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಪತ್ರಕರ್ತ ವಿಮಲ್ ಕುಮಾರ್ ಅವರೊಂದಿಗೆ ನೀಡಿರುವ ಸಂದರ್ಶನದಲ್ಲಿ 2023ರ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಆಘಾತಕಾರಿ ಸೋಲಿನ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದರು. ವಿಶ್ವಕಪ್ ಸೋಲಿನ ನೋವು ರೋಹಿತ್ ಮುಖದಲ್ಲಿ ಈಗಲೂ ಕಾಣಿಸುತ್ತಿತ್ತು. ಒಂದೂ ಪಂದ್ಯವನ್ನು ಸೋಲದೆ ಪಂದ್ಯಾವಳಿಯಲ್ಲಿ ಪ್ರಾಬಲ್ಯ ಸಾಧಿಸಿ ಫೈನಲ್ ಗೆ ತಲುಪಿದ್ದ ಭಾರತ ತಂಡವು ಪ್ರಶಸ್ತಿ ಸುತ್ತಿನಲ್ಲಿ ಆಸ್ಟ್ರೇಲಿಯ ತಂಡದ ವಿರುದ್ಧ ಸೋಲುಂಡಿತ್ತು.
ಟಿ20 ಹಾಗೂ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿಯಾಗಿರುವ ರೋಹಿತ್ ಅವರು ದಕ್ಷಿಣ ಆಫ್ರಿಕಾ, ಝಿಂಬಾಬ್ವೆ ಹಾಗೂ ನಮೀಬಿಯಾದ ಜಂಟಿ ಆತಿಥ್ಯದಲ್ಲಿ ನಡೆಯಲಿರುವ 2027ರ ಏಕದಿನ ಕ್ರಿಕೆಟ್ ವಿಶ್ವಕಪ್ ನಲ್ಲಿ ಆಡುವ ಕುರಿತು ಸ್ಪಷ್ಟ ಗುರಿ ಇಟ್ಟುಕೊಂಡಿದ್ದಾರೆ.
‘‘2027ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡುವ ಕುರಿತು ನನ್ನ ಮನಸ್ಸಿನಲ್ಲಿ ಸ್ಪಷ್ಟತೆ ಇದೆ. ಆ ವಿಶ್ವಕಪ್ ನಲ್ಲಿ ಆಡಲು ಸಾಧ್ಯವಾದರೆ ತುಂಬಾ ಒಳ್ಳೆಯದು’’ ಎಂದು ರೋಹಿತ್ ಹೇಳಿದ್ದಾರೆ.
ಭಾರತದ ಅತ್ಯಂತ ವಿಶ್ವಾಸಾರ್ಹ ಬ್ಯಾಟರ್ ಗಳ ಪೈಕಿ ಒಬ್ಬರಾಗಿರುವ ರೋಹಿತ್ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿಯಾಗಿದ್ದು, 67 ಟೆಸ್ಟ್ ಪಂದ್ಯಗಳಲ್ಲಿ 40.57ರ ಸರಾಸರಿಯಲ್ಲಿ 20 ಶತಕ ಹಾಗೂ 18 ಅರ್ಧಶತಕಗಳ ಸಹಿತ 4,301 ರನ್ ಗಳಿಸಿದ್ದರು.
‘‘ನಾನು ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿ ಹೊಂದುತ್ತಿದ್ದೇನೆ ಎಂದು ಹಂಚಿಕೊಳ್ಳಲು ಬಯಸುತ್ತೇನೆ. ನನ್ನ ದೇಶವನ್ನು ಬಿಳಿ ಧಿರಿಸಿನಲ್ಲಿ ಪ್ರತಿನಿಧಿಸಿದ್ದು ಗೌರವದ ವಿಚಾರ. ನಿಮ್ಮೆಲ್ಲರ ಪ್ರೀತಿ ಹಾಗೂ ಬೆಂಬಲಕ್ಕೆ ಧನ್ಯವಾದಗಳು. ನಾನು ಏಕದಿನ ಮಾದರಿಯ ಕ್ರಿಕೆಟ್ ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವುದನ್ನು ಮುಂದುವರಿಸುತ್ತೇನೆ’’ಎಂದು ರೋಹಿತ್ ಸಾಮಾಜಿಕ ಮಾಧ್ಯಮದಲ್ಲಿ ಬುಧವಾರ ಪೋಸ್ಟ್ ಮಾಡಿದ್ದರು.







