ಈ ವರ್ಷ ಧೋನಿ ನೇತೃತ್ವದ ಸಿಎಸ್ಕೆ ಎಡವಿದ್ದೆಲ್ಲಿ?

ಧೋನಿ | PTI
ಚೆನ್ನೈ, ಮೇ 3: 2025ರ ಆವೃತ್ತಿಯ ಐಪಿಎಲ್ಗಿಂತ ಮೊದಲು ಚೆನ್ನೈಸೂಪರ್ ಕಿಂಗ್ಸ್ ತನ್ನ ಇತಿಹಾಸದಲ್ಲಿ ಕೇವಲ 3 ಬಾರಿ ಪ್ಲೇ ಆಫ್ನಿಂದ ವಂಚಿತವಾಗಿತ್ತು. ಎರಡು ಬಾರಿ ಪ್ಲೇ ಆಫ್ನಿಂದ ವಂಚಿತವಾದ ನಂತರ ಪ್ರಶಸ್ತಿಯನ್ನು ಗೆದ್ದಿತ್ತು. ತವರು ಮೈದಾನದಲ್ಲಿ ಸತತ ಸೋಲು, ನಾಯಕ ಋತುರಾಜ್ ಗಾಯಕ್ವಾಡ್ ಗಾಯಗೊಂಡ ಕಾರಣ ಸಿಎಸ್ಕೆ ತಂಡವು ಪ್ಲೇ ಆಫ್ ಸ್ಪರ್ಧೆಯಿಂದ ಹೊರ ಬಿದ್ದ ಮೊದಲ ತಂಡ ಎನಿಸಿಕೊಂಡಿತು. ಧೋನಿಯು ತಂಡದ ನಾಯಕತ್ವವಹಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಧೋನಿ ಬಳಗವು ಈ ವರ್ಷದ ಐಪಿಎಲ್ನಲ್ಲಿ ಮಾಡಿರುವ ತಪ್ಪುಗಳತ್ತ ಒಂದು ನೋಟ..
►ತವರು ಮೈದಾನದಲ್ಲಿ ಕಳಪೆ ಸಾಧನೆ
ಸಾಂಪ್ರದಾಯಿಕವಾಗಿ ಚೆನ್ನೈ ತಂಡವು ತನ್ನ ತವರು ಮೈದಾನದ ಲಾಭವನ್ನು ಪಡೆಯುತ್ತಾ ಬಂದಿದ್ದು, ಎಂ.ಎ. ಚಿದಂಬರಂ ಕ್ರೀಡಾಂಗಣವು ಹಲವು ವರ್ಷಗಳಿಂದ ಅದೃಷ್ಟದ ತಾಣವಾಗಿದೆ. ಆದರೆ 2025ರ ಋತುವಿನಲ್ಲಿ ಚಿಪಾಕ್ ಮೈದಾನದಲ್ಲಿ ಚೆನ್ನೈ ತಂಡವು ಸತತ 5 ಪಂದ್ಯಗಳಲ್ಲಿ ಸೋಲುಂಡಿದೆ. ಇದೇ ಮೊದಲ ಬಾರಿ ತವರು ಮೈದಾನದಲ್ಲಿ ಇಷ್ಟೊಂದು ಕಳಪೆ ಸಾಧನೆ ಮಾಡಿದೆ. ಆರಂಭಿಕ ಪಂದ್ಯದಲ್ಲಿ ತನ್ನ ದೀರ್ಘಕಾಲದ ಎದುರಾಳಿ ಮುಂಬೈ ಇಂಡಿಯನ್ಸ್ ವಿರುದ್ಧ ಏಕೈಕ ಗೆಲುವು ದಾಖಲಿಸಿತ್ತು.
ಬೌಲಿಂಗ್ ವಿಭಾಗವು ಕಡಿಮೆ ಪ್ರಮಾಣದಲ್ಲಿ ಸುಧಾರಣೆ ಕಂಡಿದ್ದು, ಮೂವರು ಸ್ಪಿನ್ನರ್ಗಳಾದ ರವೀಂದ್ರ ಜಡೇಜ,ಆರ್.ಅಶ್ವಿನ್ ಹಾಗೂ ನೂರ್ ಅಹ್ಮದ್ ಸ್ಪಿನ್ ಸ್ನೇಹಿ ಪಿಚ್ನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಪರಿಣಾಮ ಬೀರಲಿಲ್ಲ. ಪ್ರತೀ ಓವರ್ಗೆ 8.44 ರನ್ ನೀಡಿದ್ದಾರೆ.
►ಪವರ್ ಪ್ಲೇನಲ್ಲಿ ವೈಫಲ್ಯ
ಪವರ ಪ್ಲೇ ವೇಳೆ ಬ್ಯಾಟಿಂಗ್ನಲ್ಲಿ ವೈಫಲ್ಯ ಕಂಡಿದ್ದು, ಈ ವರ್ಷ ಸಿಎಸ್ಕೆ ಹಿನ್ನಡೆಗೆ ಮುಖ್ಯ ಕಾರಣವಾಗಿದೆ. ಮೊದಲ 6 ಓವರ್ಗಳಲ್ಲಿ ಸಿಎಸ್ಕೆ 7.91 ರನ್ರೇಟ್ನಲ್ಲಿ ಹಾಗೂ 26.38ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದೆ. ಟೂರ್ನಿಯಲ್ಲಿರುವ ಎಲ್ಲ ತಂಡಗಳಿಗಿಂತ ಕನಿಷ್ಠ ಸ್ಕೋರ್ ಇದಾಗಿದೆ. ಅಗ್ರ ಸರದಿಯಲ್ಲಿ ಹೆಚ್ಚಾಗಿ ಆಡುತ್ತಿದ್ದ ಗಾಯಕ್ವಾಡ್ ಅನುಪಸ್ಥಿತಿಯು ಎದ್ದು ಕಂಡುಬಂದಿದ್ದು, ರಾಹುಲ್ ತ್ರಿಪಾಠಿ ಹಾಗೂ ರಚಿನ್ ರವೀಂದ್ರ ಅವರು ಗಾಯಕ್ವಾಡ್ ಸ್ಥಾನ ತುಂಬುವಲ್ಲಿ ವಿಫಲರಾದರು. ಅಗ್ರ ಸರದಿಯ ವೈಫಲ್ಯದಿಂದಾಗಿ ಯುವ ಆಟಗಾರರಾದ ಶೇಕ್ ರಶೀದ್ ಹಾಗೂ ಆಯುಷ್ ಮ್ಹಾತ್ರೆ ಹೆಗಲ ಮೇಲೆ ಹೆಚ್ಚು ಹೊಣೆಗಾರಿಕೆ ಬಿತ್ತು.
►ದುರ್ಬಲ ಮಧ್ಯಮ ಸರದಿ
ಆರಂಭಿಕ ಸರದಿಯ ವೈಫಲ್ಯವು ಮಧ್ಯಮ ಸರದಿಯ ಮೇಲೆ ಗಾಢ ಪರಿಣಾಮಬೀರಿದ್ದು, ಈ ಅವಧಿಯಲ್ಲಿ ಸಿಎಸ್ಕೆ ರನ್ರೇಟ್ 7.54ಕ್ಕೆ ಕುಸಿದರೆ, ಬ್ಯಾಟಿಂಗ್ ಸರಾಸರಿ 2ನೇ ಕನಿಷ್ಠ (23.51)ಮಟ್ಟದಲ್ಲಿತ್ತು. ರವೀಂದ್ರ ಜಡೇಜ 4ನೇ ಕ್ರಮಾಂಕದಲ್ಲಿ ಭಡ್ತಿ ಪಡೆದರೂ ಯಾವುದೇ ಲಾಭವಾಗಲಿಲ್ಲ. ಮಧ್ಯಮ ಓವರ್ಗಳಲ್ಲಿ(7ರಿಂದ 15)ಜಡೇಜರ ಸ್ಟ್ರೈಕ್ರೇಟ್ 92.64ರಷ್ಟಿತ್ತು. ಸ್ಪಿನ್ನರ್ಗಳ ವಿರುದ್ದ ಚೆನ್ನಾಗಿ ಆಡಬಲ್ಲ ಶಿವಂ ದುಬೆ ಕೂಡ ಪರದಾಟ ನಡೆಸಿದ್ದು, ಕೇವಲ 112.85ರ ಸ್ಟ್ರೈಕ್ರೇಟ್ನಲ್ಲಿ ಆಡಿದ್ದಾರೆ.
►ನಿರೀಕ್ಷೆ ಹುಸಿಗೊಳಿಸಿದ ಮಥೀಶ ಪಥಿರನ
2022ರಲ್ಲಿ ಚೊಚ್ಚಲ ಪಂದ್ಯವನ್ನಾಡಿದ ನಂತರ ಶ್ರೀಲಂಕಾದ ಮಥೀಶ ಪಥಿರನ 13 ಕೋ.ರೂ.ಗೆ ತಂಡದಲ್ಲಿ ಉಳಿದುಕೊಂಡಿದ್ದು, ಚೆನ್ನೈತಂಡದ ಅಡುವ 11ರ ಬಳಗದಲ್ಲಿ ಸ್ಥಾನ ಭದ್ರಪಡಿಸಿಕೊಂಡಿದ್ದರು. ಈ ಋತುವಿನಲ್ಲಿ ಅವರು ನಿರೀಕ್ಷಿತ ಪ್ರದರ್ಶನವನ್ನು ನೀಡಿಲ್ಲ. 33.11ರ ಸರಾಸರಿಯಲ್ಲಿ 10.39ರ ಸ್ಟ್ರೈಕ್ರೇಟ್ನಲ್ಲಿ ಕೇವಲ 9 ವಿಕೆಟ್ಗಳನ್ನು ಪಡೆದಿದ್ದಾರೆ. 2023ರಲ್ಲಿ 8, 2024ರಲ್ಲಿ 7.68ರ ಇಕಾನಮಿ ರೇಟ್ ಹೊಂದಿದ್ದ ಪಥಿರನ ಈ ಬಾರಿ ಹಿಂದಿನ ಪ್ರದರ್ಶನ ಪುನರಾವರ್ತಿಸುವಲ್ಲಿ ವಿಫಲರಾಗಿದ್ದಾರೆ.
ಈ ವರ್ಷದ ಐಪಿಎಲ್ನಲ್ಲಿ ನಿರಾಶೆ ಅನುಭವಿಸಿರುವ ಹೊರತಾಗಿಯೂ ಚೆನ್ನೈ ತಂಡದ ಪರ ಭರವಸೆಯ ಪ್ರತಿಭೆಗಳಾದ ನೂರ್ ಅಹ್ಮದ್ ಹಾಗೂ ಖಲೀಲ್ ಅಹ್ಮದ್ ಗಮನ ಸೆಳೆದಿದ್ದಾರೆ. ಬದಲಿ ಆಟಗಾರರಾದ ಆಯುಷ್ ಮ್ಹಾತ್ರೆ ಹಾಗೂ ಡೆವಾಲ್ಡ್ ಬ್ರೆವಿಸ್ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ.







