ಐದನೇ ಟ್ವೆಂಟಿ-20: ಭಾರತ ವಿರುದ್ಧ ವೆಸ್ಟ್ಇಂಡೀಸ್ ಗೆ ಜಯ; ಸರಣಿ ಕೈವಶ
ಬ್ರೆಂಡನ್ ಕಿಂಗ್, ನಿಕೊಲಸ್ ಪೂರನ್ ಶತಕದ ಜೊತೆಯಾಟ

Photo credit: Twitter/@ICC
ಫ್ಲೋರಿಡ: ಆರಂಭಿಕ ಬ್ಯಾಟರ್ ಬ್ರೆಂಡನ್ ಕಿಂಗ್(ಔಟಾಗದೆ 85 ರನ್, 55 ಎಸೆತ) ಹಾಗೂ ನಿಕೊಲಸ್ ಪೂರನ್(47 ರನ್, 35 ಎಸೆತ) 2ನೇ ವಿಕೆಟ್ಗೆ ಶತಕದ ಜೊತೆಯಾಟದ ನೆರವಿನಿಂದ ವೆಸ್ಟ್ಇಂಡೀಸ್ ಕ್ರಿಕೆಟ್ ತಂಡ ರವಿವಾರ ನಡೆದ ಭಾರತ ವಿರುದ್ಧದ 5ನೇ ಹಾಗೂ ಅಂತಿಮ ಟ್ವೆಂಟಿ-20 ಪಂದ್ಯವನ್ನು 8 ವಿಕೆಟ್ನಿಂದ ಗೆದ್ದುಕೊಂಡಿದೆ. ಈ ಮೂಲಕ 5 ಪಂದ್ಯಗಳ ಸರಣಿಯನ್ನು 3-2 ಅಂತರದಿಂದ ವಶಪಡಿಸಿಕೊಂಡಿದೆ.
ಗೆಲ್ಲಲು 166 ರನ್ ಗುರಿ ಪಡೆದಿದ್ದ ವೆಸ್ಟ್ಇಂಡೀಸ್ ತಂಡ 18 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತು. ವೆಸ್ಟ್ಇಂಡೀಸ್ 12.3 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 117 ರನ್ ಗಳಿಸಿದ್ದಾಗ ಪ್ರತಿಕೂಲ ಹವಾಗುಣ ಪಂದ್ಯಕ್ಕೆ ಅಡ್ಡಿಪಡಿಸಿತು. ಆಗ ವಿಂಡೀಸ್ ಗೆ ಗೆಲ್ಲಲು 49 ರನ್ ಗಳಿಸುವ ಅಗತ್ಯವಿತ್ತು.
ಇದಕ್ಕೂ ಮೊದಲು ಟಾಸ್ ಜಯಿಸಿದ ಭಾರತ ಬ್ಯಾಟಿಂಗ್ ಆಯ್ದುಕೊಂಡಿತು. ಎರಡು ಬಾರಿ ಮಳೆ ಅಡ್ಡಿಪಡಿಸಿದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅರ್ಧಶತಕದ(61 ರನ್, 44 ಎಸೆತ, 4 ಬೌಂಡರಿ, 3 ಸಿಕ್ಸರ್)ಸಹಾಯದಿಂದ ಭಾರತ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ಗಳ ನಷ್ಟಕ್ಕೆ 165 ರನ್ ಗಳಿಸಿತ್ತು.