ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಧೋನಿ ಆಡುತ್ತಾರೆಯೇ? ವೈರಲ್ ವಿಡಿಯೊ ಸೃಷ್ಟಿಸಿದ ಕುತೂಹಲ

PC: screengrab/ x.com/ChennaiIPL
ಚೆನ್ನೈ: ಐಪಿಎಲ್ ಟೂರ್ನಿಯ ಶುಕ್ರವಾರದ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಸಿಎಸ್ಕೆ ಸ್ಟಾರ್ ಆಟಗಾರ ಎಂ.ಎಸ್.ಧೋನಿ ಮೈದಾನಕ್ಕೆ ಇಳಿಯುತ್ತಾರೆಯೇ ಎಂಬ ಕುತೂಹಲ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳಲ್ಲಿ ಮೂಡಿದೆ. ಧೋನಿ ಏಪ್ರಿಲ್ ಕೊನೆಯ ವರೆಗೂ ಐಪಿಎಲ್ ಪಂದ್ಯಗಳಿಗೆ ಲಭ್ಯರಿಲ್ಲ ಎಂದು ಹೇಳಲಾಗಿತ್ತು. ಆದರೆ ನಿರೀಕ್ಷೆಗಿಂತ ಮುಂಚಿತವಾಗಿಯೇ ಧೋನಿ ತಂಡ ಸೇರಿಕೊಳ್ಳುತ್ತಾರೆಯೇ ಎಂಬ ಕಾತರದಲ್ಲಿ ಸಿಎಸ್ಕೆ ಅಭಿಮಾನಿಗಳಿದ್ದಾರೆ.
ಸ್ನಾಯುಸೆಳೆತದಿಂದಾಗಿ ಧೋನಿ ಎರಡು ವಾರಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳಲಿದ್ದಾರೆ ಎಂದು ಫ್ರಾಂಚೈಸಿ ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯಕ್ಕೆ ಮುನ್ನ ಪ್ರಕಟಿಸಿತ್ತು. ಈ ಕಾರಣದಿಂದ ಗುವಾಹತಿಗೆ ತಂಡದ ಜತೆ ಧೋನಿ ಪ್ರಯಾಣಿಸಿರಲಿಲ್ಲ. ಸೀಸನ್ ನ ಆರಂಭಿಕ ಪಂದ್ಯದಲ್ಲಿ ಧೋನಿ ಆಡಿರಲಿಲ್ಲ. ಆದಾಗ್ಯೂ ಸಿಎಸ್ಕೆ ಅಧಿಕೃತ ಜಾಲತಾಣ ಹ್ಯಾಂಡಲ್ ನಿಂದ ಹಂಚಿಕೊಂಡ ವಿಡಿಯೊ ತುಣುಕಿನಲ್ಲಿ, ಧೋನಿ ತಮ್ಮ ಕಿಟ್ ನೊಂದಿಗೆ ಅಭ್ಯಾಸ ಮಾಡುತ್ತಿರುವುದು ಕಂಡುಬಂದಿದೆ. ಇದು ಅವರ ಫಿಟ್ನೆಸ್ ಮತ್ತು ಲಭ್ಯತೆ ಬಗ್ಗೆ ಹಲವು ವದಂತಿಗಳಿಗೆ ಕಾರಣವಾಗಿದೆ. ಅವರ ಪುನರಾಗಮನ ಬಗ್ಗೆ ಅಧಿಕೃತ ದೃಢೀಕರಣ ಇದುವರೆಗೆ ಬಂದಿಲ್ಲವಾದರೂ, ತರಬೇತಿಯಲ್ಲಿ ಅವರ ಉಪಸ್ಥಿತಿಯು ಅಭಿಮಾನಿಗಳ ಆಶಾವಾದಕ್ಕೆ ಕಾರಣವಾಗಿದೆ.
ಕುತೂಹಲದ ವಿಚಾರವೆಂದರೆ ಆರಂಭಿಕ ಪಂದ್ಯಕ್ಕೆ ಮುನ್ನವೂ ಧೋನಿ ತರಬೇತಿಯಲ್ಲಿ ಕಾಣಿಸಿಕೊಂಡಿದ್ದರು. ಮತ್ತೆ ಇದೇ ಬಗೆಯ ವಿಡಿಯೊ ಹರಿದಾಡುತ್ತಿರುವುದು ಈ ಹಿರಿಯ ಆಟಗಾರ ನಿರೀಕ್ಷೆಗಿಂತ ಮುಂಚಿತವಾಗಿಯೇ ತಂಡ ಸೇರಿಕೊಳ್ಳುತ್ತಾರೆಯೇ ಎಂಬ ಕುತೂಹಲಕ್ಕೆ ಕಾರಣವಾಗಿದೆ.
Kodiyil Oruvan! 🦁💛#WhistlePodu #Yellove pic.twitter.com/SuztJYGNzr
— Chennai Super Kings (@ChennaiIPL) April 1, 2026






