IPL 2026 | ಮುಂಬೈ ವಿರುದ್ಧ ಧೋನಿ ಕಣಕ್ಕಿಳಿಯುವರಾ? ಸಿಎಸ್ಕೆ ಬ್ಯಾಟಿಂಗ್ ಕೋಚ್ ಮೈಕಲ್ ಹಸ್ಸಿ ಹೇಳಿದ್ದೇನು ?

PC: x.com/KamitSolanki
ಹೊಸದಿಲ್ಲಿ: ಮುಂಬೈ ಇಂಡಿಯನ್ಸ್ ವಿರುದ್ಧದ ಹೈವೋಲ್ಟೇಜ್ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಆಡುತ್ತಾರೆಯೇ ಎಂಬ ಚರ್ಚೆ ಮತ್ತೆ ಜೋರಾಗಿದೆ. ಈ ಬಗ್ಗೆ ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟಿಂಗ್ ಕೋಚ್ ಮೈಕಲ್ ಹಸ್ಸಿ ಉತ್ತೇಜನಕಾರಿ ಮಾಹಿತಿ ನೀಡಿದ್ದಾರೆ.
ಕಾಲಿನ ಹಿಮ್ಮಡಿ ನೋವಿನಿಂದ ಬಳಲುತ್ತಿದ್ದ ಧೋನಿ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಗಾಯದ ಕಾರಣದಿಂದ ಅವರು ಕಳೆದ ಮೂರು ವಾರಗಳಿಂದ ತಂಡದಿಂದ ಹೊರಗಿದ್ದಾರೆ.
ಚಿಪಾಕ್ ಕ್ರೀಡಾಂಗಣದಲ್ಲಿ ಪಂದ್ಯದ ಮುನ್ನಾ ದಿನ ಮಾತನಾಡಿದ ಹಸ್ಸಿ, “ಧೋನಿ ಶೀಘ್ರದಲ್ಲೇ ತಂಡಕ್ಕೆ ಮರಳುವ ನಿರೀಕ್ಷೆಯಿದೆ. ಅದು ನಾಳೆಯೋ ಅಥವಾ ಮುಂದಿನ ಪಂದ್ಯದಲ್ಲೋ ಎನ್ನುವುದು ಸ್ಪಷ್ಟವಿಲ್ಲ. ಆದರೆ ಅವರು ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದಾರೆ” ಎಂದು ಹೇಳಿದರು.
ಧೋನಿಯವರ ಕೌಶಲ ಇನ್ನೂ ಅದ್ಭುತವಾಗಿದ್ದು, ವಿಶೇಷವಾಗಿ ಇನಿಂಗ್ಸ್ ಕೊನೆಯ ಓವರ್ಗಳಲ್ಲಿ ಅಗತ್ಯವಾಗಿರುವ ರನ್ನಿಂಗ್ ಫಿಟ್ನೆಸ್ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದಾರೆ ಎಂದು ತಿಳಿಸಿದರು.
“ಅವರ ಓಟದ ವೇಗ ಸುಧಾರಿಸಿದೆ ಮತ್ತು ನಿರೀಕ್ಷಿತ ಮಟ್ಟ ತಲುಪುತ್ತಿದೆ. ಬ್ಯಾಟಿಂಗ್ ಹಾಗೂ ವಿಕೆಟ್ ಕೀಪಿಂಗ್ ವಿಚಾರದಲ್ಲಿ ನಾವು ವಿಶ್ವಾಸ ಹೊಂದಿದ್ದೇವೆ,” ಎಂದರು.
"ವಿಶೇಷವಾಗಿ ಇನಿಂಗ್ಸ್ ನ ಕೊನೆಗೆ ಅವರು ಉತ್ತಮ ಓಟದ ಶಕ್ತಿಯನ್ನು ನಿರ್ವಹಿಸಿಕೊಳ್ಳಬಹುದು ಎಂಬ ಖಾತರಿಯಾಗಬೇಕಿದೆ. ಒಂದು ಅಥವಾ ಎರಡು ರನ್ ತೆಗೆಯುವ ಬಗ್ಗೆ ಗಮನ ಹರಿಸಬೇಕಿದೆ. ಹಿಮ್ಮಡಿಯ ಬಗ್ಗೆ ಅವರಲ್ಲಿ ಆತ್ಮವಿಶ್ವಾಸ ಮೂಡಿದರೆ, ಆಡಲು ಸಿದ್ಧರಾಗುತ್ತಾರೆ" ಎಂದರು. ಆದರೆ, ಧೋನಿಯವರ ನಿರ್ಧಾರ ಅಂತಿಮವಾಗಲಿದೆ. ಈ ಕ್ಷಣಕ್ಕಾಗಿ ನಾವು ಕಾಯುತ್ತಿದ್ದೇವೆ. ನನ್ನ ಪ್ರಕಾರ ಇಡೀ ಚೆನ್ನೈ ಇದನ್ನು ಕಾತರದಿಂದ ಕಾಯುತ್ತಿದೆ ಎಂದು ಹಸ್ಸಿ ಹೇಳಿದರು.






