ಲಾರ್ಡ್ಸ್ ನಲ್ಲಿ ರೋಹಿತ್ ಗೆ ಕೊನೆಯ ಏಕದಿನ ಪಂದ್ಯ?

Photo credit : X@BCCI
ಹೊಸದಿಲ್ಲಿ, ಜು.16: ಇಂಗ್ಲೆಂಡ್ ವಿರುದ್ಧ ಜುಲೈ 19ರಂದು ಲಾರ್ಡ್ಸ್ ನಲ್ಲಿ ನಡೆಯಲಿರುವ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯವು ಭಾರತ ತಂಡದ ಹಿರಿಯ ಬ್ಯಾಟರ್ ರೋಹಿತ್ ಶರ್ಮಾ ಅವರ ಕೊನೆಯ ಏಕದಿನ ಪಂದ್ಯವಾಗುವ ಸಾಧ್ಯತೆ ಇದೆ. ನಡೆಯುತ್ತಿರುವ ಇಂಗ್ಲೆಂಡ್ ಸರಣಿಯ ಬಳಿಕ ಅವರನ್ನು ತಂಡದಿಂದ ಹೊರಗಿಡಲು ಬಿಸಿಸಿಐ ಹಿರಿಯ ಆಯ್ಕೆ ಸಮಿತಿ ನಿರ್ಧರಿಸಿದೆ ಎಂದು Indian Express ವರದಿ ತಿಳಿಸಿದೆ.
ಕಳೆದ ವಾರ ನಡೆದ ಚರ್ಚೆಯ ವೇಳೆ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರೊಂದಿಗೆ ಆಯ್ಕೆ ಸಮಿತಿಯು ಈ ನಿರ್ಧಾರವನ್ನು ರೋಹಿತ್ ಅವರಿಗೆ ತಿಳಿಸಿದೆ ಎಂದು ತಿಳಿದು ಬಂದಿದೆ.
ಏಕದಿನ ತಂಡವನ್ನು ಯುವ ಆಟಗಾರರನ್ನು ಕೇಂದ್ರವಾಗಿಟ್ಟುಕೊಂಡು ರೂಪಿಸಲು ಆಯ್ಕೆದಾರರು ಮುಂದಾಗಿದ್ದಾರೆ. ಈ ಸ್ವರೂಪದಲ್ಲಿ ನಿಯಮಿತ ಅವಕಾಶಕ್ಕಾಗಿ ಕಾಯುತ್ತಿರುವ ಯಶಸ್ವಿ ಜೈಸ್ವಾಲ್ ಸೇರಿದಂತೆ ಯುವ ಆಟಗಾರರಿಗೆ ಅವಕಾಶ ಕಲ್ಪಿಸಲು ಅವರು ಉತ್ಸುಕರಾಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾದ ಮೂಲಗಳು ತಿಳಿಸಿವೆ.
"ಇಂಗ್ಲೆಂಡ್ ಪ್ರವಾಸದ ಬಳಿಕ ರೋಹಿತ್ ತಂಡದ ಮುಂದಿನ ಯೋಜನೆಯಲ್ಲಿ ಇರುವುದಿಲ್ಲ ಎಂದು ಆಯ್ಕೆದಾರರು ಅವರಿಗೆ ತಿಳಿಸಿದ್ದಾರೆ. ಈ ಸರಣಿಯ ನಂತರ ಅವರು ತಂಡದಿಂದ ಹೊರನಡೆಯಲಿದ್ದಾರೆ. ಫಿಟ್ನೆಸ್ ಸುಧಾರಣೆಗೆ ಶ್ರಮಿಸಿದ ಬಳಿಕವೂ ರೋಹಿತ್ ಮುಂದುವರಿಯಲು ಬಯಸಿದ್ದರು. ಆದರೆ ಅಂತಿಮ ನಿರ್ಧಾರವನ್ನು ಅವರಿಗೇ ಬಿಟ್ಟಿದ್ದಾರೆ" ಎಂದು ಬಿಸಿಸಿಐ ಮೂಲವೊಂದನ್ನು ಉಲ್ಲೇಖಿಸಿ ವರದಿ ಹೇಳಿದೆ.
ಇಂಗ್ಲೆಂಡ್ ಸರಣಿಗೆ ಮುನ್ನ ರೋಹಿತ್ ಕೆಲವು ಬಿಸಿಸಿಐ ಅಧಿಕಾರಿಗಳೊಂದಿಗೆ ಈ ವಿಷಯವಾಗಿ ಮಾತುಕತೆ ನಡೆಸಿದ್ದು, ಆಯ್ಕೆದಾರರ ನಿರ್ಧಾರದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ ಎಂದೂ ವರದಿ ತಿಳಿಸಿದೆ.
2024ರ ಜೂನ್ 29ರಂದು ಭಾರತವನ್ನು ಟಿ20 ವಿಶ್ವಕಪ್ ಪ್ರಶಸ್ತಿಗೆ ಮುನ್ನಡೆಸಿದ ಬಳಿಕ ರೋಹಿತ್ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು. 2025ರ ಮೇ 7ರಂದು ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಟೆಸ್ಟ್ ಕ್ರಿಕೆಟ್ನಿಂದಲೂ ನಿವೃತ್ತರಾಗಿದ್ದರು.
ಕಳೆದ ವರ್ಷ ರೋಹಿತ್ ಅವರನ್ನು ಭಾರತದ ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿಸಿ, ಶುಭಮನ್ ಗಿಲ್ ಅವರನ್ನು ನಾಯಕನನ್ನಾಗಿ ನೇಮಿಸಲಾಗಿತ್ತು. 2027ರ ಏಕದಿನ ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ಯುವ ತಂಡ ರೂಪಿಸುವತ್ತ ಆಯ್ಕೆದಾರರು ಹಾಗೂ ತಂಡದ ಆಡಳಿತ ಮಂಡಳಿ ಗಮನ ಹರಿಸಿದ್ದು, ದೀರ್ಘಾವಧಿಯ ಯೋಜನೆಯಲ್ಲಿ ರೋಹಿತ್ ಅವರಿಗೆ ಸ್ಥಾನವಿಲ್ಲ ಎಂದು ವರದಿ ಹೇಳಿದೆ.
ನಾಯಕನಾಗಿ ರೋಹಿತ್ 2023ರ ಏಕದಿನ ವಿಶ್ವಕಪ್ನಲ್ಲಿ ಭಾರತವನ್ನು ಫೈನಲ್ ಗೆ ಮುನ್ನಡೆಸಿದ್ದರು. ಆರಂಭಿಕ ಬ್ಯಾಟರ್ ಆಗಿ ಅವರು ಅನುಸರಿಸಿದ ಆಕ್ರಮಣಕಾರಿ ಆಟದ ಶೈಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿತ್ತು. ಇದೇ ತತ್ವವನ್ನು ಅವರ ನಾಯಕತ್ವದಲ್ಲಿ ಭಾರತ 2024ರ ಟಿ20 ವಿಶ್ವಕಪ್ ಗೆದ್ದ ಅಭಿಯಾನದಲ್ಲಿಯೂ ಯಶಸ್ವಿಯಾಗಿ ಅನುಸರಿಸಿತ್ತು.
ಆದರೆ ಇತ್ತೀಚಿನ ಪಂದ್ಯಗಳಲ್ಲಿ ರೋಹಿತ್ ರನ್ ಗಳಿಸಲು ಪರದಾಡುತ್ತಿದ್ದಾರೆ. ಗುರುವಾರ ಕಾರ್ಡಿಫ್ ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಅವರು 47 ಎಸೆತಗಳಲ್ಲಿ 26 ರನ್ ಗಳಿಸಿ ನಿರಾಸೆ ಮೂಡಿಸಿದರು.






