ವಿಂಬಲ್ಡನ್ ಚಾಂಪಿಯನ್ ಶಿಪ್ | ನೊವಾಕ್ ಜೊಕೊವಿಕ್ ಗೆ ಸೆಮಿ ಫೈನಲ್ ನಲ್ಲಿ ಸೋಲು
ನಾಳೆ ಫೈನಲ್, ಅಲ್ಕರಾಝ್-ಸಿನ್ನರ್ ಸೆಣಸಾಟ

ನೊವಾಕ್ ಜೊಕೊವಿಕ್ |PC : @DjokerNole
ಲಂಡನ್: ತಾವಾಡಿರುವ ಸೆಮಿ ಫೈನಲ್ ಪಂದ್ಯದಲ್ಲಿ ರೋಚಕ ಜಯ ಸಾಧಿಸಿರುವ ಸ್ಪೇನ್ ನ ಕಾರ್ಲೊಸ್ ಅಲ್ಕರಾಝ್ ಹಾಗೂ ಜನ್ನಿಕ್ ಸಿನ್ನರ್ ರವಿವಾರ ನಡೆಯಲಿರುವ ವಿಂಬಲ್ಡನ್ ಟೆನಿಸ್ ಚಾಂಪಿಯನ್ ಶಿಪ್ ನ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ನಲ್ಲಿ ಸೆಣಸಾಡಲಿದ್ದಾರೆ.
ಹಾಲಿ ಚಾಂಪಿಯನ್ ಅಲ್ಕರಾಝ್ ಅವರು ಶುಕ್ರವಾರ 2 ಗಂಟೆ ಹಾಗೂ 49 ನಿಮಿಷಗಳ ಕಾಲ ನಡೆದ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಅಮೆರಿಕದ ಟೇಲರ್ ಫ್ರಿಟ್ಝ್ ರನ್ನು 6-4, 5-7, 6-3, 7-6(8/6)ಸೆಟ್ ಗಳ ಅಂತರದಿಂದ ಮಣಿಸುವ ಮೂಲಕ ಆಲ್ ಇಂಗ್ಲೆಂಡ್ ಕ್ಲಬ್ ನಲ್ಲಿ ಸತತ ಮೂರನೇ ಬಾರಿ ಫೈನಲ್ ಗೆ ತಲುಪಿದ್ದಾರೆ.
ವಿಶ್ವದ ನಂ.2ನೇ ಆಟಗಾರ ಅಲ್ಕರಾಝ್ ಇದೀಗ ಸತತ 24 ಪಂದ್ಯಗಳನ್ನು ಜಯಿಸಿದ್ದು, ವಿಂಬಲ್ಡನ್ ನಲ್ಲಿ ಆಡಿರುವ ಎಲ್ಲ 20 ಪಂದ್ಯಗಳನ್ನು ಗೆದ್ದಿದ್ದಾರೆ. ಅಲ್ಕರಾಝ್ ಫೈನಲ್ ನಲ್ಲಿ ವಿಶ್ವದ ನಂ.1 ಆಟಗಾರ ಸಿನ್ನರ್ ಸವಾಲನ್ನು ಎದುರಿಸಲಿದ್ದಾರೆ.
ಸಿನ್ನರ್ ಶುಕ್ರವಾರ ನಡೆದ ಮತ್ತೊಂದು ಪುರುಷರ ಸಿಂಗಲ್ಸ್ ಸೆಮಿ ಫೈನಲ್ ನಲ್ಲಿ 7 ಬಾರಿಯ ಚಾಂಪಿಯನ್ ನೊವಾಕ್ ಜೊಕೊವಿಕ್ ರನ್ನು ನೇರ ಸೆಟ್ ಗಳಿಂದ ಮಣಿಸಿ ಶಾಕ್ ನೀಡಿದ್ದಾರೆ.
ಸಿನ್ನರ್ ಅವರು 38ರ ವಯಸ್ಸಿನ ಸರ್ಬಿಯ ಆಟಗಾರನನ್ನು 6-3, 6-3, 6-4 ಸೆಟ್ ಗಳ ಅಂತರದಿಂದ ಮಣಿಸುವ ಮೂಲಕ ವಿಂಬಲ್ಡನ್ ನಲ್ಲಿ ತನ್ನ ಮೊದಲ ಫೈನಲ್ ಹಾಗೂ ಗ್ರ್ಯಾನ್ ಸ್ಲಾಮ್ ಟೂರ್ನಿಯಲ್ಲಿ ಸತತ 4ನೇ ಬಾರಿ ಫೈನಲ್ ಗೆ ಲಗ್ಗೆ ಇಟ್ಟಿದ್ದಾರೆ.
ಇಟಲಿ ಆಟಗಾರ ಸಿನ್ನರ್ ಆರಂಭದಿಂದಲೇ ಪ್ರಾಬಲ್ಯ ಮೆರೆದಿದ್ದು, ಪಂದ್ಯದುದ್ದಕ್ಕೂ ಬಿಗಿ ಹಿಡಿತ ಸಾಧಿಸಿದರು.
ಸಿನ್ನರ್ ಅವರು ಕಳೆದ ತಿಂಗಳು ಫ್ರೆಂಚ್ ಓಪನ್ ಫೈನಲ್ ಸೋಲಿಗೆ ಸೇಡು ತೀರಿಸಿಕೊಳ್ಳಲು ಎದುರು ನೋಡುತ್ತಿದ್ದು, ನಾಟಕೀಯ ತಿರುವು ಪಡೆದ ಫೈನಲ್ ನಲ್ಲಿ ಸಿನ್ನರ್ 3 ಚಾಂಪಿಯನ್ ಶಿಪ್ ಪಾಯಿಂಟ್ಸ್ ಕಳೆದುಕೊಂಡಿದ್ದರು.
ಸಿನ್ನರ್ ಹಾಗೂ ಅಲ್ಕರಾಝ್ ಹಿಂದಿನ ಆರು ಪ್ರಮುಖ ಪ್ರಶಸ್ತಿಯನ್ನು ಹಂಚಿಕೊಂಡಿದ್ದು, ಪುರುಷರ ಟೆನಿಸ್ ನಲ್ಲಿ ತನ್ನ ಹಿಡಿತವನ್ನು ಬಿಗಿಗೊಳಿಸಿದ್ದಾರೆ.
ಜೊಕೊವಿಕ್ ಅವರು 2017ರ ನಂತರ ಮೊದಲ ಬಾರಿ ವಿಂಬಲ್ಡನ್ ಟೂರ್ನಿಯಲ್ಲಿ ಸೆಮಿ ಫೈನಲ್ ಪಂದ್ಯವನ್ನು ಸೋತಿದ್ದಾರೆ. ಸೆಂಟರ್ ಕೋರ್ಟ್ನಲ್ಲಿ ನೆರೆದಿದ್ದ ಪ್ರೇಕ್ಷಕರು ಜೊಕೊವಿಕ್ ರನ್ನು ಹುರಿದುಂಬಿಸಿದರು. ಆದರೆ, ಅವರು ತನ್ನ ಲಯವನ್ನು ಕಂಡುಕೊಳ್ಳಲಿಲ್ಲ. 7 ಬಾರಿಯ ವಿಂಬಲ್ಡನ್ ಚಾಂಪಿಯನ್ ಜೊಕೊವಿಕ್ ಮತ್ತೊಂದು ಪ್ರಶಸ್ತಿ ಗೆಲ್ಲಲು ಶಕ್ತವಾಗಿದ್ದರೆ ರೋಜರ್ ಫೆಡರರ್(8 ಪ್ರಶಸ್ತಿ) ದಾಖಲೆಯನ್ನು ಮುರಿಬಹುದಿತ್ತು. ಜೊಕೊವಿಕ್ ತನ್ನ ದಾಖಲೆಯ 25ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಜಯಿಸಲು ಇನ್ನಷ್ಟು ಸಮಯ ಕಾಯಬೇಕಾಗಿದೆ.
‘‘ನಾನು ಬಾಲ್ಯದಿಂದಲೂ ಈ ಪಂದ್ಯಾವಳಿಯನ್ನು ಟಿವಿಯಲ್ಲಿ ಯಾವಾಗಲೂ ವೀಕ್ಷಿಸುತ್ತಿದ್ದೆ. ಇಲ್ಲಿ ಆಡುತ್ತೇನೆಂದು ಎಂದಿಗೂ ಊಹಿಸಿರಲಿಲ್ಲ. ನಾನೀಗ ಫೈನಲ್ ತಲುಪಿದ್ದೇನೆ. ಇದೊಂದು ಅದ್ಭುತ ಅನುಭವ’’ ಎಂದು ಸಿನ್ನರ್ ಹೇಳಿದರು.
ಮೇ ತಿಂಗಳಲ್ಲಿ ಡೋಪಿಂಗ್ ನಿಷೇಧದ ಅವಧಿಯನ್ನು ಪೂರೈಸಿದ ಸಿನ್ನರ್ ಅವರು ಅಮೆರಿಕನ್ ಓಪನ್ ಹಾಗೂ ಆಸ್ಟ್ರೇಲಿಯನ್ ಓಪನ್ ನಲ್ಲಿ ಚಾಂಪಿಯನ್ ಪಟ್ಟಕ್ಕೇರಿದ್ದಾರೆ. ಫ್ರೆಂಚ್ ಓಪನ್ ಚಾಂಪಿಯನ್ ಶಿಪ್ ನ ಫೈನಲ್ ನಲ್ಲಿ ಸೋಲುವ ಮೊದಲು ಇಟಾಲಿಯನ್ ಓಪನ್ ಟೂರ್ನಿಯಲ್ಲಿ ಅಲ್ಕರಾಝ್ ಗೆ ಸೋತಿದ್ದರು.
ಹೆಡ್-ಟು-ಹೆಡ್ ದಾಖಲೆಯಲ್ಲಿ ಅಲ್ಕರಾಝ್ ಅವರು ಸಿನ್ನರ್ ಎದುರು 8-4 ಮುನ್ನಡೆಯಲ್ಲಿದ್ದಾರೆ. ಅಲ್ಕರಾಝ್ ಅವರು ಹಿಂದಿನ 5 ಪಂದ್ಯಗಳಲ್ಲಿ ಜಯಶಾಲಿಯಾಗಿದ್ದಾರೆ. 2022ರ ವಿಂಬಲ್ಡನ್ ನಲ್ಲಿ ಸ್ಪೇನ್ ಆಟಗಾರನನ್ನು ಕೊನೆಯ ಬಾರಿ ಮಣಿಸಿದ್ದ ಸಿನ್ನರ್ ಭಾರೀ ಆತ್ಮವಿಶ್ವಾಸದಿಂದ ಇದ್ದಾರೆ.
ರವಿವಾರದ ಫೈನಲ್ ಪಂದ್ಯವು ಟೆನಿಸ್ ಕ್ರೀಡೆಯ ಇಬ್ಬರು ಸ್ಟಾರ್ ಗಳ ನಡುವಿನ ಹಣಾಹಣಿಯಾಗಿ ಮಾರ್ಪಡಲಿದ್ದು, ಉಭಯ ಆಟಗಾರರು ಮತ್ತೊಂದು ಪ್ರಮುಖ ಪ್ರಶಸ್ತಿಯ ಶೋಧದಲ್ಲಿದ್ದಾರೆ.
►ವಿಂಬಲ್ಡನ್ 2025-ಅಂಕಿ-ಅಂಶ
-ಕೇವಲ ಇಬ್ಬರು ಆಟಗಾರರಾದ ರಫೆಲ್ ನಡಾಲ್ ಹಾಗೂ ಜನ್ನಿಕ್ ಸಿನ್ನರ್ ಮಾತ್ರ ನೊವಾಕ್ ಜೊಕೊವಿಕ್ ರನ್ನು ಸತತ 5 ಬಾರಿ ಸೋಲಿಸಿದ್ದಾರೆ.
-ಜನ್ನಿಕ್ ಸಿನ್ನರ್ ಅವರು ಜೊಕೊವಿಕ್ ವಿರುದ್ಧ್ದ ಸತತ 9 ಸೆಟ್ ಗಳನ್ನು ಗೆದ್ದಿರುವ ಮೊದಲ ಆಟಗಾರನಾಗಿದ್ದಾರೆ. ಈ ಮೂಲಕ ರೋಜರ್ ಫೆಡರರ್ ದಾಖಲೆಯನ್ನು(2006ರ ಮಾಂಟೆ ಕಾರ್ಲೊ ಹಾಗೂ 2007ರ ದುಬೈ ನಡುವೆ 8 ಸೆಟ್)ಮುರಿದಿದ್ದಾರೆ.
-ಜನ್ನಿಕ್ ಸಿನ್ನರ್ ಹಾಗೂ ಕಾರ್ಲೊಸ್ ಅಲ್ಕರಾಝ್ ಟೆನಿಸ್ ಓಪನ್ ಯುಗದಲ್ಲಿ ಒಂದೇ ವರ್ಷ ಫ್ರೆಂಚ್ ಓಪನ್ ಹಾಗೂ ವಿಂಬಲ್ಡನ್ ಓಪನ್ ಟೂರ್ನಿಯಲ್ಲಿ ಪುರುಷರ ಸಿಂಗಲ್ಸ್ ಫೈನಲ್ ನಲ್ಲಿ ಸೆಣಸಾಡಲಿರುವ 2ನೇ ಜೋಡಿಯಾಗಿದೆ. ರೋಜರ್ ಫೆಡರರ್ ಹಾಗೂ ರಫೆಲ್ ನಡಾಲ್(2006-08)ಈ ಸಾಧನೆ ಮಾಡಿದ್ದರು.
-1995ರ ನಂತರ ಐವರು ಆಟಗಾರರು ಮಾತ್ರ ಪ್ರತೀ ಗ್ರ್ಯಾನ್ ಸ್ಲಾಮ್ ಟೂರ್ನಿಯಲ್ಲಿ ಫೈನಲ್ ಗೆ ಪ್ರವೇಶಿಸಿದ್ದಾರೆ. ಅವರುಗಳೆಂದರೆ: ರಫೆಲ್ ನಡಾಲ್, ರೋಜರ್ ಫೆಡರರ್, ನೊವಾಕ್ ಜೊಕೊವಿಕ್, ಆ್ಯಂಡಿ ಮರ್ರೆ ಹಾಗೂ ಇದೀಗ ಜನ್ನಿಕ್ ಸಿನ್ನರ್.







