ವಿಂಬಲ್ಡನ್ ಚಾಂಪಿಯನ್ಶಿಪ್: ಅಲ್ಕರಾಝ್, ಮೆಡ್ವೆಡೆವ್ ಕ್ವಾರ್ಟರ್ ಫೈನಲ್ಗೆ

ಲಂಡನ್: ಕಾರ್ಲೊಸ್ ಅಲ್ಕರಾಝ್ ಹಾಗೂ ಡೇನಿಯಲ್ ಮೆಡ್ವೆಡೆವ್ ವಿಂಬಲ್ಡನ್ ಟೆನಿಸ್ ಚಾಂಪಿಯನ್ಶಿಪ್ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.ಪುರುಷರ ಸಿಂಗಲ್ಸ್ನ ಪ್ರಿ-ಕ್ವಾರ್ಟರ್ ಫೈನಲ್ನಲ್ಲಿ 2021ರ ರನ್ನರ್ಸ್ ಅಪ್ ಮ್ಯಾಟಿಯೊ ಬೆರ್ರೆಟ್ಟಿನಿ ವಿರುದ್ಧ ಮೊದಲ ಸೆಟನ್ನು ಸೋತಿರುವ ಅಲ್ಕರಾಝ್ ಅಂತಿಮವಾಗಿ 3-6, 6-3, 6-3,6-3 ಸೆಟ್ಗಳ ಅಂತರದಿಂದ ಜಯ ಸಾಧಿಸಿದರು.
ಸ್ಪೇನ್ ಆಟಗಾರ ಅಲ್ಕರಾಝ್ ಕಳೆದ ತಿಂಗಳು ಕ್ವೀನ್ಸ್ ಓಪನ್ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿ ವಿಂಬಲ್ಡನ್ ಟೂರ್ನಿಗೆ ಉತ್ತಮ ತಯಾರಿ ನಡೆಸಿದ್ದರು. ಅಲ್ಕರಾಝ್ ಮುಂದಿನ ಸುತ್ತಿನಲ್ಲಿ ಹೊಲ್ಗೆರ್ ರೂನ್ರನ್ನು ಎದುರಿಸಲಿದ್ದಾರೆ. 20ರ ಹರೆಯದ ರೂನ್ ಹಿರಿಯ ಆಟಗಾರ ಗ್ರಿಗೊರ್ ಡಿಮಿಟ್ರೊವ್ ವಿರುದ್ಧ 3-6, 7-6(8/6), 7-6(7/4), 6-3 ಸೆಟ್ಗಳ ಅಂತರದಿಂದ ಜಯ ಸಾಧಿಸಿದರು.
ಮೂರನೇ ಶ್ರೇಯಾಂಕದ ರಶ್ಯದ ಆಟಗಾರ ಡೇನಿಯಲ್ ಮೆಡ್ವೆಡೆವ್ ಎದುರಾಳಿ ಶ್ರೇಯಾಂಕರಹಿತ ಜಿರಿ ಲೆಹೆಕಾ ಕಾಲು ನೋವಿನಿಂದ ನಿವೃತ್ತಿಯಾದ ಕಾರಣ ಮುಂದಿನ ಸುತ್ತಿಗೇರಿದರು. ಈ ಹಂತದಲ್ಲಿ ಮೆಡ್ವೆಡೆವ್ 6-4, 6-2 ಸೆಟ್ಗಳಿಂದ ಮುನ್ನಡೆಯಲ್ಲಿದ್ದರು.
ಮೆಡ್ವೆಡೆವ್ ಕ್ವಾರ್ಟರ್ ಫೈನಲ್ನಲ್ಲಿ 43ನೇ ರ್ಯಾಂಕಿನ ಕ್ರಿಸ್ಟೋಫರ್ ಯುಬ್ಯಾಂಕ್ಸ್ರನ್ನು ಎದುರಿಸಲಿದ್ದಾರೆ. ಕ್ರಿಸ್ಟೋಫರ್ ಮತ್ತೊಂದು ಪುರುಷರ ಸಿಂಗಲ್ಸ್ನ ಪ್ರಿ-ಕ್ವಾರ್ಟರ್ ಫೈನಲ್ನಲ್ಲಿ ಐದನೇ ರ್ಯಾಂಕಿನ ಸ್ಟೆಫನೊಸ್ ಸಿಟ್ಸಿಪಾಸ್ರನ್ನು 3-6, 7-6(7/4), 3-6, 6-4, 6-4 ಸೆಟ್ಗಳ ಅಂತರದಿಂದ ಮಣಿಸಿದರು.
► ಸಬಲೆಂಕಾ, ಜಾಬಿರ್ಗೆ ನೇರ ಸೆಟ್ಗಳ ಜಯ
ಮಹಿಳೆಯರ ಸಿಂಗಲ್ಸ್ನ 4ನೇ ಸುತ್ತಿನ ಪಂದ್ಯದಲ್ಲಿ ಬೆಲಾರುಸ್ನ ಅರ್ಯನಾ ಸಬಲೆಂಕಾ ರಶ್ಯದ ಎಕಟೆರಿನಾ ಅಲೆಕ್ಸಾಂಡ್ರೊವಾರನ್ನು 6-4, 6-0 ಸೆಟ್ಗಳ ಅಂತರದಿಂದ ಮಣಿಸಿದರು. ಮುಂದಿನ ಸುತ್ತಿನಲ್ಲಿ ಅಮೆರಿಕದ ಆಟಗಾರ್ತಿ ಮ್ಯಾಡಿಸನ್ ಕೀ ಅವರನ್ನು ಎದುರಿಸಲಿದ್ದಾರೆ.
ಕಳೆದ ವರ್ಷ ಫೈನಲ್ನಲ್ಲಿ ಸೋತಿದ್ದ ಟ್ಯುನಿಶಿಯದ ಆಟಗಾರ್ತಿ ಉನ್ಸ್ ಜಾಬಿರ್ ಎರಡು ಬಾರಿಯ ಚಾಂಪಿಯನ್ ಪೆಟ್ರಾ ಕ್ವಿಟೋವಾರನ್ನು 6-0, 6-3 ನೇರ ಸೆಟ್ಗಳ ಅಂತರದಿಂದ ಸೋಲಿಸಿ ಅಂತಿಮ-8ರ ಘಟ್ಟ ತಲುಪಿದರು.







