ವಿಂಬಲ್ಡನ್: ರಶ್ಯದ ರುಬ್ಲೆವ್ಗೆ ಸುಲಭ ಗೆಲುವು

ಲಂಡನ್, ಜು.3:ರಶ್ಯದ 7ನೇ ಶ್ರೇಯಾಂಕದ ಆಟಗಾರ ಆ್ಯಂಡ್ರೆ ರುಬ್ಲೆವ್ ವಿಂಬಲ್ಡನ್ ಚಾಂಪಿಯನ್ಶಿಪ್ನಲ್ಲಿ ಎರಡನೇ ಸುತ್ತು ಪ್ರವೇಶಿಸಿದರು.
ಸೋಮವಾರ ನಡೆದ ಪುರುಷರ ಸಿಂಗಲ್ಸ್ನ ಮೊದಲ ಸುತ್ತಿನ ಪಂದ್ಯದಲ್ಲಿ ರುಬ್ಲೆವ್ ಆಸ್ಟ್ರೇಲಿಯದ ಮ್ಯಾಕ್ಸ್ ಪುರ್ಸೆಲ್ ವಿರುದ್ಧ 6-3, 7-5, 6-4 ನೇರ ಸೆಟ್ಗಳ ಅಂತರದಿಂದ ಜಯ ಸಾಧಿಸಿದರು.
ಪುರುಷರ ಹಾಗೂ ಮಹಿಳೆಯರ ಸಿಂಗಲ್ಸ್ನಲ್ಲಿ ಭಾಗವಹಿಸುತ್ತಿರುವ 17 ರಶ್ಯ ಹಾಗೂ ಬೆಲಾರುಸ್ ಆಟಗಾರರ ಪೈಕಿ ಒಬ್ಬರಾಗಿರುವ ರುಬ್ಲೆವ್ ಸಾಧನೆ ಗಮನಾರ್ಹವಾಗಿದೆ. ರಶ್ಯದ ಮೇಲೆ ಉಕ್ರೇನ್ ದಾಳಿ ನಡೆಸಿದ ಕಾರಣ 2022ರ ವಿಂಬಲ್ಡನ್ ಚಾಂಪಿಯನ್ಶಿಪ್ಗೆ ಈ ಆಟಗಾರರಿಗೆ ನಿಷೇಧ ಹೇರಲಾಗಿತ್ತು.
ಸ್ವಿಯಾಟೆಕ್ ಶುಭಾರಂಭ: ವಿಶ್ವದ ನಂ.1 ಆಟಗಾರ್ತಿ ಇಗಾ ಸ್ವಿಯಾಟೆಕ್ ಮಹಿಳೆಯರ ಸಿಂಗಲ್ಸ್ನಲ್ಲಿ ಚೀನಾದ ಝು ಲಿನ್ ವಿರುದ್ಧ ಸೋಮವಾರ ನೇರ ಸೆಟ್ಗಳ ಅಂತರದಿಂದ ಜಯ ಸಾಧಿಸಿ ಶುಭಾರಂಭ ಮಾಡಿದರು.
ಹುಲ್ಲುಹಾಸಿನ ಅಂಗಣದಲ್ಲಿ ಚೊಚ್ಚಲ ಗ್ರ್ಯಾನ್ಸ್ಲಾಮ್ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಪೊಲ್ಯಾಂಡ್ನ ಸ್ವಿಯಾಟೆಕ್ ಚೀನಾ ಆಟಗಾರ್ತಿಯನ್ನು 6-1, 6-3 ಸೆಟ್ಗಳ ಅಂತರದಿಂದ ಸೋಲಿಸಿದರು.
22ರ ಹರೆಯದ ಸ್ವಿಯಾಟೆಕ್ ಕಳೆದ ತಿಂಗಳು ಮೂರನೇ ಬಾರಿ ಫ್ರೆಂಚ್ ಓಪನ್ ಪ್ರಶಸ್ತಿ ಜಯಿಸಿದ್ದರು.ಇದು ಅವರು ಗೆದ್ದಿರುವ 4ನೇ ಗ್ರ್ಯಾನ್ಸ್ಲಾಮ್ ಕಿರೀಟವಾಗಿತ್ತು.