ವಿಂಬಲ್ಡನ್ | ಅರ್ಥರ್ ಫೆರಿಗೆ ಐತಿಹಾಸಿಕ ಗೆಲುವು : 25 ವರ್ಷಗಳಲ್ಲಿ ಮೊದಲ ಬಾರಿ ಸೆಮಿ ಫೈನಲ್ ತಲುಪಿದ ವೈಲ್ಡ್ಕಾರ್ಡ್ ಆಟಗಾರ

ಅರ್ಥರ್ ಫೆರಿ | Photo Credit : AP, PTI
ವಿಂಬಲ್ಡನ್, ಜು.9: ಬ್ರಿಟನ್ನ ಅರ್ಥರ್ ಫೆರಿ 25 ವರ್ಷಗಳಲ್ಲಿ ಮೊದಲ ಬಾರಿ ವಿಂಬಲ್ಡನ್ ಟೆನಿಸ್ ಚಾಂಪಿಯನ್ಶಿಪ್ನಲ್ಲಿ ಸೆಮಿ ಫೈನಲ್ ತಲುಪಿದ ವೈಲ್ಡ್ ಕಾರ್ಡ್ ಆಟಗಾರನಾಗಿ ಹೊರಹೊಮ್ಮಿದ್ದಾರೆ.
ಬುಧವಾರ ಸೆಂಟರ್ ಕೋರ್ಟ್ನಲ್ಲಿ ನಡೆದಿದ್ದ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಫೆರಿ ಅವರು ಫ್ರೆಂಚ್ ಓಪನ್ ಟೂರ್ನಿಯ ಫೈನಲಿಸ್ಟ್ ಫ್ಲಾವಿಯೊ ಕೊಬೊಲ್ಲಿ ಅವರನ್ನು 6-4, 7-6(7/4), 6-0 ಸೆಟ್ಗಳ ಅಂತರದಿಂದ ಮಣಿಸಿದರು.
23ರ ವಯಸ್ಸಿನ ಅರ್ಥರ್ ಫೆರಿ ಮುಕ್ತ ಯುಗದಲ್ಲಿ ಗ್ರ್ಯಾನ್ಸ್ಲಾಮ್ ಟೂರ್ನಿಯಲ್ಲಿ ಸೆಮಿ ಫೈನಲ್ಗೆ ತಲುಪಿದ ಬ್ರಿಟನ್ನ ಮೊದಲ ವೈಲ್ಡ್ಕಾರ್ಡ್ ಆಟಗಾರನಾಗಿದ್ದಾರೆ.
ಫೆರಿ ರವಿವಾರ ನಡೆಯಲಿರುವ ಫೈನಲ್ನಲ್ಲಿ ಸ್ಥಾನ ಪಡೆಯಲು ಶುಕ್ರವಾರ ನಡೆಯಲಿರುವ ಸೆಮಿ ಫೈನಲ್ನಲ್ಲಿ ಫ್ರೆಂಚ್ ಓಪನ್ ಚಾಂಪಿಯನ್ ಅಲೆಕ್ಸಾಂಡರ್ ಝ್ವೆರೆವ್ರನ್ನು ಎದುರಿಸಲಿದ್ದಾರೆ.
ವಿಶ್ವದ ನಂ.114ನೇ ರ್ಯಾಂಕಿನ ಅಟಗಾರ ಫೆರಿ 1985ರ ನಂತರ ವಿಂಬಲ್ಡನ್ ಟೂರ್ನಿಯಲ್ಲಿ ಸೆಮಿ ಫೈನಲ್ ತಲುಪಿದ ಮೂರನೇ ಕೆಳ ರ್ಯಾಂಕಿನ ಆಟಗಾರನಾಗಿದ್ದಾರೆ.
ಫೆರಿ 2022ರ ನಂತರ ವಿಂಬಲ್ಡನ್ನಲ್ಲಿ ಸೆಮಿ ಫೈನಲ್ ತಲುಪಿದ ಬ್ರಿಟನ್ನ ಮೊದಲ ಆಟಗಾರನಾಗಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಕ್ಯಾಮರೂನ್ ನೊರ್ರಿ ಈ ಸಾಧನೆ ಮಾಡಿದ್ದರು.






