ವಿಂಬಲ್ಡನ್ | 2ನೇ ಸುತ್ತಿನಲ್ಲಿ ಬೋಪಣ್ಣ ಜೋಡಿ ನಿರ್ಗಮನ

Photo : olympics.com
ಲಂಡನ್: ಭಾರತದ ಅಗ್ರ ಕ್ರಮಾಂಕದ ಟೆನಿಸ್ ಆಟಗಾರ ರೋಹನ್ ಬೋಪಣ್ಣರ ವಿಂಬಲ್ಡನ್ ಪುರುಷರ ಡಬಲ್ಸ್ ಅಭಿಯಾನ ಶನಿವಾರ ಕೊನೆಗೊಂಡಿದೆ. ಬೋಪಣ್ಣ ಮತ್ತು ಅವರ ಜೊತೆಗಾರ ಆಸ್ಟ್ರೇಲಿಯದ ಮ್ಯಾಥ್ಯೂ ಎಬ್ಡನ್ ಎರಡನೇ ಸುತ್ತಿನಲ್ಲಿ ಹೊರಬಿದ್ದಿದ್ದಾರೆ.
ವಿಂಬಲ್ಡನ್ ನಲ್ಲಿ ಎರಡನೇ ಶ್ರೇಯಾಂಕ ಹೊಂದಿರುವ ಬೋಪಣ್ಣ-ಎಬ್ಡನ್ ಜೋಡಿಯನ್ನು ಜರ್ಮನಿಯ ಶ್ರೇಯಾಂಕರಹಿತ ಜೋಡಿಯಾದ ಕಾನ್ಸ್ಟಾಂಟಿನ್ ಫ್ರಾಂಶೆನ್ ಮತ್ತು ಹೆಂಡ್ರಿಕ್ ಜೆಬೆನ್ಸ್ 6-3, 7-6(4) ಸೆಟ್ ಗಳಿಂದ ಸೋಲಿಸಿದರು. ಇದು ಲಂಡನ್ ನ ಆರನೇ ಅಂಗಣದಲ್ಲಿ ಪುರುಷರ ಡಬಲ್ಸ್ ನಲ್ಲಿ ಲಭಿಸಿದ ಅತ್ಯಂತ ದೊಡ್ಡ ಅಚ್ಚರಿಯ ಫಲಿತಾಂಶಗಳ ಪೈಕಿ ಒಂದಾಗಿದೆ.
ಎರಡನೇ ಸೆಟ್ನ ಟೈಬ್ರೇಕರ್ನಲ್ಲಿ ಬೋಪಣ್ಣ ಮತ್ತು ಎಬ್ಡನ್ ಪ್ರತಿ ಹೋರಾಟ ನೀಡುವಲ್ಲಿ ವಿಫಲರಾದರು. ಅಂತಿಮವಾಗಿ ಅವರು ನೇರ ಸೆಟ್ ಗಳಲ್ಲಿ ಪಂದ್ಯವನ್ನು ಸೋತರು.
ಎರಡನೇ ಸೆಟ್ ತಲಾ ಐದು ಗೇಮ್ ಳಿಂದ ಸಮಬಲದಲ್ಲಿದ್ದಾಗ, ಮಳೆಯಿಂದಾಗಿ ಪಂದ್ಯವನ್ನು ನಿಲ್ಲಿಸಲಾಯಿತು. ಪಂದ್ಯ ಪುನರಾರಂಭಗೊಂಡಾಗ ಅದು ಟೈಬ್ರೇಕರ್ನತ್ತ ಸಾಗಿತು. ಟೈಬ್ರೇಕರ್ನಲ್ಲಿ ಫ್ರಾಂಶೆನ್-ಜೆಬೆನ್ಸ್ ಜೋಡಿಯು 4-1ರ ಉತ್ತಮ ಮುನ್ನಡೆಯನ್ನು ಪಡೆಯಿತು. ಅದನ್ನು ಅವರು ಕೊನೆಯವರೆಗೂ ಉಳಿಸಿಕೊಂಡರು.
ಇದು ಈ ಋತುವಿನ ಎರಡನೇ ಪ್ರಮುಖ ಪ್ರಶಸ್ತಿಯನ್ನು ಎದುರು ನೋಡುತ್ತಿದ್ದ ಭಾರತ-ಆಸ್ಟ್ರೇಲಿಯ ಜೋಡಿ ಅನುಭವಿಸಿದ ಅತ್ಯಂತ ದೊಡ್ಡ ಹಿನ್ನಡೆಯಾಗಿದೆ. ಈ ಜೋಡಿಯು ಈ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯನ್ನು ಗೆದ್ದಿತ್ತು.
ಪುರುಷರ ಡಬಲ್ಸ್ ನಲ್ಲಿ ಬೋಪಣ್ಣರ ನಿರ್ಗಮನದೊಂದಿಗೆ, ವಿಂಬಲ್ಡನ್ 2024ರಲ್ಲಿ ಭಾರತದ ಅಭಿಯಾನ ಬೇಗನೇ ಮುಕ್ತಾಯಗೊಂಡಿದೆ. ಸುಮಿತ್ ನಾಗಲ್ ಮತ್ತು ಎನ್. ಶ್ರೀರಾಮ್ ಬಾಲಾಜಿ ಜೋಡಿಯು ಪುರುಷರ ಡಬಲ್ಸ್ ನ ಮೊದಲ ಸುತ್ತಿನಲ್ಲೇ ಹೊರಬಿದ್ದಿತ್ತು. ಅದೇ ವೇಳೆ, ಯೂಕಿ ಭಾಂಬ್ರಿ ಪುರುಷರ ಡಬಲ್ಸ್ ನಲ್ಲಿ ಮೊದಲ ಬಾರಿಗೆ ಎರಡನೇ ಸುತ್ತು ತಲುಪಿದ್ದರು. ಆದರೆ, ಎರಡನೇ ಸುತ್ತಿನಲ್ಲಿ, ಭಾಂಬ್ರಿ ಮತ್ತು ಅವರ ಜೊತೆಗಾರ ಅಲ್ಬಾನೊ ಒಲಿವೆಟಿಯನ್ನು ಜರ್ಮನಿಯ ಕೆವಿನ್ ಕಾವೀಟ್ಸ್ ಮತ್ತು ಟಿಮ್ ಪೂಟ್ಸ್ 4-6, 6-4, 6-3 ಸೆಟ್ ಗಳಿಂದ ಮಣಿಸಿದ್ದಾರೆ.
ಶ್ರೀರಾಮ್ ಬಾಲಾಜಿ ಮತ್ತು ಅವರ ಬ್ರಿಟಿಶ್ ಜೊತೆಗಾರ ಲ್ಯೂಕ್ ಜಾನ್ಸನ್ರನ್ನು ಮೊದಲ ಸುತ್ತಿನಲ್ಲೇ ಮಾರ್ಸೆಲೊ ಅರೆವಾಲೊ ಮತ್ತು ಮೇಟ್ ಪಾವಿಕ್ ಜೋಡಿಯು ನೇರ ಸೆಟ್ ಗಳಲ್ಲಿ ಸೋಲಿಸಿತ್ತು.
ಸುಮಿತ್ ನಾಗಲ್ ಮತ್ತು ಅವರ ಸರ್ಬಿಯದ ಜೋಡಿ ಡುಸಾನ್ ಲಜೊವಿಚ್ ಕೂಡ ಪುರುಷರ ಡಬಲ್ಸ್ ನಲ್ಲಿ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದಾರೆ.







