ವಿಂಬಲ್ಡನ್ ಟೆನಿಸ್ ಚಾಂಪಿಯನ್ ಶಿಪ್ | ಮೊದಲ ಬಾರಿ ಸೆಮಿ ಫೈನಲ್ ಗೆ ತಲುಪಿದ ಲೊರೆಂರೊ ಮುಸೆಟ್ಟಿ

PC : PTI
ಲಂಡನ್ : ಇಟಲಿಯ ಲೊರೆಂರೊ ಮುಸೆಟ್ಟಿ ವಿಂಬಲ್ಡನ್ ಚಾಂಪಿಯನ್ ಶಿಪ್ನಲ್ಲಿ ಬುಧವಾರ ಮೊದಲ ಬಾರಿ ಸೆಮಿ ಫೈನಲ್ಗೆ ತಲುಪುವ ಮೂಲಕ ತನ್ನ ವೃತ್ತಿಜೀವನದಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿದ್ದಾರೆ.
ಅಮೆರಿಕದ 13ನೇ ಶ್ರೇಯಾಂಕದ ಟೇಲರ್ ಫ್ರಿಟ್ಜ್ ವಿರುದ್ಧ ಐದು ಸೆಟ್ಗಳ ಹೋರಾಟದಲ್ಲಿ ಜಯಭೇರಿ ಬಾರಿಸಿದ 25ನೇ ಶ್ರೇಯಾಂಕದ ಮುಸೆಟ್ಟಿ ಅಂತಿಮ-4ರ ಸುತ್ತಿನಲ್ಲಿ ಸ್ಥಾನ ಗಿಟ್ಟಿಸಿಕೊಂಡರು.
ಮುಸೆಟ್ಟಿ 3-6, 7-6(7/5), 6-2, 3-6, 6-1 ಸೆಟ್ಗಳ ಅಂತರದಿಂದ ಗೆಲುವು ದಾಖಲಿಸಿದರು.
ಇಂದು ನಾನು ಬಹುಶಃ ನನ್ನ ಶ್ರೇಷ್ಠ ಟೆನಿಸ್ ಆಡಿದ್ದೇನೆ. ಜೊಕೊವಿಕ್ ಅವರು ಇಲ್ಲಿನ ಕ್ರೀಡಾಂಗಣವನ್ನು ನನಗಿಂತ ಚೆನ್ನಾಗಿ ಅರಿತುಕೊಂಡಿದ್ದಾರೆ. ಅವರು ಎಲ್ಲ ಕಡೆಯೂ ಲೆಜೆಂಡ್, ಅವರು ಯೋಚಿಸಿದ್ದನ್ನು ಮಾಡುತ್ತಾರೆ. ನಾವು ಸಾಕಷ್ಟು ಬಾರಿ ಆಡಿದ್ದೇವೆ. ಸೆಮಿ ಫೈನಲ್ನಲ್ಲಿ ಭಾರೀ ಹೋರಾಟದ ನಿರೀಕ್ಷೆಯಲ್ಲಿರುವೆ. ಇದು ಟೆನಿಸ್ನಲ್ಲಿ ಕಠಿಣ ಸವಾಲು, ನಾನು ಸವಾಲೊಡ್ಡಲು ಬಯಸಿದ್ದೇನೆ. ಗೆಲ್ಲಲು ಶೇ.100ರಷ್ಟು ಶ್ರಮಹಾಕುವೆ ಎಂದು ಮುಸೆಟ್ಟಿ ಹೇಳಿದ್ದಾರೆಂದು ಎಎಫ್ಪಿ ವರದಿ ಮಾಡಿದೆ.
ಮುಸೆಟ್ಟಿ ಸೆಮಿ ಫೈನಲ್ನಲ್ಲಿ ಬಲಿಷ್ಠ ಎದುರಾಳಿ, ಏಳು ಬಾರಿಯ ವಿಂಬಲ್ಡನ್ ಚಾಂಪಿಯನ್ ನೊವಾಕ್ ಜೊಕೊವಿಕ್ರನ್ನು ಎದುರಿಸಲಿದ್ದಾರೆ. ಜೊಕೊವಿಕ್ ಕ್ವಾರ್ಟರ್ ಫೈನಲ್ನಲ್ಲಿ ಅಮೆರಿಕದ ಅಲೆಕ್ಸ್ ಡಿ ಮಿನೌರ್ರನ್ನು ಎದುರಿಸಬೇಕಾಗಿತ್ತು. ಆದರೆ ಮಿನೌರ್ ಗಾಯದಿಂದಾಗಿ ಸ್ಪರ್ಧೆಯಿಂದ ಹಿಂದೆ ಸರಿದರು. ಹೀಗಾಗಿ ಜೊಕೊವಿಕ್ 13ನೇ ಬಾರಿ ವಿಂಬಲ್ಡನ್ನಲ್ಲಿ ಸೆಮಿ ಫೈನಲ್ಗೆ ಪ್ರವೇಶಿಸಿದರು.
ಮುಸೆಟ್ಟಿ ಮೊದಲ ಸೆಟ್ನಲ್ಲಿ ಸೋತಿದ್ದರು. ಎರಡನೇ ಸೆಟ್ನ ಆರಂಭದಲ್ಲಿ ಹಿನ್ನಡೆ ಕಂಡಿದ್ದರೂ ಗೆಲುವು ಸಾಧಿಸಲು ಯಶಸ್ವಿಯಾದರು. ಮುಸೆಟ್ಟಿ 3ನೇ ಸೆಟ್ನಲ್ಲಿ ಪ್ರಾಬಲ್ಯ ಮೆರೆದರು. 4ನೇ ಸೆಟ್ಟನ್ನು ಜಯಿಸಿದ ಫ್ರಿಟ್ಜ್ ಪಂದ್ಯವನ್ನು ಸಮಬಲಗೊಳಿಸಿದರು. 5ನೇ ಸೆಟ್ನಲ್ಲಿ ತಿರುಗೇಟು ನೀಡಿದ ಮುಸೆಟ್ಟಿ ಆರಂಭದಲ್ಲಿ 5-0 ಮುನ್ನಡೆ ಪಡೆದರು. ಅಂತಿಮವಾಗಿ 6-1 ಅಂತರದಿಂದ ಜಯಶಾಲಿಯಾದರು. ವೀರೋಚಿತ ಗೆಲುವಿನೊಂದಿಗೆ ಸೆಮಿ ಫೈನಲ್ಗೆ ಪ್ರವೇಶಿಸಿದರು.
ಸರ್ಬಿಯದ ಆಟಗಾರ ಜೊಕೊವಿಕ್ ಇಟಲಿ ಆಟಗಾರನ ವಿರುದ್ಧ ಈತನಕ ಆಡಿರುವ 6 ಪಂದ್ಯಗಳಲ್ಲಿ 5 ಬಾರಿ ಜಯ ಸಾಧಿಸಿ ಪ್ರಾಬಲ್ಯ ಸಾಧಿಸಿದ್ದಾರೆ. ಕಳೆದ ತಿಂಗಳು ಫ್ರೆಂಚ್ ಓಪನ್ನಲ್ಲಿ ಜೊಕೊವಿಕ್ ಐದು ಸೆಟ್ಗಳ ಪಂದ್ಯದಲ್ಲಿ ಮರು ಹೋರಾಟ ನೀಡಿ ಗೆಲುವಿನ ನಗೆ ಬೀರಿದ್ದರು.
ಮುಸೆಟ್ಟಿ 2021ರ ಫ್ರೆಂಚ್ ಓಪನ್ನ ಪ್ರಿಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜೊಕೊವಿಕ್ ವಿರುದ್ಧ ಮೊದಲೆರಡು ಸೆಟ್ಗಳನ್ನು ಜಯಿಸಿದ್ದರು. ಆದರೆ, ಮೂರನೇ ಸೆಟ್ನಲ್ಲಿ ಗಾಯಗೊಂಡಿದ್ದ ಮುಸೆಟ್ಟಿ ಅವರ ಅಮೋಘ ಗೆಲುವಿನ ಕನಸು ಕಮರಿಹೋಗಿತ್ತು.







