ವಿಂಬಲ್ಡನ್ ಟೆನಿಸ್ ಚಾಂಪಿಯನ್ಶಿಪ್ | ಜೆಸ್ಸಿಕಾ ಪೆಗುಲಾಗೆ ಆಘಾತಕಾರಿ ಸೋಲು

ಜೆಸ್ಸಿಕಾ ಪೆಗುಲಾ | PC : X
ಲಂಡನ್: ಅಮೆರಿಕದ ಮೂರನೇ ಶ್ರೇಯಾಂಕದ ಆಟಗಾರ್ತಿ ಜೆಸ್ಸಿಕಾ ಪೆಗುಲಾ ಅವರು ವಿಂಬಲ್ಡನ್ ಟೆನಿಸ್ ಚಾಂಪಿಯನ್ಶಿಪ್ನ ಮೊದಲ ಸುತ್ತಿನ ಪಂದ್ಯದಲ್ಲೇ ಇಟಲಿಯ ಎಲಿಸಬೆಟ್ಟಾ ವಿರುದ್ಧ ನೇರ ಸೆಟ್ ಗಳ ಅಂತರದಿಂದ ಆಘಾತಕಾರಿ ಸೋಲು ಕಂಡಿದ್ದಾರೆ.
ಮಂಗಳವಾರ ಕೇವಲ 58 ನಿಮಿಷಗಳಲ್ಲಿ ಅಂತ್ಯಗೊಂಡ ಮಹಿಳೆಯರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಪೆಗುಲಾ ಅವರು ವಿಶ್ವದ 116ನೇ ರ್ಯಾಂಕಿನ ಆಟಗಾರ್ತಿ ಎಲಿಸಬೆಟ್ಟಾ ಎದುರು 2-6, 3-6 ಸೆಟ್ಗಳ ಅಂತರದಿಂದ ಸೋತಿದ್ದಾರೆ.
2024ರ ಯು.ಎಸ್. ಓಪನ್ ಫೈನಲಿಸ್ಟ್ ಗೆ ತೀವ್ರ ಹಿನ್ನಡೆಯಾಗಿದೆ. ಪೆಗುಲಾ ಆಲ್ ಇಂಗ್ಲೆಂಡ್ ಕ್ಲಬ್ ನಲ್ಲಿ ಈ ತನಕ ಕ್ವಾರ್ಟರ್ ಫೈನಲ್ ಹಂತ ದಾಟಿಲ್ಲ.
ಕಳೆದ ವರ್ಷ ಯು.ಎಸ್. ಓಪನ್ ಫೈನಲ್ನಲ್ಲಿ ಆರ್ಯನಾ ಸಬಲೆಂಕಾ ವಿರುದ್ಧ ಸೋತ ನಂತರ ವಿಶ್ವದ ನಂ.3ನೇ ಆಟಗಾರ್ತಿ ಪೆಗುಲಾ ತನ್ನ ಎಲ್ಲ ಮೂರು ಗ್ರ್ಯಾನ್ಸ್ಲಾಮ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ಗಿಂತ ಮೊದಲೆ ನಿರ್ಗಮಿಸಿದ್ದಾರೆ.
ಇಟಲಿಯ ಆಟಗಾರ್ತಿ ಟಾಪ್-10 ಆಟಗಾರ್ತಿಯ ವಿರುದ್ಧ 2ನೇ ಬಾರಿ ಜಯ ಸಾಧಿಸಿದ್ದಾರೆ. 24ರ ಹರೆಯದ ಎಲಿಸಬೆಟ್ಟಾ ಈ ತನಕ ವಿಂಬಲ್ಡನ್ನಲ್ಲಿ 3ನೇ ಸುತ್ತು ದಾಟಿಲ್ಲ. ಕಳೆದ ವರ್ಷ ಫ್ರೆಂಚ್ ಓಪನ್ನಲ್ಲಿ ಅಂತಿಮ-16ರ ಸುತ್ತು ತಲುಪಿದ್ದು, ಶ್ರೇಷ್ಠ ಸಾಧನೆಯಾಗಿದೆ.







