ವಿಂಬಲ್ಡನ್ ಟೆನಿಸ್ ಚಾಂಪಿಯನ್ಶಿಪ್ | ಮೊದಲ ಸುತ್ತಿನಲ್ಲಿ ಸೋತ ಫ್ರೆಂಚ್ ಓಪನ್ ಚಾಂಪಿಯನ್ ಕೊಕೊ ಗೌಫ್
ನೊವಾಕ್ ಜೊಕೊವಿಕ್ಗೆ ಜಯ

ಕೊಕೊ ಗೌಫ್ | PC : X
ಲಂಡನ್: ಇತ್ತೀಚೆಗಷ್ಟೇ ಫ್ರೆಂಚ್ ಓಪನ್ ಚಾಂಪಿಯನ್ ಕಿರೀಟ ಧರಿಸಿದ್ದ 2ನೇ ಶ್ರೇಯಾಂಕದ ಕೊಕೊ ಗೌಫ್ ಅವರ ವಿಂಬಲ್ಡನ್ ಚಾಂಪಿಯನ್ಶಿಪ್ ಅಭಿಯಾನವು ಆಘಾತಕಾರಿಯಾಗಿ ಅಂತ್ಯವಾಗಿದೆ.
ಅಮೆರಿಕದ ಆಟಗಾರ್ತಿ ಸೋಮವಾರ ನಡೆದ ಮಹಿಳೆಯರ ಸಿಂಗಲ್ಸ್ ನ ಮೊದಲ ಸುತ್ತಿನ ಪಂದ್ಯದಲ್ಲಿ ಉಕ್ರೇನ್ನ ಡಯಾನಾ ಯಾಸ್ಟ್ರೆಂಸ್ಕಾ ವಿರುದ್ಧ 6-7(3/7), 1-6 ಸೆಟ್ ಗಳ ಅಂತರದಿಂದ ಸೋತಿದ್ದಾರೆ.
ಒಂದು ವರ್ಷದ ಹಿಂದೆ ಇದೇ ಸ್ಥಳದಲ್ಲಿ ಮೊದಲ ಸುತ್ತಿನಲ್ಲಿ ಸೋತ ನಂತರ 20ರ ಹರೆಯದ ಗೌಫ್ 2ನೇ ಬಾರಿ ಗ್ರ್ಯಾನ್ ಸ್ಲಾಮ್ ಟೂರ್ನಿಯಿಂದ ಬೇಗನೆ ನಿರ್ಗಮಿಸಿದ್ದಾರೆ.
ಫ್ರೆಂಚ್ ಓಪನ್ ಟೂರ್ನಿಯಲ್ಲಿ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿ ಗೆದ್ದ ನಂತರ ಸಂಪೂರ್ಣ ಆತ್ಮವಿಶ್ವಾಸದಲ್ಲಿ ಗೌಫ್ ಆಲ್ ಇಂಗ್ಲೆಂಡ್ ಕ್ಲಬ್ಗೆ ಆಗಮಿಸಿದ್ದರು.
ಸೆಂಟರ್ ಕೋರ್ಟ್ನಲ್ಲಿ ನಡೆದಿದ್ದ ಪಂದ್ಯದ ಮೊದಲ ಸೆಟ್ ಅನ್ನು ಟೈ-ಬ್ರೇಕರ್ನಲ್ಲಿ ಕಳೆದುಕೊಂಡರು. ವಿಶ್ವದ 42ನೇ ರ್ಯಾಂಕಿನ ಆಟಗಾರ್ತಿ ಡಯಾನಾ ಮೇಲುಗೈ ಸಾಧಿಸಲು ಅವಕಾಶ ನೀಡಿದರು.
ಪ್ರಸಕ್ತ ಟೂರ್ನಿಯಲ್ಲಿ 3ನೇ ಶ್ರೇಯಾಂಕದ ಜೆಸ್ಸಿಕಾ ಪೆಗುಲಾ ಹಾಗೂ 5ನೇ ಶ್ರೇಯಾಂಕದ ಝೆಂಗ್ ಕ್ವಿನ್ ವೆನ್ ಕೂಡ ಕೆಳ ರ್ಯಾಂಕಿನ ಎದುರಾಳಿಗಳ ವಿರುದ್ಧ ನೇರ ಸೆಟ್ ಗಳ ಅಂತರದಿಂದ ಸೋತಿದ್ದಾರೆ.
► ನೊವಾಕ್ ಜೊಕೊವಿಕ್ಗೆ ಜಯ
ವಿಂಬಲ್ಡನ್ ಟೆನಿಸ್ ಚಾಂಪಿಯನ್ಶಿಪ್ನಲ್ಲಿ ಏಳು ಬಾರಿಯ ಚಾಂಪಿಯನ್ ನೊವಾಕ್ ಜೊಕೊವಿಕ್ ಶುಭಾರಂಭ ಮಾಡಿದ್ದು, ತನ್ನ ದಾಖಲೆಯ 25ನೇ ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಗೆಲ್ಲುವ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇರಿಸಿದ್ದಾರೆ.
ಆಲ್ ಇಂಗ್ಲೆಂಡ್ ಕ್ಲಬ್ನಲ್ಲಿ ಮೊದಲಸುತ್ತಿನಲ್ಲಿ ಅಜೇಯವಾಗುಳಿದಿರುವ ಜೊಕೊವಿಕ್ ಇದೀಗ ಆಡಿರುವ ಎಲ್ಲ 20 ಪಂದ್ಯಗಳನ್ನು ಜಯಿಸಿದ್ದಾರೆ. ಹಿಂದಿನ 6 ವರ್ಷಗಳಲ್ಲಿ ಫೈನಲ್ಗೆ ತಲುಪಿದ್ದು 2023 ಹಾಗೂ 2024ರಲ್ಲಿ ಕಾರ್ಲೊಸ್ ಅಲ್ಕರಾಝ್ ಗೆ ಸೋಲನುಭವಿಸಿ ರನ್ನರ್ಸ್ ಅಪ್ ಆಗಿದ್ದರು.
ಮಂಗಳವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಫ್ರಾನ್ಸ್ ನ ಅಲೆಕ್ಸಾಂಡರ್ ಮುಲ್ಲರ್ರನ್ನು ಎದುರಿಸಿದ ಸರ್ಬಿಯ ಆಟಗಾರ 6-1, 6-7(7/9),5-2, 6-2 ಸೆಟ್ ಗಳಿಂದ ಮಣಿಸಿದರು.
ಪಂದ್ಯದ ವೇಳೆ ಅನಾರೋಗ್ಯಕ್ಕೆ ಒಳಗಾದ ಜೊಕೊವಿಕ್ ಮೊದಲ ಸೆಟ್ ಗೆದ್ದ ನಂತರ ಎರಡನೇ ಸೆಟ್ಟನ್ನು ಟೈ ಬ್ರೇಕರ್ ನಲ್ಲಿ ಕಳೆದುಕೊಂಡರು.
ಪಂದ್ಯದ ವೇಳೆ ನನಗೆ ಹೊಟ್ಟೆನೋವು ಕಾಡಿತು. ವೈದ್ಯರು ನೀಡಿದ ಕೆಲವು ಮಾತ್ರೆಗಳಿಂದ ಶಕ್ತಿ ಮರಳಿತು. ಪಂದ್ಯವನ್ನು ಪೂರ್ಣಗೊಳಿಸಿದೆ ಎಂದು ಜೊಕೊವಿಕ್ ಹೇಳಿದರು.
3ನೇ ಶ್ರೇಯಾಂಕದ ಅಲೆಕ್ಸಾಂಡರ್ ಝ್ವೆರೆವ್ ಫ್ರೆಂಚ್ ಆಟಗಾರ ಅರ್ಥರ್ ರಿಂಡರ್ಕ್ಲೆಚ್ ವಿರುದ್ಧ ಆಘಾತಕಾರಿ ಸೋಲನುಭವಿಸಿದರು.
ಈ ವರ್ಷಾರಂಭದಲ್ಲಿ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ರನ್ನರ್ಸ್ ಅಪ್ ಆಗಿದ್ದ ಜರ್ಮನಿಯ ಆಟಗಾರ ಐದು ಸೆಟ್ ಗಳ ಹೋರಾಟದಲ್ಲಿ ಸೋಲನುಭವಿಸಿದರು. 2019ರ ನಂತರ ಮೊದಲ ಬಾರಿ ಗ್ರ್ಯಾನ್ಸ್ಲಾಮ್ ಟೂರ್ನಿಯಲ್ಲಿ ಬೇಗನೆ ನಿರ್ಗಮಿಸಿದರು.
29ರ ಹರೆಯದ ಅರ್ಥರ್ ರಿಂಡರ್ಕ್ಲೆಚ್ 4 ಗಂಟೆ, 40 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ 7-6(3), 6-7(8), 6-3, 6-7(5), 6-4 ಸೆಟ್ ಗಳ ಅಂತರದಿಂದ ಜಯಶಾಲಿಯಾದರು.
ಝ್ವೆರೆವ್ರಲ್ಲದೆ ಲೊರೆಂರೊ ಮುಸೆಟ್ಟಿ, ಹೋಲ್ಗರ್ ರೂನ್, ಡೇನಿಯಲ್ ಮೆಡ್ವೆಡೆವ್ ಅವರು ಕೂಡ ವಿಂಬಲ್ಡನ್ನ ಮೊದಲ ಸುತ್ತಿನಲ್ಲೇ ಸೋತು ನಿರ್ಗಮಿಸಿದ್ದು, ಇವೆಲ್ಲರೂ ಹುಲ್ಲುಹಾಸಿನ ಅಂಗಣದಲ್ಲಿ ಅಗ್ರ-10 ಶ್ರೇಯಾಂಕಿತ ಆಟಗಾರರಾಗಿದ್ದಾರೆ.







