ವಿಂಬಲ್ಡನ್ ಟೆನಿಸ್ ಚಾಂಪಿಯನ್ ಶಿಪ್ | ಕ್ವಾರ್ಟರ್ ಫೈನಲ್ ಗೆ ಜನ್ನಿಕ್ ಸಿನ್ನರ್, ಸ್ವಿಯಾಟೆಕ್,ಆಂಡ್ರೀವಾ

ಜನ್ನಿಕ್ ಸಿನ್ನರ್ | PC : @Wimbledon
ಲಂಡನ್: ಅಗ್ರ ಶ್ರೇಯಾಂಕದ ಜನ್ನಿಕ್ ಸಿನ್ನರ್, 4ನೇ ರ್ಯಾಂಕಿನ ಆಟಗಾರ್ತಿ ಇಗಾ ಸ್ವಿಯಾಟೆಕ್ ಹಾಗೂ 7ನೇ ಶ್ರೇಯಾಂಕದ ಮಿರ್ರಾ ಆಂಡ್ರೀವಾ ವಿಂಬಲ್ಡನ್ ಟೆನಿಸ್ ಚಾಂಪಿಯನ್ಶಿಪ್ನಲ್ಲಿ ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ಗೆ ಪ್ರವೇಶಿಸಿದ್ದಾರೆ.
ಸೋಮವಾರ ನಡೆದ ಪುರುಷರ ಸಿಂಗಲ್ಸ್ನ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಲ್ಗೇರಿಯದ ಗ್ರಿಗೋರ್ ಡಿಮಿಟ್ರೋವ್ ವಿಶ್ವದ ನಂ.1 ಆಟಗಾರ ಸಿನ್ನರ್ ವಿರುದ್ಧ 6-3, 7-5, 2-2 ಸೆಟ್ ಗಳ ಅಂತರದಿಂದ ಮುನ್ನಡೆಯಲ್ಲಿದ್ದಾಗಲೇ ಗಾಯಗೊಂಡು ನಿವೃತ್ತಿಯಾದರು. ಈ ಹಿನ್ನೆಲೆಯಲ್ಲಿ ಇಟಲಿ ಆಟಗಾರ ಸಿನ್ನರ್ ಅಂತಿಮ-8ರ ಸುತ್ತಿಗೆ ಪ್ರವೇಶಿಸಿದರು.
ಸಿನ್ನರ್ ಸತತ 7ನೇ ಗ್ರ್ಯಾನ್ ಸ್ಲಾಮ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ತಲುಪಿದ ಮುಕ್ತ ಟೆನಿಸ್ ಯುಗದ 9ನೇ ಆಟಗಾರನಾಗಿದ್ದಾರೆ.
ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ್ದಾಗ ಕಾಡಿದ ಗಾಯದ ಸಮಸ್ಯೆಯಿಂದಾಗಿ 19ನೇ ಶ್ರೇಯಾಂಕದ ಡಿಮಿಟ್ರೋವ್ ಕಣ್ಣೀರಿಡುತ್ತಾ ಮೈದಾನವನ್ನು ತೊರೆದರು. 34ರ ಹರೆಯದ ಡಿಮಿಟ್ರೋವ್ಗೆ ಪ್ರೇಕ್ಷಕರ ಹೃತ್ಪೂರ್ವಕ ಚಪ್ಪಾಳೆಗೆ ಪ್ರತಿಕ್ರಿಯಿಸಲು ಸಾಧ್ಯವಾಗಲಿಲ್ಲ. ಸರಿಯಾಗಿ ನಡೆಯಲು ಪರದಾಡಿದ ಡಿಮಿಟ್ರೋವ್ಗೆ ಸಿನ್ನರ್ ಸಹಾಯಕ್ಕೆ ಧಾವಿಸಿ ಕ್ರೀಡಾ ಸ್ಫೂರ್ತಿ ಮೆರೆದರು.
‘‘ನಿಜವಾಗಿಯೂ ನನಗೆ ಏನು ಹೇಳಬೇಕೆಂದು ಗೊತ್ತಾಗುತ್ತಿಲ್ಲ. ಇದು ನನ್ನ ನಿಜವಾದ ಗೆಲುವಲ್ಲ, ಸಾಧನೆಯೂ ಅಲ್ಲ, ಅವರು ಅದ್ಭುತ ಆಟಗಾರ, ಅದನ್ನು ನಾವೆಲ್ಲರೂ ಇಂದು ನೋಡಿದ್ದೇವೆ. ಅವರಿಗೆ ಕಳೆದ ಕೆಲವು ವರ್ಷಗಳಿಂದ ಅದೃಷ್ಟ ಕೈಕೊಡುತ್ತಿದೆ. ಅವರು ನನ್ನ ಉತ್ತಮ ಸ್ನೇಹಿತರಾಗಿದ್ದು, ಟೆನಿಸ್ ಮೈದಾನದ ಹೊರಗೆ ಇಬ್ಬರು ಪರಸ್ಪರ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇವೆ. ಅವರನ್ನು ಈ ಸ್ಥಿತಿಯಲ್ಲಿ ನೋಡಿದಾಗ, ಮುಂದಿನ ಸುತ್ತಿನಲ್ಲಿ ಅವರಿಗೆ ಆಡುವ ಅವಕಾಶ ನೀಡಬೇಕಾಗಿತ್ತು. ಅದಕ್ಕೆ ಅವರು ಅರ್ಹರಿದ್ದಾರೆ’’ ಎಂದು ಸಿನ್ನರ್ ಹೇಳಿದ್ದಾರೆ.
ಡಿಮಿಟ್ರೋವ್ ಅವರು ಈ ತನಕ ಆಡಿರುವ ಎಲ್ಲ 5 ಗ್ರ್ಯಾನ್ ಸ್ಲಾಮ್ ಟೂರ್ನಿಗಳಲ್ಲೂ ಗಾಯಗೊಂಡು ನಿವೃತ್ತಿಯಾಗಿದ್ದಾರೆ.
ಮೂರು ಬಾರಿಯ ಗ್ರ್ಯಾನ್ ಸ್ಲಾಮ್ ಚಾಂಪಿಯನ್ ಸಿನ್ನರ್ ಆಲ್ ಇಂಗ್ಲೆಂಡ್ ಕ್ಲಬ್ ನಲ್ಲಿ ಮೊದಲ ಮೂರು ಸುತ್ತುಗಳಲ್ಲಿ ಉತ್ತಮ ಫಾರ್ಮ್ ಪ್ರದರ್ಶಿಸಿದ್ದು, ಕೇವಲ 17 ಗೇಮ್ ಗಳನ್ನು ಕೈಬಿಟ್ಟಿದ್ದರು.
ಸಿನ್ನರ್ 4ನೇ ಸುತ್ತಿನಲ್ಲಿ ಆಡುವಾಗ ಬಲ ಮೊಣಕೈಗೆ ಗಾಯವಾಗಿದ್ದು, ಗಾಯದ ಸ್ವರೂಪವು ಮಂಗಳವಾರ ಲಭಿಸಲಿರುವ ಎಂಆರ್ಐ ಸ್ಕ್ಯಾನಿಂಗ್ನಲ್ಲಿ ಗೊತ್ತಾಗಲಿದೆ. ಸಿನ್ನರ್ ಅವರು ಮುಂದಿನ ಸುತ್ತಿನಲ್ಲಿ ಅಮೆರಿಕದ 10ನೇ ಶ್ರೇಯಾಂಕದ ಬೆನ್ ಶೆಲ್ಟನ್ ರನ್ನು ಎದುರಿಸಲಿದ್ದಾರೆ. ಶೆಲ್ಟನ್ ಅವರು ಇಟಲಿಯ ಲೊರೆಂರೊ ಸೊನೆಗೊರನ್ನು 3-6, 6-1, 7-6, 7-5 ಸೆಟ್ ಗಳ ಅಂತರದಿಂದ ಮಣಿಸಿದ್ದಾರೆ.
ಇದಕ್ಕೂ ಮೊದಲು 6ನೇ ಶ್ರೇಯಾಂಕದ ಜೊಕೊವಿಕ್ ಅವರು ಆಸ್ಟ್ರೇಲಿಯದ ಅಲೆಕ್ಸ್ ಡಿ ಮಿನೌರ್ ರನ್ನು 1-6, 6-4, 6-4 6-4 ಸೆಟ್ ಗಳ ಅಂತರದಿಂದ ಮಣಿಸುವ ಮೂಲಕ ಪ್ರಸಕ್ತ ಟೂರ್ನಿಯಲ್ಲಿ 16ನೇ ಬಾರಿ ಕ್ವಾರ್ಟರ್ ಫೈನಲ್ ತಲುಪಿದರು.
ವಿಂಬಲ್ಡನ್ ಟೂರ್ನಿಯಲ್ಲಿ 101ನೇ ಗೆಲುವು ದಾಖಲಿಸಿರುವ 38ರ ಹರೆಯದ ಜೊಕೊವಿಕ್ ದಾಖಲೆಯ 25ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಜಯಿಸಿ ಮಾರ್ಗರೆಟ್ ಕೋರ್ಟ್ ಅವರ ದೀರ್ಘಕಾಲದ ದಾಖಲೆಯನ್ನು ಮುರಿಯುವ ಗುರಿ ಇಟ್ಟುಕೊಂಡಿದ್ದಾರೆ. 8ನೇ ಬಾರಿ ವಿಂಬಲ್ಡನ್ ಪ್ರಶಸ್ತಿ ಜಯಿಸಿ ರೋಜರ್ ಫೆಡರರ್ ದಾಖಲೆಯನ್ನು ಸರಿಗಟ್ಟುವ ವಿಶ್ವಾಸದಲ್ಲಿದ್ದಾರೆ.
ಜೊಕೊವಿಕ್ ಅಂತಿಮ-8ರ ಸುತ್ತಿನಲ್ಲಿ ಇಟಲಿಯ 22ನೇ ಶ್ರೇಯಾಂಕದ ಪ್ಲಾವಿಯೊ ಕೊಬೊಲ್ಲಿ ಅವರನ್ನು ಎದುರಿಸಲಿದ್ದಾರೆ. ಕೊಬೊಲ್ಲಿ ಮಾಜಿ ವಿಂಬಲ್ಡನ್ ರನ್ನರ್-ಅಪ್ ಮರಿನ್ ಸಿಲಿಕ್ರನ್ನು 6-4, 6-4, 6-7(4/7), 7-6(7-3)ಸೆಟ್ ಗಳ ಅಂತರದಿಂದ ಮಣಿಸಿದ್ದಾರೆ.
ಇದೇ ವೇಳೆ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ತನ್ನ ಶ್ರೇಷ್ಠ ಪ್ರದರ್ಶನ ಮುಂದುವರಿಸಿದ ಇಗಾ ಸ್ವಿಯಾಟೆಕ್ ಡೆನ್ಮಾರ್ಕ್ನ 23ನೇ ಶ್ರೇಯಾಂಕದ ಕ್ಲಾರಾ ಟೌಸನ್ ರನ್ನು 6-4, 6-1 ನೇರ ಸೆಟ್ ಗಳ ಅಂತರದಿಂದ ಮಣಿಸುವುದರೊಂದಿಗೆ ಅಂತಿಮ-8ರ ಸುತ್ತು ತಲುಪಿದ್ದಾರೆ.
4ನೇ ರ್ಯಾಂಕಿನ ಸ್ವಿಯಾಟೆಕ್, ಐದು ಬಾರಿ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಜಯಿಸಿದ್ದಾರೆ. ಆದರೆ ಈ ತನಕ ವಿಂಬಲ್ಡನ್ ಟೂರ್ನಿಯಲ್ಲಿ ಸೆಮಿ ಫೈನಲ್ ಗೆ ತಲುಪಿಲ್ಲ.
ಪ್ರಸಕ್ತ ಟೂರ್ನಿಯಲ್ಲಿ ಅಗ್ರ ಶ್ರೇಯಾಂಕದ ಬಹುತೇಕ ಆಟಗಾರ್ತಿಯರು ಸೋತು ನಿರ್ಗಮಿಸಿರುವ ಹಿನ್ನೆಲೆಯಲ್ಲಿ ಪಂದ್ಯಾವಳಿಯ 2ನೇ ವಾರ 24ರ ಹರೆಯದ ಸ್ವಿಯಾಟೆಕ್ ಸುಸ್ಥಿತಿಯಲ್ಲಿದ್ದಾರೆ.
ಪೋಲ್ಯಾಂಡ್ ಆಟಗಾರ್ತಿ ಮುಂದಿನ ಸುತ್ತಿನಲ್ಲಿ ರಶ್ಯದ 19ನೇ ಶ್ರೇಯಾಂಕದ ಲಿಯುಡ್ಮಿಲಾ ಸ್ಯಾಮ್ಸೊನೊವಾ ಅವರ ಸವಾಲನ್ನು ಎದುರಿಸಲಿದ್ದಾರೆ. ಸ್ಯಾಮ್ಸೊನೊವಾ ಸ್ಪೇನ್ನ ಜೆಸ್ಸಿಕಾ ಬೌಝಾಸ್ ಮನೆರೊರನ್ನು 7-5, 7-5 ನೇರ ಸೆಟ್ ಗಳ ಅಂತರದಿಂದ ಸೋಲಿಸಿದರು.
ರಶ್ಯದ 18ರ ವಯಸ್ಸಿನ ಆಟಗಾರ್ತಿ ಮಿರ್ರಾ ಆಂಡ್ರೀವಾ ವಿಂಬಲ್ಡನ್ ಟೂರ್ನಿಯಲ್ಲಿ ಇದೇ ಮೊದಲ ಬಾರಿ ಕ್ವಾರ್ಟರ್ ಫೈನಲ್ ಗೆ ತಲುಪಿದರು. 7ನೇ ಶ್ರೇಯಾಂಕದ ಆಂಡ್ರೀವಾ ಪ್ರಿ-ಕ್ವಾರ್ಟರ್ ಫೈನಲ್ ನಲ್ಲಿ ಅಮೆರಿಕದ 10ನೇ ಶ್ರೇಯಂಕದ ಎಮ್ಮಾ ನವಾರ್ರೊರನ್ನು 6-2, 6-3 ನೇರ ಸೆಟ್ ಗಳ ಅಂತರದಿಂದ ಮಣಿಸಿದರು. ನವಾರ್ರೊ ಶನಿವಾರ ಹಾಲಿ ಚಾಂಪಿಯನ್ ಬಾರ್ಬೊರ ಕ್ರೆಜ್ಸಿಕೋವಾರನ್ನು ಮಣಿಸಿ ಗಮನ ಸೆಳೆದಿದ್ದರು.
ಆಂಡ್ರೀವಾ ಮುಂದಿನ ಸುತ್ತಿನಲ್ಲಿ ಸ್ವಿಸ್ ನ ಮಾಜಿ ಒಲಿಂಪಿಕ್ಸ್ ಚಾಂಪಿಯನ್ ಬೆಲಿಂಡಾ ಬೆನ್ಸಿಕ್ರನ್ನು ಎದುರಿಸಲಿದ್ದಾರೆ. ಬೆನ್ಸಿಕ್ ರಶ್ಯದ 17ನೇ ರ್ಯಾಂಕಿನ ಎಕಟೆರಿನಾ ಅಲೆಕ್ಸಾಂಡ್ರೋವಾರನ್ನು 7-6(7/4), 6-4 ಸೆಟ್ ಗಳ ಅಂತರದಿಂದ ಮಣಿಸಿದ್ದಾರೆ.







