ವಿಂಬಲ್ಡನ್ ಟೆನಿಸ್ ಚಾಂಪಿಯನ್ ಶಿಪ್ | 14ನೇ ಬಾರಿ ಜೊಕೊವಿಕ್ ಸೆಮಿ ಫೈನಲ್ ಗೆ, ಸಿನ್ನರ್ ಎದುರಾಳಿ

ನೊವಾಕ್ ಜೊಕೊವಿಕ್ | PC : PTI
ಲಂಡನ್: ಸರ್ಬಿಯದ ಸೂಪರ್ ಸ್ಟಾರ್ ನೊವಾಕ್ ಜೊಕೊವಿಕ್ ಇಟಲಿಯ ಫ್ಲಾವಿಯೊ ಕೊಬೊಲ್ಲಿ ಅವರನ್ನು ನಾಲ್ಕು ಸೆಟ್ ಗಳ ಅಂತರದಿಂದ ಮಣಿಸುವ ಮೂಲಕ 14ನೇ ಬಾರಿ ವಿಂಬಲ್ಡನ್ ಚಾಂಪಿಯನ್ ಶಿಪ್ ನಲ್ಲಿ ಸೆಮಿ ಫೈನಲ್ ಗೆ ತಲುಪುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.
ಬುಧವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 38ರ ವಯಸ್ಸಿನ ಜೊಕೊವಿಕ್ ಅವರು ಕೊಬೊಲ್ಲಿ ಅವರನ್ನು 6-7(6/8), 6-2, 7-5, 6-4 ಸೆಟ್ ಗಳ ಅಂತರದಿಂದ ಮಣಿಸಿದರು. ಐತಿಹಾಸಿಕ 25ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆಲ್ಲುವ ವಿಶ್ವಾಸವನ್ನು ಜೀವಂತವಾಗಿರಿಸಿದ್ದಾರೆ.
7 ಬಾರಿ ವಿಂಬಲ್ಡನ್ ಪ್ರಶಸ್ತಿ ಜಯಿಸಿರುವ ಜೊಕೊವಿಕ್ 23ರ ಹರೆಯದ ಕೊಬೊಲ್ಲಿ ವಿರುದ್ಧ ತನ್ನ ಅನುಭವವನ್ನು ತೋರ್ಪಡಿಸಿದರು. ಮೊದಲ ಸೆಟ್ಟನ್ನು ಟೈ-ಬ್ರೇಕರ್ ನಲ್ಲಿ ಸೋತ ಹೊರತಾಗಿಯೂ ಮುಂದಿನ 3 ಸೆಟ್ ಗಳಲ್ಲಿ ಮೇಲುಗೈ ಸಾಧಿಸಿದರು. 22ನೇ ಶ್ರೇಯಾಂಕದ ಕೊಬೊಲ್ಲಿಗೆ ಮತ್ತೆ ಮರು ಹೋರಾಟ ನೀಡಲು ಸಾಧ್ಯವಾಗಲಿಲ್ಲ.
‘‘ನನಗೆ ಈಗ 38 ವರ್ಷ ವಯಸ್ಸಾಗಿದ್ದರೂ ವಿಂಬಲ್ಡನ್ ಟೂರ್ನಿಯ ಅಂತಿಮ ಹಂತದಲ್ಲಿ ಆಡಲು ಸಾಧ್ಯವಾಗಿರುವುದಕ್ಕೆ ನನಗೆ ತುಂಬಾ ಸಂತೋಷವಾಗುತ್ತಿದೆ. ನನಗೆ ಬೆಂಬಲಿಸಿದ ನನ್ನ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸುವೆ. ಇದು ನನಗೆ ನಿಜವಾಗಿಯೂ ಉತ್ತೇಜನಕಾರಿಯಾಗಿದೆ’’ಎಂದು ಪಂದ್ಯದ ನಂತರ ಜೊಕೊವಿಕ್ ಹೇಳಿದ್ದಾರೆ.
ಜೊಕೊವಿಕ್ ಪಂದ್ಯ ಆಡುತ್ತಿದ್ದಾಗ ಜಾರಿಬಿದ್ದು ಗಾಯದ ಭೀತಿಗೆ ಒಳಗಾದರು. ನನಗೆ ಯಾವುದೇ ರೀತಿಯ ಗಾಯದ ಭೀತಿ ಉುಂಟಾಗಿಲ್ಲ ಎಂದು ಅವರು ನಂತರ ಸ್ಪಷ್ಟಪಡಿಸಿದರು.
‘‘ಹುಲ್ಲುಹಾಸಿನ ಟೆನಿಸ್ ಅಂಗಣದಲ್ಲಿ ಆಡುವಾಗ ಕಾಲು ಜಾರುವುದು ಸಹಜ. ನನ್ನ ಫಿಸಿಯೋ ಜೊತೆ ಈ ಕುರಿತು ಚರ್ಚಿಸುವೆ. ಇನ್ನೆರಡು ದಿನಗಳಲ್ಲಿ ಎಲ್ಲವೂ ಸರಿಯಾಗುವ ವಿಶ್ವಾಸದಲ್ಲಿದ್ದೇನೆ’’ ಎಂದು ಜೊಕೊವಿಕ್ ವಿವರಿಸಿದರು.
ವಿಂಬಲ್ಡನ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ 14ನೇ ಬಾರಿ ಸೆಮಿ ಫೈನಲ್ನಲ್ಲಿ ಕಾಣಿಸಿಕೊಂಡಿರುವ ಜೊಕೊವಿಕ್ ಅವರು ಸ್ವಿಸ್ ದಂತಕತೆ ರೋಜರ್ ಫೆಡರರ್(13 ಬಾರಿ)ದಾಖಲೆಯನ್ನು ಮುರಿದರು.
ಗ್ರ್ಯಾನ್ ಸ್ಲಾಮ್ ಟೂರ್ನಿಯಲ್ಲಿ 52ನೇ ಬಾರಿ ಸೆಮಿ ಫೈನಲ್ ಗೆ ತಲುಪಿ ಪುರುಷರ ಟೆನಿಸ್ ನಲ್ಲಿ ತನ್ನದೇ ದಾಖಲೆಯನ್ನು ಉತ್ತಮಪಡಿಸಿಕೊಂಡರು., ಪುರುಷರ ಸಿಂಗಲ್ಸ್ನಲ್ಲಿ ಈ ಎರಡು ಸಾರ್ವಕಾಲಿಕ ದಾಖಲೆಗಳಾಗಿವೆ.
ಜೊಕೊವಿಕ್ ಅವರು ವಿಂಬಲ್ಡನ್ ಟೂರ್ನಿಯಲ್ಲಿ 102ನೇ ಗೆಲುವು ದಾಖಲಿಸಿದರು. ಈ ವರ್ಷದ ಗೆಲುವಿನ ದಾಖಲೆಯನ್ನು 26-8ಕ್ಕೆ ಉತ್ತಮಪಡಿಸಿಕೊಂಡರು.
ಜೊಕೊವಿಕ್ ಶನಿವಾರ ನಡೆಯಲಿರುವ ಸೆಮಿ ಫೈನಲ್ ಪಂದ್ಯದಲ್ಲಿ ವಿಶ್ವದ ನಂ.1 ಆಟಗಾರ ಜನ್ನಿಕ್ ಸಿನ್ನರ್ ಸವಾಲನ್ನು ಎದುರಿಸಲಿದ್ದಾರೆ. ಮಾರ್ಗರೆಟ್ ಕೋರ್ಟ್ ಅವರ ಗ್ರ್ಯಾನ್ ಸ್ಲಾಮ್ ಸಿಂಗಲ್ಸ್ ಪ್ರಶಸ್ತಿಗಳ ಸಾರ್ವಕಾಲಿಕ ದಾಖಲೆ (25 ಪ್ರಶಸ್ತಿ) ಮುರಿಯಲು ಕೇವಲ 2 ಪಂದ್ಯ ಗೆಲ್ಲಬೇಕಾಗಿದೆ. ಜೊಕೊವಿಕ್ 24 ಬಾರಿ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಗಳನ್ನು ಜಯಿಸಿದ್ದಾರೆ.
ಜೊಕೊವಿಕ್ ವಿಂಬಲ್ಡನ್ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾದರೆ, ರೋಜರ್ ಫೆಡರರ್(8 ಪ್ರಶಸ್ತಿ)ಅವರ ದಾಖಲೆಯನ್ನು ಸರಿಗಟ್ಟಲಿದ್ದಾರೆ. ಪಂದ್ಯಾವಳಿಯ ಮುಕ್ತ ಯುಗದ ಇತಿಹಾಸದಲ್ಲಿ ಚಾಂಪಿಯನ್ಪಟ್ಟಕ್ಕೇರಿದ ಹಿರಿಯ ಆಟಗಾರ ಎನಿಸಿಕೊಳ್ಳಲಿದ್ದಾರೆ.







