ವಿಂಡೀಸ್ ಗೆ 8 ರನ್ ಗಳ ರೋಮಾಂಚಕ ಜಯ
2ನೇ ಇನಿಂಗ್ಸ್ ನಲ್ಲಿ 7 ವಿಕೆಟ್ ಉರುಳಿಸಿದ ಶಮರ್ ಜೋಸೆಫ್

ವೆಸ್ಟ್ ಇಂಡೀಸ್ ತಂಡ | Photo: X
ಬ್ರಿಸ್ಬೇನ್ (ಆಸ್ಟ್ರೇಲಿಯ): ಪ್ರವಾಸಿ ವೆಸ್ಟ್ ಇಂಡೀಸ್ ತಂಡವು ಎರಡನೇ ಹಾಗೂ ಕೊನೆಯ ಟೆಸ್ಟ್ ನಲ್ಲಿ ರವಿವಾರ ವೇಗಿ ಶಮರ್ ಜೋಸೆಫ್ರ ಅಮೋಘ ಬೌಲಿಂಗ್ ನೆರವಿನಿಂದ ಆಸ್ಟ್ರೇಲಿಯವನ್ನು 8 ರನ್ ಗಳಿಂದ ರೋಮಾಂಚಕಾರಿಯಾಗಿ ಸೋಲಿಸಿದೆ.
ಇದರೊಂದಿಗೆ ಎರಡು ಪಂದ್ಯಗಳ ಸರಣಿಯು 1-1ರಿಂದ ಸಮಬಲದಲ್ಲಿ ಮುಕ್ತಾಯಗೊಂಡಿದೆ.
ಶನಿವಾರ ಮಿಚೆಲ್ ಸ್ಟಾರ್ಕ್ ಎಸೆದ ಯಾರ್ಕರ್ ಗೆ ಅವರ ಕಾಲ ಬೆರಳಿಗೆ ಬಡಿದಿತ್ತು. ಅವರು ಗಾಯಗೊಂಡು ನಿವೃತ್ತಿಯಾಗಿದ್ದರು. ಅವರನ್ನು ವೈದ್ಯಕೀಯ ತಪಾಸಣೆಗೂ ಒಳಪಡಿಸಲಾಗಿತ್ತು.
ಬ್ರಿಸ್ಬೇನ್ನ ಗಾಬಾ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದ ನಾಲ್ಕನೇ ದಿನವಾದ ರವಿವಾರ, ಪಂದ್ಯವನ್ನು ಗೆಲ್ಲಲು ಆಸ್ಟ್ರೇಲಿಯ ತನ್ನ ಎರಡನೇ ಇನಿಂಗ್ಸ್ನಲ್ಲಿ 216 ರನ್ಗಳನ್ನು ಗಳಿಸಬೇಕಾಗಿತ್ತು.
ಆದರೆ, ಗಾಯಾಳು ಶಮರ್ ಜೋಸೆಫ್ರ ಅಸಾಧಾರಣ ಬೌಲಿಂಗ್ ನೆರವಿನಿಂದ ಆಸ್ಟ್ರೇಲಿಯ ತನ್ನ ಎರಡನೇ ಇನಿಂಗ್ಸನ್ನು 207 ರನ್ಗಳಿಗೆ ಮುಕ್ತಾಯಗೊಳಿಸಿತು. ಶಮರ್ 68 ರನ್ಗಳನ್ನು ನೀಡಿ 7 ವಿಕೆಟ್ಗಳನ್ನು ಉರುಳಿಸಿದರು.
ಶಮರ್ರನ್ನು ಪಂದ್ಯಶ್ರೇಷ್ಠ ಮತ್ತು ಸರಣಿಶ್ರೇಷ್ಠ ಪ್ರಶಸ್ತಿಗಳಿಂದ ಪುರಸ್ಕರಿಸಲಾಯಿತು.
ಇದು 1997ರ ಬಳಿಕ, ಆಸ್ಟ್ರೇಲಿಯದಲ್ಲಿ ವೆಸ್ಟ್ ಇಂಡೀಸ್ನ ಮೊದಲ ಟೆಸ್ಟ್ ವಿಜಯವಾಗಿದೆ.
ನಾಲ್ಕನೇ ದಿನದ ಆಟ ಆರಂಭಗೊಂಡಾಗ ಆಸ್ಟ್ರೇಲಿಯ ಪಂದ್ಯ ಗೆಲ್ಲುವ ಸ್ಪಷ್ಟ ಫೇವರೈಟ್ ಆಗಿತ್ತು. ಅದು ಮುನ್ನಾ ದಿನದ ಮೊತ್ತ ಎರಡು ವಿಕೆಟ್ಗಳ ನಷ್ಟಕ್ಕೆ 60 ರನ್ ಇದ್ದಲ್ಲಿಂದ ತನ್ನ ದ್ವಿತೀಯ ಇನಿಂಗ್ಸನ್ನು ಮುಂದುವರಿಸಿತು. ಆ ಹಂತದಲ್ಲಿ ಪಂದ್ಯವನ್ನು ಗೆಲ್ಲಲು ಅದಕ್ಕೆ 156 ರನ್ಗಳ ಅಗತ್ಯವಿತ್ತು ಹಾಗೂ ಸ್ಟೀವ್ ಸ್ಮಿತ್ ಮತ್ತು ಕ್ಯಾಮರೂನ್ ಗ್ರೀನ್ ಕ್ರೀಸ್ನಲ್ಲಿದ್ದರು.
ವೆಸ್ಟ್ ಇಂಡೀಸ್ನ ಆರಂಭಿಕ ಬೌಲರ್ಗಳಾದ ಕೇಮರ್ ರೋಶ್ ಮತ್ತು ಅಲ್ಝಾರಿ ಜೋಸೆಫ್ ಹೆಚ್ಚಿನ ಪರಿಣಾಮವನ್ನು ಬೀರಿರಲಿಲ್ಲ. ಆಗ ನಾಯಕ ಕ್ರೇಗ್ ಬ್ರಾತ್ವೇಟ್, ಜೋಸೆಫ್ರನ್ನು ಬೌಲಿಂಗ್ಗೆ ಇಳಿಸಿದರು. ಅದು ತಕ್ಷಣವೇ ಫಲಕೊಟ್ಟಿತು. ಅವರು ವಿಕೆಟ್ಗಳನ್ನು ಉರುಳಿಸುತ್ತಾ ಹೋದಂತೆ ವೆಸ್ಟ್ ಇಂಡೀಸ್ನ ವಿಜಯ ಭರವಸೆಯೂ ಹೆಚ್ಚಿತು. ಅವರು ಗ್ರೀನ್ ಮತ್ತು ಟ್ರಾವಿಸ್ ಹೆಡ್ರ ವಿಕೆಟ್ಗಳನ್ನು ಬೆನ್ನು ಬೆನ್ನಿಗೆ ಪಡೆದರು. ಬಳಿಕ ಮೊದಲ ಅವಧಿಯ ಆಟದಲ್ಲಿ ಮಿಚೆಲ್ ಮಾರ್ಶ್, ಮಿಚೆಲ್ ಸ್ಟಾರ್ಕ್, ಅಲೆಕ್ಸ್ ಕ್ಯಾರಿ ಮತ್ತು ಪ್ಯಾಟ್ ಕಮಿನ್ಸ್ರ ವಿಕೆಟ್ಗಳನ್ನು ಪಡೆದರು.
ಜೋಸ್ ಹ್ಯಾಝಲ್ವುಡ್ರನ್ನು ಕ್ಲೀನ್ಬೌಲ್ಡ್ ಮಾಡುವ ಮೂಲಕ ಅವರು ಪಂದ್ಯವನ್ನು ಮುಗಿಸಿದರು.
ಆಸ್ಟ್ರೇಲಿಯದ ಎರಡನೇ ಇನಿಂಗ್ಸ್ಗೆ 91 ರನ್ಗಳ ದೇಣಿಗೆ ನೀಡಿದ ಆರಂಭಿಕ ಬ್ಯಾಟರ್ ಸ್ಟಿವನ್ ಸ್ಮಿತ್ ಅಜೇಯವಾಗಿ ಉಳಿದರು. ಅವರ ಧೀರೋದಾತ್ತ ಹೋರಾಟ ವಿಫಲವಾಯಿತು. ಕ್ಯಾಮರೂನ್ ಗ್ರೀನ್ 42 ರನ್ಗಳನ್ನು ಗಳಿಸಿದರು.
It's all over!!!
— cricket.com.au (@cricketcomau) January 28, 2024
Shamar Joseph takes SEVEN #AUSvWI pic.twitter.com/fsGR6cjvkj







