ಭಾರತವನ್ನು ಸೋಲಿಸುವುದಕ್ಕಿಂತ ಚಾಂಪಿಯನ್ಸ್ ಟ್ರೋಫಿ ಗೆಲ್ಲುವುದು ಮುಖ್ಯ: ಪಾಕ್ ಉಪನಾಯಕ

PC: x.com/toisports
ಹೊಸದಿಲ್ಲಿ: ಪ್ರಮುಖ ಐಸಿಸಿ ಟೂರ್ನಿಯಲ್ಲಿ ಕೇವಲ ಬದ್ಧ ಎದುರಾಳಿ ಭಾರತವನ್ನು ಸೋಲಿಸುವುದಕ್ಕಿಂತ ಚಾಂಪಿಯನ್ಸ್ ಟ್ರೋಫಿ ಗೆಲ್ಲುವುದು ಮಖ್ಯ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಉಪನಾಯಕ ಸಲ್ಮಾನ್ ಅಲಿ ಅಘಾ ಹೇಳಿದ್ದಾರೆ. ಪಾಕಿಸ್ತಾನ ಟೂರ್ನಿ ಗೆಲ್ಲುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
"ಐಸಿಸಿ ಟೂರ್ನಿಯ ಆತಿಥ್ಯವನ್ನು ಪಾಕಿಸ್ತಾನ ವಹಿಸಿರುವುದರಿಂದ ಚಾಂಪಿಯನ್ಸ್ ಟ್ರೋಫಿಗಾಗಿ ನಾನು ಕಾತರದಿಂದ ಕಾಯುತ್ತಿದ್ದೇನೆ. ಲಾಹೋರ್ ಮೂಲದವನಾಗಿ ಹುಟ್ಟೂರಿನಲ್ಲಿ ಟ್ರೋಫಿ ಎತ್ತುವ ನನ್ನ ಕನಸು ನನಸಾಗಬೇಕು. ಪಾಕಿಸ್ತಾನ ತಂಡಕ್ಕೆ ಅದನ್ನು ಗೆಲ್ಲುವ ಎಲ್ಲ ಸಾಮರ್ಥ್ಯ ಇದೆ" ಎಂದು ಪಿಸಿಬಿ ಪಾಡ್ ಕಾಸ್ಟ್ ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ.
ಟೂರ್ನಿಯಲ್ಲಿ ಪಾಕಿಸ್ತಾನದ ಅಭಿಯಾನ ಫೆಬ್ರುವರಿ 19ರಂದು ಆರಂಭವಾಗಲಿದ್ದು, ಈ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಆ ಬಳಿಕ ಫೆಬ್ರವರಿ 23ರಂದು ದುಬೈನಲ್ಲಿ ಭಾರತ ವಿರುದ್ಧ ಸೆಣೆಸಲಿದೆ. ಭಾರತ ವಿರುದ್ಧದ ಬಹುನಿರೀಕ್ಷಿತ ಕಾದಾಟದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಅವರು, ತೀವ್ರ ಸೆಣೆಸಾಟದ ಸುತ್ತ ವಿಶಿಷ್ಟ ವಾತಾವರಣ ನಿರ್ಮಾಣವಾಗಿದೆ. ಆದರೆ ನಮ್ಮ ದೊಡ್ಡ ಗುರಿ ಟ್ರೋಫಿಯನ್ನು ಗೆಲ್ಲುವುದು ಎಂದು ಸ್ಪಷ್ಟಪಡಿಸಿದರು.
ಭಾರತ ವಿರುದ್ಧದ ಪಂದ್ಯವನ್ನು ಗೆಲ್ಲಲು ಕೂಡಾ ಪಾಕಿಸ್ತಾನ ಎಲ್ಲ ಪ್ರಯತ್ನಗಳನ್ನು ನಡೆಸಲಿದೆ. "ಭಾರತ ವಿರುದ್ಧದ ಪಂದ್ಯ ಗೆಲ್ಲಬೇಕು ಎನ್ನುವುದು ನಮ್ಮೆಲ್ಲರ ಬಯಕೆ. ಅದಕ್ಕಾಗಿ ನಾವು ಪ್ರಯತ್ನಿಸುತ್ತೇವೆ. ಭಾರತದ ವಿರುದ್ಧ ಅತ್ಯುತ್ತಮ ಸಾಧನೆ ಮಾಡಲು ಕೂಡಾ ನಾನು ಪ್ರಯತ್ನಿಸುತ್ಥೇನೆ" ಎಂದರು.







